ಮೊದಲ ಮಳೆಗೆ ಕೊಚ್ಚಿ ಹೋದ ಮಂಗಳೂರು ಶಾಸಕರ ಮಾರ್ಕೇಟ್ ಪ್ಲಾನ್ – ತರಕಾರಿ, ಸಾಮಾನು ನೀರುಪಾಲು
ಮಂಗಳೂರು: ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ನಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳನ್ನ ಬೈಕಂಪಾಡಿ ಎಪಿಎಂಸಿ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಗೊಳಿಸಿದ ಬೆನ್ನಿಗೆ ಸೋಮವಾರ ಸುರಿದ ಭಾರಿ ಮಳೆಗೆ ಅಲ್ಲಿನ ಅತಂತ್ರ ವ್ಯವಸ್ಥೆ ಹೊರಬಿದ್ದಿದೆ.
ನಗರದ ಸೆಂಟ್ರಲ್ ಮಾರುಕಟ್ಟೆಯ ತರಕಾರಿ ಹಾಗೂ ಹಣ್ಣುಹಂಪಲು ಸಗಟು ವ್ಯಾಪಾರವನ್ನು ನಗರದ ಹೊರ ವಲಯದ ಬೈಕಂಪಾಡಿಯ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲು ಸಗಟು ವ್ಯಾಪಾರಸ್ಥರು ನಿರಾಕರಿಸಿದ್ದರೂ ಕೂಡ ಒತ್ತಾಯ ಪೂರ್ವಕವಾಗಿ ಸ್ಥಳಾಂತರಗೊಳಿಸಲಾಗಿತ್ತು.
ಕೋವಿಡ್ 19 ಸಾಂಕ್ರಾಮಿಕ ಹರಡುತ್ತಿರುವ ಸಂದರ್ಭದಲ್ಲಿ ಈಗಿರುವ ಮಾರುಕಟ್ಟೆಯ ವಿನ್ಯಾಸ ಮತ್ತು ರಚನೆ ಸೂಕ್ತವಾಗಿಲ್ಲ ಎಂದು ಮಂಗಳೂರು ಮಹಾನಗರ ಪಾಲಿಕೆ ತರಾತುರಿಯಲ್ಲಿ ಬೈಕಂಪಾಡಿ ಮಾರುಕಟ್ಟೆಗೆ ಸ್ಥಳಾಂತರ ಮಾಡಿಸಿದ್ದರು.
ವ್ಯಾಪಾರಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಬೈಕಂಪಾಡಿ ಮಾರುಕಟ್ಟೆಯಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್ ಮತ್ತು ಪಾಲಿಕೆ ಭರವಸೆ ನೀಡಿತ್ತು. ಆದರೆ ಯಾವುದೇ ಮೂಲಭೂತ ಸೌಕರ್ಯ ಒದಗಿಸದೆ ವ್ಯಾಪಾರ ಆರಂಭಿಸಿದ್ದರು. ಪ್ರತಿನಿತ್ಯ ಹಾವುಗಳು ಮಾರುಕಟ್ಟೆಗೆ ನುಗ್ಗಿ ವ್ಯಾಪಾರಿಗಳು ಭಯದಿಂದಲೇ ವ್ಯಾಪಾರ ಮಾಡುತ್ತಿದ್ದರು.
ಎ.ಪಿ. ಎಮ್. ಸಿ ಯಾರ್ಡಿಗೆ ಸ್ಥಳಾಂತರ ಮಾಡಿಸಿದ, ಶಾಸಕ ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಹಾಗೆಯೇ ಮಹಾನಗರ ಪಾಲಿಕೆ ಕೊಟ್ಟ ಭರವಸೆ ಸೋಮವಾರ ಮೊದಲ ಮಳೆಗೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಭೀಕರ ಮಳೆಯಿಂದಾಗಿ ತರಕಾರಿ ನೀರಿನಲ್ಲಿ ಸಂಪೂರ್ಣವಾಗಿ ಕೊಚ್ಚಿಹೋಗಿದೆ. ಬೈಕಂಪಾಡಿಯಲ್ಲಿ ತಾತ್ಕಾಲಿಕವಾಗಿ ಮಾರುಕಟ್ಟೆ ಪ್ರಾರಂಭಿಸಿದ್ರೂ, ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲ ಎಂದು ವ್ಯಾಪಾರಿಗಳು ಆಕ್ರೋಶಗೊಂಡಿದ್ದಾರೆ. ಮೀನು ಮಾರುಕಟ್ಟೆ, ತರಕಾರಿ ಇವೆಲ್ಲವೂ ಇಂದು ಸುರಿದ ಭಾರೀ ಮಳೆಗೆ ಕೊಚ್ಚಿಹೋಗಿದೆ.
ಇನ್ನು ಎಪಿಎಂಸಿ ಯಾರ್ಡಿನಲ್ಲಿ ಶೌಚಾಲಯ, ದಾಸ್ತಾನು ಕೊಠಡಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಿ ಕೊಡಬೇಕೆಂದು ವ್ಯಾಪಾರಿಗಳು ಮನವಿಯನ್ನೂ ಮಾಡಿದ್ದರು. ಅದಕ್ಕೆ ಶಾಸಕರು ಒಪ್ಪಿಗೆ ಸೂಚಿಸಿದ್ದರು. ಆದ್ರೆ ಅದೆಲ್ಲವೂ ಭರವಸೆಯಾಗೇ ಉಳಿದಿದೆ. ಇದರಿಂದಾಗಿ ಇಂದು ಸುರಿದ ಭಾರೀ ಮಳೆಗೆ ತರಕಾರಿಗಳೆಲ್ಲವೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ವ್ಯಾಪಾರಿಗಳ ಬದುಕು ಅತಂತ್ರವಾಗಿದೆ. ಹಾಗಾಗಿ ಇದೀಗ ವ್ಯಾಪಾರಿಗಳು ಮಹಾನಗರ ಪಾಲಿಕೆ ಮತ್ತು ಶಾಸಕರುಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಇದಕ್ಕೊಂದು ಸೂಕ್ತ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.