ಮೂಲ್ಕಿಯಲ್ಲಿ ಈಜಲು ತೆರಳಿದ ಮೂವರು ಗೆಳೆಯರು ನೀರುಪಾಲು
ಮೂಲ್ಕಿ: ಇಲ್ಲಿಗೆ ಸಮೀಪದ ಅತಿಕಾರಿಬೆಟ್ಟು ಗ್ರಾಮದಲ್ಲಿ ಶಾಂಭವಿ ಹೊಳೆಯಲ್ಲಿ ಈಜಾಡಲು ಹೋಗಿದ್ದ 11 ಮಂದಿಯ ಪೈಕಿ ಮುಳುಗುತ್ತಿದ್ದ ಓರ್ವ ಗೆಳೆಯನನ್ನು ರಕ್ಷಿಸಲು ಹೋಗಿ ಮೂವರು ಯುವಕರು ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಮೃತ ದುರ್ದೈವಿಗಳನ್ನು ಅತಿಕಾರಿಬೆಟ್ಟು ಗ್ರಾಮದ ಸಸಿತೋಟ ವಾಸಿಗಳಾದ ಶಿವರಾಮ ಅಂಚನ್-ನಳಿನಿ ದಂಪತಿಯ ಪುತ್ರ ಮಹೇಶ್ ಅಂಚನ್(28),ಕೇರಳ ಕಾಸರಗೋಡು ಮಧೂರು ದೇವಳ ಸಮೀಪದ ಕೋಡಿಮಜಲ್ ಹೌಸ್‍ನ ಬಾಲಕೃಷ್ಣ ಗಟ್ಟಿ ಎಂಬವರ ಪುತ್ರ ಅಕ್ಷತ್ ಗಟ್ಟಿ(26) ಮತ್ತು ಸೋಮೇಶ್ವರ ಗ್ರಾಮ ವ್ಯಾಪ್ತಿಯ ಜನಾರ್ಧನ ಪೂಜಾರಿ ಎಂಬವರ ಪುತ್ರ ಕಿಶೋರ್ ಪೂಜಾರಿ(25) ಎಂದು ಗುರುತಿಸಲಾಗಿದೆ.
ಮಂಗಳೂರಿನ ಗ್ರಾಫಿಕ್ ಸೆಂಟರ್ ಒಂದರಲ್ಲಿ ಉದ್ಯೋಗ ಮಾಡುತ್ತಿದ್ದ ಗೆಳೆಯರು ತಮ್ಮ ಇತರ ಗೆಳೆಯರೊಂದಿಗೆ ವೀಕೆಂಡ್ ರಜಾದ ಮಜಾ ಅನುಭವಿಸಲು ಅತಿಕಾರಿಬೆಟ್ಟುವಿನ ಶ್ರೀ ವಿಠೋಬ ಭಜನಾ ಮಂದಿರ ಪಕ್ಕದ ಗೆಳೆಯ ಮಹೇಶ್ ಅಂಚನ್ ಮನೆಯಲ್ಲಿ ಭಾನುವಾರ ಒಟ್ಟು ಸೇರಿ ಮಧ್ಯಾಹ್ನ ಊಟ ಮಾಡಿದ್ದರು. ಭೋಜನ ಸೇವಿಸಿದ ಬಳಿಕ ಪಕ್ಕದ ಶಾಂಭವಿ ಹೊಳೆಯಲ್ಲಿ ಈಜಾಡಲು ತೆರಳಿದ್ದರು.ಈ ಪೈಕಿ ಕೆಲವರ ಬಳಿ ಲೈಫ್ ಜಾಕೆಟ್ ಇತ್ತು.
ಈಜಾಡುತ್ತಿದ್ದ ಸಂದರ್ಭ ಅತಿಕಾರಿಬೆಟ್ಟುವಿನ ಅಕ್ಷತ್ ಎಂಬಾತ ನೀರಿನಲ್ಲಿ ಮುಳುಗಲಾರಂಭಿಸಿದಾಗ ಮಹೇಶ್,ಕಿಶೋರ್ ಮತ್ತು ಅಕ್ಷತ್ ಆತನನ್ನು ಬಚಾಯಿಸಲು ಆಳ ನೀರಿಗೆ ಇಳಿದಿದ್ದರು. ಈ ಸಂದರ್ಭ ನೀರಿನ ಆಳ ತಿಳಿಯದೆ ಮೂವರೂ ಹೊಳೆ ಪಾಲಾಗಿದ್ದಾರೆ. ಕೂಡಲೇ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ನೀರುಪಾಲಾದ ಗೆಳೆಯರ ಶವಗಳಿಗಾಗಿ ಹುಡುಕಾಟ ನಡೆಸಲಾಯಿತು. ಹಲವು ಸಮಯದ ಹುಡುಕಾಟದ ಬಳಿಕ ಮೂವರ ಶವಗಳು ಪತ್ತೆಯಾಗಿವೆ.
ಸ್ಥಳೀಯ ಈಜುಗಾರರಾದ ಅಶೋಕ, ಜಯಕುಮಾರ್, ರತ್ನಾಕರ್, ಮೈಕಲ್, ದಯಾನಂದ, ಸುನಿಲ್, ಉಮೇಶ್, ಮೆಲ್ವಿನ್, ಪ್ರವೀಣ್, ಗಣೇಶ್ ಸನಿಲ್, ಸೋಮನಾಥ ಮತ್ತಿತರ ಗೆಳೆಯರು ತೀವ್ರ ಹುಡುಕಾಟದ ಬಳಿಕ ಅವರು ಮುಳುಗಿದ್ದ ಬಳಿಯೇ ಮೂವರ ಶವಗಳೂ ಪತ್ತೆಯಾಗಿವೆ.
ವಿಶೇಷ ತಹಶೀಲ್ದಾರ್ ಕಿಶೋರ್ ಕುಮಾರ್ ,ಮೂಲ್ಕಿ ಪೋಲೀಸ್ ನಿರೀಕ್ಷಕರಾದ ಅನಂತ ಪದ್ಮನಾಭ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ,ಕಸಾಪ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಭೇಟಿ ನೀಡಿದ್ದಾರೆ.ಮೂರೂ ಶವಗಳನ್ನು ಮೂಲ್ಕಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಜರು ನಡೆಸಲಾಗಿದೆ. ಮೂಲ್ಕಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.