ಮೇಯರ್ ಕವಿತಾ ಸನೀಲ್ ಗೆ ಸಿದ್ದರಾಮಯ್ಯ ಕರಾಟೆ ಪಂಚ್! ರಾಷ್ಟ್ರೀಯ ಪಂದ್ಯಾವಳಿ ಉದ್ಘಾಟನೆ
ಮಂಗಳೂರು : ಮಂಗಳೂರಿನಲ್ಲಿ ಶನಿವಾರ ಎರಡು ದಿನಗಳ ರಾಷ್ಟಮಟ್ಟದ ಮುಕ್ತ ಕರಾಟೆ ಪಂದ್ಯಾವಳಿ ‘ಇಂಡಿಯನ್ ಕರಾಟೆ ಚಾಂಪಿಯನ್‌ಶಿಪ್-2017’ನ ಉದ್ಘಾಟನೆಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವೇರಿಸಿದರು.
ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಕರಾಟೆಯಂತಹ ಸಮರ ಕಲೆ ಎಲ್ಲರಿಗೂ ಅಗತ್ಯವಿದ್ದು, ಪ್ರಸಕ್ತ ನಮ್ಮ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಹಿನ್ನಲೆಯಲ್ಲಿ ಎಲ್ಲಾ ಶಾಲೆಯಲ್ಲಿ ಕರಾಟೆಯಂತಹ ಆತ್ಮರಕ್ಷಣೆಯ ಕಲೆಯನ್ನು ಅಗತ್ಯವಾಗಿ ಕಲಿಸಲು ಆಸಕ್ತಿ ವಹಿಸಬೇಕಾಗಿದೆ. ಇದು ಆತ್ಮರಕ್ಷಣೆಗಿಂತಲೂ ಮಕ್ಕಳಲ್ಲಿ ಮಾನಸಿಕ ಸೈರ್ಯವನ್ನು ಮೂಡಿಸುತ್ತದೆ ಎಂದರು.
ಎಂಟರ್ ದಿ ಡ್ರಾಗನ್ ’ನೋಡಿದ್ದೇನೆ: ಕರಾಟೆಯ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಸಿನಿಮಾಗಳಲ್ಲಿ ಸ್ವಲ್ಪ ನೋಡಿ ಗೊತ್ತು. ಬ್ರೂಸ್ಲಿಯ ‘ಎಂಟರ್ ದಿ ಡ್ರಾಗನ್’ ಸಿನೆಮಾ ನೋಡಿದ್ದೆನೆ ಎಂದ ಸಿದ್ದರಾಮಯ್ಯ, ಮಂಗಳೂರು ಮೇಯರ್ ಕವಿತಾ ಸನಿಲ್ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದು ಸಾಧನೆ ಮಾಡಿದವರು. ಅವರು ಇಲ್ಲಿನ ಕಿರಿಯರಿಗೆ ಮಾದರಿಯಾಗಲಿ ಎಂದು ಹಾರೈಸಿದರು.
ಇದೇ ವೇಳೆ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಹೊಂದಿರುವ ಮಂಗಳೂರಿನ ಮೇಯರ್ ಕವಿತಾ ಸನೀಲ್ ಅವರಿಗೆ ಶುಭ ಹಾರೈಸಿದ ಮುಖ್ಯಮಂತ್ರಿಗಳು ಕವಿತಾ ಸನೀಲ್ ಅವರಿಗೆ ಕರಾಟೆ ಪಂಚ್ ನೀಡಿ ನೆರೆದವರನ್ನು ಆಶ್ಚರ್ಯಗೊಳಿಸಿದರು. ಇದಕ್ಕೆ ಪ್ರತಿಯಾಗಿ ಕವಿತಾ ಸನೀಲ್ ಕೂಡ ಸಿಎಮ್ ಅವರಿಗೆ ಪಂಚ್ ನೀಡಿದರು.
ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಶಾಸಕ ಬಿ.ಎ.ಮೊಯ್ದಿನ್ ಬಾವ, ಶಕುಂತಳಾ ಶೆಟ್ಟಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮನಪಾ ಉಪ ಮೇಯರ್ ರಜನೀಶ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ , ಸೆಲ್ಫ್ ಡಿಫೆನ್ಸ್ ಇಂಡಿಯನ್ ಕರಾಟೆ ಸ್ಕೂಲ್‌ನ ಸ್ಥಾಪಕ ಗ್ರಾಂಡ್ ಮಾಸ್ಟರ್‌ಬಿ.ಎಂ. ನರಸಿಂಹನ್, ಸಂಘಟನೆಯ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಂದ್ರ, ಮೇಯರ್ ಹಾಗೂ ಪಂದ್ಯಾವಳಿಯ ಸಂಘಟಕಿ ಕವಿತಾ ಸನಿಲ್, ಸಂಸ್ಥೆಯ ಸ್ಥಾಪಕಾಧ್ಯಕ್ಷ ಎ.ಸದಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.