ಮೆಸ್ಕಾಂ ಹೆಚ್ಚುವರಿ ಡಿಪಾಸಿಟ್ ವಸೂಲಿಗೆ ಡಿವೈಎಫ್‍ಐ ವಿರೋಧ, ಪ್ರತಿಭಟನೆಯ ಎಚ್ಚರಿಕೆ

Spread the love

ಮೆಸ್ಕಾಂ ಹೆಚ್ಚುವರಿ ಡಿಪಾಸಿಟ್ ವಸೂಲಿಗೆ ಡಿವೈಎಫ್‍ಐ ವಿರೋಧ, ಪ್ರತಿಭಟನೆಯ ಎಚ್ಚರಿಕೆ

ಮಂಗಳೂರು : ಮಂಗಳೂರು ನಗರದ ವಿವಿಧೆಡೆ ಮೆಸ್ಕಾಂ ಇಲಾಖೆ ಹೆಚ್ಚುವರಿ ಡಿಪಾಸಿಟ್ ಹಣ ಪಾವತಿಗೆ ಒತ್ತಾಯಿಸಿ, ವಿದ್ಯುತ್ ಸಂಪರ್ಕ ಕಡಿತ ಮಾಡುವ ಎಚ್ಚರಿಕೆಯನ್ನು ಮನೆಗಳಿಗೆ ತೆರಳಿ ನೀಡುತ್ತಿರುವ ಮೆಸ್ಕಾಂ ನೀತಿಯನ್ನು ಡಿವೈಎಫ್‍ಐ ದ.ಕ. ಜಿಲ್ಲಾ ಸಮಿತಿ ವಿರೋಧಿಸಿದೆ.

ವಿದ್ಯುತ್ ಸರಬರಾಜು ಅದೊಂದು ಸೇವಾ ಕ್ಷೇತ್ರ. ಸರಕಾರದ ಸೇವಾಕ್ಷೇತ್ರಗಳನ್ನು ಲಾಭದ ಉದ್ದೇಶಗಳಿಗೆ ಗ್ರಾಹಕರಿಂದ ಹೆಚ್ಚುವರಿ ಡಿಪಾಸಿಟ್ ಹೆಸರಿನಲ್ಲಿ ಪೀಡಿಸುವುದು ಸರಿಯಲ್ಲ, ಈಗಾಗಲೇ ದುಡಿದು ತಿನ್ನುವ ಜಿಲ್ಲೆಯ ಜನಸಾಮಾನ್ಯರ ಪರಿಸ್ಥಿತಿ ಶೋಚನೀಯವಾಗಿದೆ. ಒಂದು ಕಡೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ, ಪೆಟ್ರೋಲ್, ಡೀಸೆಲ್ ದರ ದಿನೇದಿನೇ ಏರುತ್ತಿದೆ, ನಿವೇಶನ ರಹಿತರು ಮನೆ ಬಾಡಿಗೆ ಕಟ್ಟಲಾಗದೆ ಕಂಗಾಲಾಗಿದ್ದಾರೆ, ಬಡವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ದುಬಾರಿ ಶುಲ್ಕವನ್ನು ಭರಿಸಲಾಗದೆ, ಅನಾರೋಗ್ಯ ಪೀಡಿತರಿಗೆ ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚವನ್ನು ಭರಿಸಲಾಗದ ಅತಂತ್ರ ಸ್ಥಿತಿಯಲ್ಲಿ ಜೀವಿಸುತ್ತಿರುವ ಸಂದರ್ಭದಲ್ಲಿ ಮೆಸ್ಕಾಂ ಇಲಾಖೆ ಈ ರೀತಿ ಡಿಪಾಸಿಟ್ ಹೆಸರಲ್ಲಿ ಮಾಡುವ ವಸೂಲಿ ನೀತಿಯು ಜನರ ನೋವಿಗೆ ಇನ್ನಷ್ಟು ಬರೆಯನ್ನು ಎಳೆದಂತಾಗಿದೆ.

ಈಗಾಗಲೇ 4 ವಿದ್ಯುತ್ ವಿಭಾಗಗಳಲ್ಲಿ ಮೆಸ್ಕಾಂ ಅತ್ಯಧಿಕ ಲಾಭ ಗಳಿಕೆಯ ವಿಭಾಗವಾಗಿದೆ. ಸ್ವಾಭಿಮಾನಿಗಳಾದ ಜಿಲ್ಲೆಯ ಜನ ಪ್ರಾಮಾಣಿಕವಾಗಿ ಬಳಕೆ ಮಾಡಿದ ವಿದ್ಯುತ್ ದರವನ್ನು ಪಾವತಿ ಮಾಡಿದ ಕಾರಣದಿಂದಾಗಿಯೇ ಮೆಸ್ಕಾಂ ಇಲಾಖೆ ಹೆಚ್ಚು ಲಾಭ ಗಳಿಸಲು ಸಾಧ್ಯವಾಗಿದೆ. ಮೆಸ್ಕಾಂ ಇಲಾಖೆ ಮತ್ತೆ ಹೆಚ್ಚುವರಿ ಡಿಪಾಸಿಟ್ ಕಟ್ಟಲು ಜನರನ್ನು ಸತಾಯಿಸುತ್ತಿರುವುದು ಹಾಗೂ ಕಟ್ಟದಿದ್ದಲ್ಲಿ ವಿದ್ಯುತ್ ಸಂಪರ್ಕದ ಕಡಿತದ ಎಚ್ಚರಿಕೆಯನ್ನು ನೀಡುವುದು ಕಾನೂನು ಬಾಹಿರವಾಗಿದೆ.

ಆದ್ದರಿಂದ ಮೆಸ್ಕಾಂ ಇಲಾಖೆ ಕೂಡಲೇ ಹೆಚ್ಚುವರಿ ಡಿಪಾಸಿಟ್ ವಸೂಲಿ ನೀತಿಯನ್ನು ಕೈಬಿಡಬೇಕು ಎಂದು ಡಿವೈಎಫ್‍ಐ ಒತ್ತಾಯಿಸುತ್ತದೆ. ಇಲ್ಲದಿದ್ದಲ್ಲಿ ಮುಂದಿನ ದಿನ ಮೆಸ್ಕಾಂ ಕಚೇರಿಗಳ ಎದುರು ಪ್ರತಿಭಟನೆ ನಡೆಸುವ ತೀರ್ಮಾನವನ್ನು ಕೈಗೊಳ್ಳಲಿದ್ದೇವೆ ಎಂದು ಡಿವೈಎಫ್‍ಐ ಜಿಲ್ಲಾ ಅಧ್ಯಕ್ಷರಾದ ಬಿ.ಕೆ. ಇಮ್ತಿಯಾಜ್ ಹಾಗೂ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love