ಮೂರು ದಿನಗಳ ಕರಾವಳಿ ಭೇಟಿಗಾಗಿ ಮಂಗಳೂರಿಗೆ ಆಗಮಿಸಿದ ಅಮಿತ್ ಶಾ
ಮಂಗಳೂರು: ಕರಾವಳಿಯಲ್ಲಿ ಚುನಾವಣಾ ಪೂರ್ವಸಿದ್ಧತೆ ಅಂಗವಾಗಿ ಮೂರು ದಿನಗಳ ಪ್ರವಾಸಕ್ಕಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೋಮವಾರ ರಾತ್ರಿ ಮಂಗಳೂರಿಗೆ ಆಗಮಿಸಿದರು.
ರಾತ್ರಿ 7.40ಕ್ಕೆ ವಿಶೇಷ ವಿಮಾನ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಶಾ ಅವರನ್ನು ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಉಡುಪಿ ಜಿಲ್ಲಾಧ್ಯಕ್ಷ ಕೆ. ಉದಯ ಕುಮಾರ್ ಶೆಟ್ಟಿ, ಮಂಗಳೂರು ದಕ್ಷಿಣ ಬ್ಲಾಕ್ ಅಧ್ಯಕ್ಷ ವೇದವ್ಯಾಸ ಕಾಮತ್, ಮೂಡುಬಿದಿರೆ ಕ್ಷೇತ್ರ ಅಧ್ಯಕ್ಷ ಈಶ್ವರ ಕಟೀಲ್, ಉತ್ತರ ಬ್ಲಾಕ್ ಅಧ್ಯಕ್ಷ ಡಾ.ವೈ.ಭರತ್ ಶೆಟ್ಟಿ ಮತ್ತಿತರರು ಸ್ವಾಗತಿಸಿದರು.
ಅಮಿತ್ ಶಾ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದ ಹೊರಗಡೆ ಸಾವಿರಾರು ಮಂದಿ ಬಿಜೆಪಿ ಕಾರ್ಯಕರ್ತರು ಸೇರಿದ್ದರು. ಮೊದಲು ಅಮಿತ್ ಶಾ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮ ನಿಗದಿಯಾಗಿತ್ತು ಆದರೆ ನಿಗದಿತ ಸಮಯಕ್ಕಿಂತ ಎರಡು ಗಂಟೆ ವಿಳಂಬವಾಗಿ ಆಗಮಿಸಿದ್ದರಿಂದ ಕೇವಲ ಕಾರ್ಯಕರ್ತರತ್ತ ಕೈಬಿಸಿದ ಶಾ ಅಲ್ಲಿಂದ ಸುಬ್ರಹ್ಮಣ್ಯಕ್ಕೆ ತೆರಳಿದರು.