ಮೈಕ್ರೋ ಪೈನಾನ್ಸ್ ಸಾಲ ಹಾಗೂ ಬಡ್ಡಿ ಮನ್ನಾಕ್ಕೆ ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ
ಕುಂದಾಪುರ : ಸ್ತ್ರೀ ಶಕ್ತಿ, ಸ್ವ ಸಹಾಯ ಸಂಘಗಳು, ರಾಷ್ಟ್ರೀಕ್ರತ /ಸಹಕಾರ ಬ್ಯಾಂಕುಗಳು, ಸಹಕಾರ ಸಂಘಗಳು ಹಾಗೂ ಕಿರುಸಾಲ ಸಂಸ್ಥೆಗಳಿಂದ ಪಡೆದ ಮೈಕ್ರೋ ಪೈನಾನ್ಸ್ ಸಾಲ ಹಾಗೂ ಬಡ್ಡಿ ಮನ್ನಾಕ್ಕೆ ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸದಸ್ಯರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ತಾಲ್ಲೂಕು ತಹಸೀಲ್ದಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಸರ್ಕಾರ ಹಾಗೂ ಮೈಕ್ರೋಪೈನಾನ್ಸ್ ಸಂಸ್ಥೆಗಳ ಅಡಿಯಲ್ಲಿ ಸುಮಾರು 35 ರಿಂದ 40 ಲಕ್ಷ ಮಹಿಳೆಯರು ಈ ಸಂಘಗಳ ಸದಸ್ಯರಾಗಿ ಸ್ವಯಂ ಉದ್ಯೋಗ, ಕ್ರಷಿ ಚಟುವಟಿಕೆ, ಮಕ್ಕಳ ವಿದ್ಯಾಭ್ಯಾಸ , ಕುಟುಂಬ ಆರೋಗ್ಯ, ಕುಟುಂಬ ನಿರ್ವಹಣೆಯೂ ಸೇರಿದಂತೆ ತಮ್ಮ ಖರ್ಚು ವೆಚ್ಚಗಳಿಗಾಗಿ ಸಂಘಗಳ ಮೂಲಕ ಸಾಲ ಪಡೆದುಕೊಂಡಿರುತ್ತಾರೆ. ಕೋವಿಡ್ ಕಾರಣದಿಂದಾಗಿ ಯಾವುದೇ ಮುನ್ಸೂಚನೆ ಇಲ್ಲದೆ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದಾಗಿ, ಎಲ್ಲಾ ಕ್ಷೇತ್ರಗಳಂತೆ ಈ ಮಹಿಳೆಯರು ಸಂಕಷ್ಟದಲ್ಲಿದ್ದಾರೆ .
ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಇವರು ಪಡೆದ ಸಾಲಕ್ಕೆ ಶೇ. 18 ರಿಂದ 24 ವರೆಗೆ ಚಕ್ರಬಡ್ಡಿ ಹಾಕುತ್ತಾರೆ. ಇದು ಶೋಷಣೆಯ ಪರಮಾವಧಿ ಎಂದು ಜನವಾದಿ ಮಹಿಳಾ ಸಂಘಟನೆ ಮುಖ್ಯಮಂತ್ರಿಗಳಿಗೆ ನೀಡಿದ ಮನವಿಯಲ್ಲಿ ತಿಳಿಸಿದೆ.
ಲಾಕ್ ಡೌನ್ ಅವಧಿಯಲ್ಲಿ ಸಾಲ ವಸೂಲಾತಿಗೆ ಒತ್ತಡ ಹಾಕದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶ ನೀಡಿದೆಯಾದರೂ ಅದರ ಉಲ್ಲಂಘನೆಯಾಗುತ್ತಿದೆ. ಕೋವಿಡ್ ಪರಿಹಾರವೆಂದು ಪ್ರಧಾನ ಮಂತ್ರಿಗಳು ಘೋಷಿಸಿದ 20 ಲಕ್ಷ ಕೋಟಿ ಪ್ಯಾಕೇಜ್ ನಲ್ಲಿ ನೈಜ ಪರಿಹಾರ ದ ಪಾಲು ಕನಿಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಜನವಾದಿ ಮಹಿಳಾ ಸಂಘಟನೆ, ಸರ್ಕಾರ ಮಹಿಳೆಯರ ಸಾಲ ಮತ್ತು ಬಡ್ಡಿ ಮನ್ನಾ ಮಾಡಲು ಕೂಡಲೇ ಹಣಕಾಸಿನ ನೆರವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದೆ.
ಬೇಡಿಕೆಗಳು:
ಮಹಿಳೆಯರನ್ನು ಸಾಲದ ಕಂತು ಕಟ್ಟಲು ಹಿಂಸಿಸುತ್ತಿರುವ ಬ್ಯಾಂಕ್ ಮತ್ತು ಮೈಕ್ರೋ ಪೈನಾನ್ಸ್ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಬೇಕು.
ಸಾಲಗಳ ಮೇಲಿನ ಬಡ್ಡಿಯನ್ನು 75% ಕೇಂದ್ರ ಸರ್ಕಾರ ಹಾಗೂ 25% ರಾಜ್ಯ ಸರಕಾರಗಳು ಭರಿಸಬೇಕು.
ತಕ್ಷಣ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಹೊಸ ಸಾಲವನ್ನು ಮಂಜೂರು ಮಾಡಲು ರಾಷ್ಟ್ರೀಕ್ರತ ಬ್ಯಾಂಕುಗಳಿಗೆ ಆದೇಶ ನೀಡಬೇಕು.
ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸದಸ್ಯರಿಗೆ ತರಬೇತಿ, ಕಚ್ಛಾ ಪದಾರ್ಥಗಳು ಹಾಗೂ ಮಾರಾಟದ ವ್ಯವಸ್ಥೆ ಮಾಡಬೇಕು.
ಜನವಾದಿ ಮಹಿಳಾ ಸಂಘಟನೆಯ ತಾಲ್ಲೂಕು ಅಧ್ಯಕ್ಷೆ ಆರತಿ, ಕಾರ್ಯದರ್ಶಿ ಶೀಲಾವತಿ , ಬಲ್ಕೀಸ್, ನಾಗರತ್ನ ನಾಡ, ಸಿಐಟಿಯು ಸಂಘಟನೆಯ ಪ್ರಮುಖರಾದ ಎಚ್ .ನರಸಿಂಹ, ಸುರೇಶ್ ಕಲ್ಲಾಗರ ಇದ್ದರು.
E horatakke namdhu support ide pls help me send ur contact number naavu call maadtivi