ಮೃತರ ಆತ್ಮಕ್ಕೆ ಚಿರಶಾಂತಿ ಮತ್ತು ಗಾಯಾಳುಗಳು ಶೀಘ್ರ ಗುಣಮುಖರಾಗಲು ಶಾಸಕ ಕಾಮತ್ ಪ್ರಾರ್ಥನೆ
ಮಂಗಳೂರು: ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಹೇಡಿತನದ ಕೃತ್ಯವಾಗಿದ್ದು ಅದನ್ನು ತೀವ್ರವಾಗಿ ಖಂಡಿಸುವುದಾಗಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ. ದುರ್ಘಟನೆ ನಡೆದ ತಕ್ಷಣ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಶ್ರೀಲಂಕಾಕ್ಕೆ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಹೇಳಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೂಡ ಶ್ರೀಲಂಕಾದಲ್ಲಿ ಸಿಕ್ಕಿಬಿದ್ದಿರುವ ಕರಾವಳಿಗರ ರಕ್ಷಣೆಯ ಅಗತ್ಯ ಬಂದರೆ ಶೀಘ್ರದಲ್ಲಿ ಸ್ಪಂದಿಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ ಶಾಸಕ ಕಾಮತ್ ಅವರು ಭಯೋತ್ಪಾದಕರ ಪಾಪಕೃತ್ಯವನ್ನು ವಿಶ್ವದ ಎಲ್ಲಾ ನಾಗರಿಕರು ಖಂಡಿಸಿದ್ದಾರೆ ಎಂದು ಹೇಳಿದರು.
ಪವಿತ್ರ ಈಸ್ಟರ್ ಹಬ್ಬದಂದು ಚರ್ಚ್ ಗಳಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ ಮಡಿದ ಕ್ರೈಸ್ತ ಬಂಧುಭಗಿನಿಯರಿಗೆ ಮತ್ತು ಹೋಟೇಲುಗಳಲ್ಲಿ ತಂಗಿದ್ದ ಪ್ರವಾಸಿಗರನ್ನು ಗುರಿಯಾಗಿಟ್ಟು ನಡೆಸಿದ ಈ ಕೃತ್ಯ ಮಾನವಕುಲ ನೋವಿನಿಂದ ತಗ್ಗಿಸುವಂತಿದ್ದು, ಮೃತರಾದವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಮತ್ತು ನೆಮ್ಮದಿಯಿಂದ ಮನೆಗಳಿಗೆ ಹಿಂತಿರುಗುವಂತಾಗಲಿ ಎಂದು ಶಾಸಕ ಕಾಮತ್ ಹಾರೈಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸಮೀಪದ ಬೈಕಂಪಾಡಿಯ ರಜೀನಾ ಕುಕ್ಕಾಡಿ ಅವರು ಈ ಘಟನೆಯಲ್ಲಿ ಮೃತಪಟ್ಟಿದ್ದು ಅವರ ಕುಟುಂಬದವರಿಗೆ ಈ ದು:ಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.