ಮೇಲ್ವರ್ಗದವರಿಂದ ದಲಿತ ಮಹಿಳೆಯ ಮೇಲಿನ ಹಲ್ಲೆ ಖಂಡನೀಯ – ಕೀರ್ತಿ ಕುಮಾರ್
ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಕದ್ದ ಆರೋಪದ ಮೇಲೆ ದಲಿತ ಮಹಿಳೆಯನ್ನು ಮೇಲ್ವರ್ಗದ ಹಿಂದೂಗಳು ಥಳಿಸಿ, ಅಲ್ಲದೇ ಮರಕ್ಕೆ ಕಟ್ಟಿ ಹಾಕಿ ಅಮಾನುಷವಾಗಿ ಹಲ್ಲೆ ಮಾಡಿದ ಘಟನೆ ನಡೆದಿದೆ. ಬುದ್ಧಿವಂತರ ಜಿಲ್ಲೆ ಅನಿಸಿಕೊಂಡ ಕರಾವಳಿ ಜಿಲ್ಲೆಯಲ್ಲೇ ಇಂತಹ ತಲೆತಗ್ಗಿಸುವಂತ ನಡೆದಿದ್ದು ಪ್ರತಿಯೊಬ್ಬರೂ ಖಂಡಿಸಬೇಕಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಪಡುಬಿದ್ರಿ ಇದರ ಸಂಚಾಲಕರಾದ ಕೀರ್ತಿ ಕುಮಾರ್ ಹೇಳಿದ್ದಾರೆ.
ಮಾತೆತ್ತಿದರೆ ಅಲ್ಪಸಂಖ್ಯಾತರಿಂದ ಹಿಂದೂಗಳ ಮೇಲೆ ದಾಳಿ, ಹಲ್ಲೆ ಅನ್ನುವ ಸಂಘಪಾರಿವಾರದವರು, ಇವರನ್ನು ಪೋಷಿಸುವ ಬಿಜೆಪಿಯವರು ಈವಾಗ ದಲಿತರ ಮೇಲೆ ಹಿಂದುಗಳಿಂದಲೇ ದಾಳಿ ಆಗಿರೋದನ್ನು ಕಂಡೂ ಕಾಣದಂತೆ ಮೌನವಹಿಸಿದ್ದು ಯಾಕೆ. ಹಿಂದುತ್ವದ ಅಡಿಯಲ್ಲೇ ಗೆದ್ದಂತ ಶಾಸಕರು ಇಲ್ಲೇಕೆ ಮೌನವಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು, ಸನ್ಮಾನ್ಯ ಮುಖ್ಯಮಂತ್ರಿಯವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆಮಾಡಿ ಅಪರಾಧಿಗಳಿಗೆ ಸರಿಯಾದ ಶಿಕ್ಷೆ ವಿಧಿಸುವಂತೆ ಪೊಲೀಸ್ ಇಲಾಖೆಗೆ ಅದೇಶಿಸಿದ್ದಾರೆ. ಇದರೊಂದಿಗೆ ಅಪರಾಧಿಗಳಿಗೆ ಆ ಬಂದರಿನೊಳಗೆ ಪ್ರವೇಶವನ್ನು ನಿರ್ಭಂಧಿಸಬೇಕು. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.
ಬಿದ್ದ ಮೀನನ್ನು ಹೆಕ್ಕಿದ್ದಕ್ಕೆ ಕಳ್ಳತನದ ಆರೋಪ ಮಾಡುವುದಾದ್ರೆ ಇದೇ ಜಿಲ್ಲೆಯಲ್ಲಿ ಕಂಚು ಕದ್ದ ಆರೋಪದಲ್ಲಿರುವವರನ್ನು ಪ್ರಶ್ನೆ ಮಾಡೋದಿಲ್ಲ ಯಾಕೆ. ಪೊಲೀಸ್ ಇಲಾಖೆ ಯಾವ ರಾಜಕೀಯ ಒತ್ತಡಕ್ಕೆ ಮಣಿಯದೆ ಸೂಕ್ತ ತನಿಖೆ ಮಾಡಿ ಅಪರಾಧಿಗಳಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.