‘ಮೈತ್ರಿ’ ಪಕ್ಷಗಳಿಂದ ಅರ್ಜಿ ಇಂದು ವಿಚಾರಣೆ: ಎಲ್ಲರ ಚಿತ್ತ ಸುಪ್ರೀಂ ಕೋರ್ಟ್‌ನತ್ತ

Spread the love

‘ಮೈತ್ರಿ’ ಪಕ್ಷಗಳಿಂದ ಅರ್ಜಿ ಇಂದು ವಿಚಾರಣೆ: ಎಲ್ಲರ ಚಿತ್ತ ಸುಪ್ರೀಂ ಕೋರ್ಟ್‌ನತ್ತ

ಬೆಂಗಳೂರು: ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ರಾಜ್ಯಪಾಲರು ಅವಕಾಶ ನೀಡಿರುವ ಕ್ರಮವನ್ನು ಪ್ರಶ್ನಿಸಿ ಕಾಂಗ್ರೆಸ್‌–ಜೆಡಿಎಸ್‌ ಸಲ್ಲಿಸಿರುವ ಅರ್ಜಿ ಸಂಬಂಧ ಇಂದು(ಶುಕ್ರವಾರ) ವಿಚಾರಣೆ ನಡೆಸಿ ತೀರ್ಪು ಹೊರಬೀಳುತ್ತಿರುವುದರಿಂದ ಎಲ್ಲರ ಚಿತ್ತ ಸುಪ್ರೀಂ ಕೋರ್ಟ್‌ನತ್ತ ನೆಟ್ಟಿದೆ.

ಇಂದು ಬೆಳಿಗ್ಗೆ 10.30ಕ್ಕೆ ವಿಚಾರಣೆ ಆರಂಭವಾಗಲಿದೆ. ಈ ವೇಳೆ ನ್ಯಾಯಾಧೀಶರು ಕೇಳುವ ಪ್ರಶ್ನೆಗಳು ಹಾಗೂ ದಾಖಲೆಗಳನ್ನು ಒದಗಿಸಲು ಪರ ಮತ್ತು ವಿರೋಧಿಗಳ ವಕಾಲತ್ತು ವಹಿಸಿರುವ ನ್ಯಾಯಾಧೀಶರು ಸಿದ್ಧತೆ ಮಾಡಿಕೊಂಡಿದ್ದಾರೆ.

‘ಪ್ರಮಾಣ ವಚನ ಸಮಾರಂಭಕ್ಕೆ ಅವಕಾಶ ನೀಡಕೂಡದು’ ಎಂದು ಕೋರಿ ಕಾಂಗ್ರೆಸ್–ಜೆಡಿಎಸ್‌ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಬೆಳಗಿನ ಜಾವ 1.45ಕ್ಕೆ, ತ್ವರಿತ ವಿಚಾರಣೆಗಾಗಿ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎಸ್‌.ಎ. ಬೋಬ್ಡೆ ಹಾಗೂ ಅಶೋಕ್‌ ಭೂಷಣ್‌ ಅವರಿದ್ದ ತ್ರಿಸದಸ್ಯ ಪೀಠ, ‘ರಾಜ್ಯಪಾಲರ ವಿವೇಚನಾ ಅಧಿಕಾರಕ್ಕೆ ಸಂಬಂಧಿಸಿದಂತೆ ಹಸ್ತಕ್ಷೇಪ ಮಾಡಲಾಗದು’ ಎಂದು ಅಭಿಪ್ರಾಯಪಟ್ಟು, ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು.

ಸರ್ಕಾರ ರಚನೆಯ ಪ್ರಸ್ತಾವನೆಯೊಂದಿಗೆ ಯಡಿಯೂರಪ್ಪ ಅವರು ರಾಜ್ಯಪಾಲರಿಗೆ ಸಲ್ಲಿಸಿರುವ ಶಾಸಕರ ಬೆಂಬಲದ ಪತ್ರದ ಪ್ರತಿಯನ್ನು ಹಾಜರುಪಡಿಸುವಂತೆ ಸೂಚಿಸಿತ್ತು.

ಎಲ್ಲರ ಚಿತ್ರ ಸುಪ್ರೀಂ ಕೋರ್ಟ್‌ನತ್ತ ನೆಟ್ಟಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌–ಜೆಡಿಎಸ್‌ ‘ಮೈತ್ರಿ’ ಕೂಟ ತಮ್ಮ ಮುಂದಿನ ನಡೆಯನ್ನು ನಿರ್ಧರಿಸಲು ‘ಬಕ’ಪಕ್ಷಿಯಂತೆ ಕಾಯುತ್ತಿವೆ.


Spread the love