ಮೇಲ್ಮನೆ ಎಲೆಕ್ಷನ್ಗೆ ಎಂಟಿಬಿ, ಶಂಕರ್ ಪ್ರತಾಪ್ ಸಿಂಹ ನಾಯಕ್, ವಲ್ಯಾಪುರೆ ಗೆ ಬಿಜೆಪಿ ಟಿಕೆಟ್: ವಿಶ್ವನಾಥ್ಗೆ ಶಾಕ್..!
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ. ಕೊನೆಯ ಕ್ಷಣದಲ್ಲಿ ಬುಧವಾರ ತಡರಾತ್ರಿ ಬಿಜೆಪಿ ಹೈಕಮಾಂಡ್ ಪಟ್ಟಿ ಪ್ರಕಟ ಮಾಡಿದೆ. ವಿಧಾನಸಭೆ ಉಪ ಚುನಾವಣೆಯಲ್ಲಿ ಸೋತಿದ್ದ ಮಾಜಿ ಸಚಿವ ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್ ಸ್ಪರ್ಧೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ.
ಬಿಜೆಪಿ ಹಿರಿಯ ನಾಯಕರಾದ ಸುನೀಲ್ ವಲ್ಯಾಪುರೆ ಕೂಡಾ ಬಿಜೆಪಿ ಟಿಕೆಟ್ ಗಿಟ್ಟಿಸುವಲ್ಲಿ ಸಫಲರಾಗಿದ್ದಾರೆ. ಪ್ರತಾಪ್ ಸಿಂಹ ನಾಯಕ್ ಅಚ್ಚರಿಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಆದ್ರೆ, ಹಳ್ಳಿ ಹಕ್ಕಿ ಎಚ್. ವಿಶ್ವನಾಥ್ಗೆ ಹೈಕಮಾಂಡ್ ಭರ್ಜರಿಯಾಗಿ ಕುಟುಕಿದೆ.
ರಾಜ್ಯ ಬಿಜೆಪಿ ಕೋರ್ ಕಮಿಟಿ ವಿಧಾನ ಪರಿಷತ್ ಚುನಾವಣೆಗೆ ಹತ್ತು ಸಂಭಾವ್ಯರ ಹೆಸರನ್ನು ಸೋಮವಾರ ರಾತ್ರಿಯೇ ಕಳುಹಿಸಿತ್ತು. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಇಂದು ರಾತ್ರಿ ಪಟ್ಟಿ ಬಿಡುಗಡೆ ಮಾಡಿದ್ದು, ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿದ ಎಂಟಿಬಿ ನಾಗರಾಜ್, ಕ್ಷೇತ್ರ ಬಿಟ್ಟುಕೊಟ್ಟಿದ್ದ ಆರ್ ಶಂಕರ್ ಹಾಗೂ ಸುನೀಲ್ ವಲ್ಯಾಪುರೆ ಮತ್ತು ಪ್ರತಾಪ್ ಸಿಂಹ ನಾಯಕ್ ಅವರಿಗೆ ಟಿಕೆಟ್ ನೀಡಲಾಗಿದೆ.
ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆಯೇ ಕಡೆಯ ದಿನವಾಗಿದೆ. ಹೀಗಾಗಿ ಇಂದು ತಡರಾತ್ರಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಚಿಂಚೋಳಿ ಉಪ ಚುನಾವಣೆ ವೇಳೆ ಅವಿನಾಶ್ ಜಾಧವ್ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದ ಸುನೀಲ್ ವಲ್ಯಾಪುರೆ, ಎಂಟಿಬಿ ನಾಗರಾಜ್ ಮತ್ತು ಆರ್ ಶಂಕರ್ ಅವರಿಗೆ ಪರಿಷತ್ ಸ್ಥಾನ ನೀಡುವುದಾಗಿ ಸಿಎಂ ಯಡಿಯೂರಪ್ಪ ಅವರು ಭರವಸೆ ನೀಡಿದ್ದರು. ಅದರಂತೆ ಈಗ ಮಾತು ಉಳಿಸಿಕೊಳ್ಳುವಂತೆ ಬಿಎಸ್ ವೈ ಯಶಸ್ವಿಯಾಗಿದ್ದಾರೆ.