ಮೂಲಭೂತ ಕರ್ತವ್ಯಗಳನ್ನು ಪಾಲಿಸಿ- ಜಿಲ್ಲಾ ನ್ಯಾಯಾಧೀಶ ವೆಂಕಟೇಶ್ ನಾಯ್ಕ್

Spread the love

ಮೂಲಭೂತ ಕರ್ತವ್ಯಗಳನ್ನು ಪಾಲಿಸಿ- ಜಿಲ್ಲಾ ನ್ಯಾಯಾಧೀಶ  ವೆಂಕಟೇಶ್ ನಾಯ್ಕ್

ಉಡುಪಿ: ದೇಶದ ನಾಗರೀಕರು ಸಂವಿಧಾನ ತಮಗೆ ನೀಡಿರುವ ಮೂಲಭೂತ ಹಕ್ಕುಗಳ ಜೊತೆಗೆ ತಮಗೆ ನೀಡಿರುವ ಕರ್ತವ್ಯಗಳನ್ನೂ ಸಹ ಪಾಲಿಸುವಂತೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಟಿ ತಿಳಿಸಿದ್ದಾರೆ.

ಅವರು ಗುರುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಅವರ ಸಹಯೋಗದಲ್ಲಿ ನಡೆದ ಮೂಲಭೂತ ಕರ್ತವ್ಯಗಳು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ, ಅವುಗಳ ರಕ್ಷಣೆಗೆ ನ್ಯಾಯಾಲಯಗಳ ಮೊರೆ ಹೋಗುವ ನಾಗರೀಕರು, ಸಂವಿಧಾನ ತಮಗೆ ಹಕ್ಕುಗಳನ್ನು ಮಾತ್ರ ನೀಡಿದೆ ಎಂದು ತಿಳಿದಿದ್ದಾರೆ ಆದರೆ ಹಕ್ಕುಗಳ ಜೊತೆ ನೀಡಿರುವ ಕರ್ತವ್ಯಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು, ಪ್ರತಿಯೊಂದು ಹಕ್ಕಿನೊಂದಿಗೆ ಕರ್ತವ್ಯ ಸಹಾ ಸೇರಿದೆ, ಈ ಕರ್ತವ್ಯಗಳ ಬಗ್ಗೆ ಅರಿವು ಹೊಂದಿರಬೇಕು, ಹಕ್ಕುಗಳು ಮಾತ್ರ ಬೇಕು, ಕರ್ತವ್ಯಗಳು ಬೇಡ ಎನ್ನುವಂತಿಲ್ಲ, ಪ್ರತಿಯೊಬ್ಬ ಪ್ರಜೆಯೂ ದೇಶದ ಸಂವಿಧಾನಕ್ಕೆ ಬದ್ದನಾಗಿದ್ದು, ತಮಗೆ ನೀಡಿರುವ ಹಕ್ಕುಗಳ ಚಲಾವಣೆ ಜೊತೆಯಲ್ಲಿ, ಮೂಲಭೂತ ಕರ್ತವ್ಯಗಳನ್ನೂ ಪಾಲನೆ ಮಾಡಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕು ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ತವ್ಯಗಳ ಸಂಬಂಧ ನ್ಯಾಯಾಧೀಶರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಅವರು ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡುವುದು, ಸಕಾಲದಲ್ಲಿ ತೆರಿಗೆ ಪಾವತಿಸುವುದು, ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಬಂದು ಸಾಕ್ಷಿ ಹೇಳುವುದು, ಅಪಘಾತದಲ್ಲಿ ಗಾಯಗೊಂಡವರನ್ನು ರಕ್ಷಿಸುವುದು ಪ್ರಬುದ್ಧ ನಾಗರಿಕರ ಕರ್ತವ್ಯಗಳಾಗಿವೆ. ನಾಗರೀಕರು ತಮ್ಮ ಕರ್ತವ್ಯಗಳನ್ನು ಪಾಲಿಸುವುದರ ಮೂಲಕ ಸಮಾಜ ಮತ್ತು ದೇಶದ ಅಭಿವೃದ್ದಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಮೂಲಭೂತ ಕರ್ತವ್ಯಗಳ ಕುರಿತು ಉಪನ್ಯಾಸ ನೀಡಿದ ವಕೀಲರಾದ ವಾಣಿ ವಿ.ರಾವ್ ಮಾತನಾಡಿ, ಸಂವಿಧಾನದಲ್ಲಿ ನಾಗರೀಕರಿಗೆ ಇರುವ ಮೂಲಭೂತ ಕರ್ತವ್ಯಗಳಂತೆ, ಸರಕಾರಗಳೂ ಸಹ ಮೂಲಭೂತ ಕರ್ತವ್ಯ ಪಾಲನೆ ಮಾಡಬೇಕಿರುವುದರಿಂದ, ತನ್ನ ಪ್ರಜೆಗಳ ಆರೋಗ್ಯ ರಕ್ಷಿಸುವ ಸಲುವಾಗಿ, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧ, ಹೆಲ್ಮೆಟ್ ಕಡ್ಡಾಯ ಹಲವು ಜನಪರ ಕಾರ್ಯಕ್ರಮಗಳನ್ನು ರೂಪಿಸಿವೆ, ಮತ್ತೊಬ್ಬರ ಹಕ್ಕುಗಳನ್ನು ಗೌರವಿಸುವುದೂ ಸಹ ನಾಗರೀಕರ ಕರ್ತವ್ಯ, ಆದ್ದರಿಂದ ಸಾರ್ವಜನಿಕರು ತಮ್ಮ ಕರ್ತವ್ಯಗಳ ಬಗ್ಗೆ ಅರಿವು ಹೊಂದಿರಬೇಕು ಎಂದು ತಿಳಿಸಿದರು.

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್.ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಉಪನ್ಯಾಸಕ ದುಗ್ಗಪ್ಪ ಕಜೆಕಾರು ವಂದಿಸಿದರು. ಉಪನ್ಯಾಸಕ ರಾಧಾಕೃಷ್ಣ ನಿರೂಪಿಸಿದರು.

ಉಪನ್ಯಾಸಕರಾದ ಡಾ.ನಿಕೇತನ, ಡಾ. ಗೋಪಾಲಕೃಷ್ಣ ಗಾಂವ್ಕರ್, ಡಾ. ಜಯಪ್ರಕಾಶ್ ಶೆಟ್ಟಿ, ಪ್ರೊ.ಮಂಜುನಾಥ್, ಪ್ರೊ.ರಾಘವ, ಡಾ.ಹೆಚ್.ಕೆ. ವೆಂಕಟೇಶ್, ಪ್ರೊ.ಟಿ.ಜಿ.ಭಟ್, ಪ್ರೊ. ಸುರೇಶ್ ರೈ, ರಾಮಚಂದ್ರ ಪಾಟ್ಕರ್ , ವಿನೀತ ತಂತ್ರಿ, ಗೀತಾ ಉಪಸ್ಥಿತರಿದ್ದರು.


Spread the love