ಮೇ 15 ವಿಧಾನಸಭಾ ಚುನಾವಣೆ ಮತ ಎಣಿಕೆ; ದಕ ಜಿಲ್ಲೆಯಲ್ಲಿ ನಿಷೇಧಾಜ್ಞೆ
ಮಂಗಳೂರು: ವಿಧಾನಸಭಾ ಚುನಾವಣೆಯ ಮತ ಎಣಿಕೆಯ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 15 ರಂದು ನಿಷೇಧಾಜ್ಞೆಯನ್ನು ಜಾರಿಗೆಗೊಳಿಸಿ ದಕ ಜಿಲ್ಲಾ ಜಿಲ್ಲಾಧಿಕಾರಿ ಸಶಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.
ಮತದಾನ ಪ್ರಕ್ರಿಯೆಯ ಮತ ಎಣಿಕೆ ಮಹಾತ್ಮ ಗಾಂಧಿ ಸೆಂಟಿನರಿ ಹೈಯರ್ ಪ್ರೈಮರಿ ಶಾಲೆ ಹಾಗೂ ಕಾಂಪೋಸಿಟ್ ಪಿಯು ಕಾಲೇಜು ಬೊಂದೆಲ್ ಮಂಗಳೂರು ಇಲ್ಲಿ ನಡೆಯಲಿದ್ದು, ಮತ ಎಣಿಕೆಯ ನಂತರ ವಿಜಯಿಯಾದ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಣೆ ಮಾಡುವ ಸಾಧ್ಯತೆ ಇದ್ದು, ದಕ ಜಿಲ್ಲೆಯ ಕೆಲವು ಭಾಗಗಳು ಕೋಮು ಸೂಕ್ಷ್ಮ ಪ್ರದೇಶಗಳಾಗಿರುವುದರಿಂದ ಸಮಾಜ ಘಾತುಕ ಶಕ್ತಿಗಳು ಶಾಂತಿ ಭಂಗವನ್ನು ಉಂಟು ಮಾಡುವ ಸಾಧ್ಯತೆಗಳಿದ್ದು ವಿಜೇತ ಅಭ್ಯರ್ಥಿಗಳು ಹಾಗೂ ಪರಾಜಿತ ಅಭ್ಯರ್ಥಿಗಳ ಬೆಂಬಲಿಗರ ನಡುವೆ ವೈಷಮ್ಯದ ಹಿನ್ನಲೆಯಲ್ಲಿ ಅಹಿತಕರ ಘಟನೆಗಳು ನಡೆದು ಕೋಮು ಘರ್ಷಣೆಗಳಾ ಪರಿವರ್ತಿತಗೊಳ್ಳುವ ಸಂಭವಗಳಿರುವುದರಿಂದ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಹಾಗೂ ಮತ ಎಣಿಕೆ ಕಾರ್ಯವು ಸುಸೂತ್ರವಾಗಿ ನಡೆಯಲು ಹಾಗೂ ಮತ ಎಣಿಕೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಯ್ದುಕೊಂಡು ಶಾಂತಿ ಕಾಪಾಡುವ ಸಲುವಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಮೇ 14ರ ಮಧ್ಯರಾತ್ರಿ 12 ಗಂಟೆಯಿಂದ ಮೇ 15 ರ ಮಧ್ಯರಾತ್ರಿಯವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೆಗೊಳಿಸಲಾಗಿದೆ.