ಮೋಟಾರು ವಾಹನ ದಂಡ ಹೆಚ್ಚಳ ವಿರೋಧಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ
ಉಡುಪಿ: ಮೋಟಾರು ವಾಹನ ದಂಡ ಹೆಚ್ಚಳ ಮಾಡಿರುವ ಕೇಂದ್ರ ಸರಕಾರದ ನೀತಿ ವಿರೋಧಿಸಿ ಮತ್ತು ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಒತ್ತಾಯಿಸಿ ಉಡುಪಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ರಾಜ್ಯದಲ್ಲಿ ಒಂದುಕಡೆ ಬರ ಮತ್ತೊಂದು ಕಡೆ ನೆರೆ ಆವರಿಸಿದ್ದರೂ ಸಂತ್ರಸ್ತರಿಗೆ ಸೂಕ್ತ, ಸಮರ್ಪಕ ಪರಿಹಾರ ವಿತರಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ವಿಫಲವಾಗಿವೆ. ಮಳೆಯಿಂದ ಹಾನಿಗೊಳಗಾದವರಿಗೆ ತುರ್ತು ರೂ. 10 ಸಾವಿರ ಹಾಗೂ ಶಾಶ್ವತ ಪರಿಹಾರ ಘೋಷಿಸಿ ತೆರಳಿ ದ್ದಾರೆ. ಆದರೆ ಅದು ಸಂತ್ರಸ್ತರಿಗೆ ತಲುಪಿಲ್ಲ ಎಂದ ಅವರು, ಪ್ರಧಾನಿ ಭೂತಾನ್ ಪ್ರವಾಸದಲ್ಲಿ ಮಕ್ಕಳಿಂದ ಶಹಬ್ಬಾಸ್‍ಗಿರಿ ಗಿಟ್ಟಿಸುವುದನ್ನು ಬಿಟ್ಟು ದೇಶದ ನೆರೆ ಸಂತ್ರಸ್ತರ ಕಣ್ಣೀರೊರೆಸುವ ಮೂಲಕ ಶಹಬ್ಬಾಸ್‍ಗಿರಿ ಗಿಟ್ಟಿಸಲಿ ಎಂದು ಒತ್ತಾಯಿಸಿದರು.
ರಾಜ್ಯಾದ್ಯಂತ ನೂತನ ಮೋಟಾರು ವಾಹನ ಕಾಯ್ದೆಯಡಿ 60ಕ್ಕೂ ಹೆಚ್ಚು ನೂತನ ಕಾನೂನುಗಳನ್ನು ಜಾರಿಗೊಳಿಸಿದ್ದರಿಂದ ಜನರಿಗೆ ಹೊರೆಯಾಗುತ್ತಿದೆ. ಅಲ್ಲದೆ, ಕೆಲವೊಂದು ಕಾಯ್ದೆಗಳು ಅವೈಜ್ಞಾನಿಕವಾಗಿದ್ದು, ಇದರಿಂದ ಜನರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. ನೂತನ ಮೋಟಾರು ಕಾಯ್ದೆಯಿಂದಾಗಿ ಹೆಲ್ಮೆಟ್ ಧರಿಸದ ವಾಹನ ಸವಾರರು 100 ರೂ. ದಂಡದ ಬದಲು 1 ಸಾವಿರ ರೂ. ಹೆಚ್ಚಳ ಮಾಡಿದ್ದರಿಂದ ಸಾಕಷ್ಟು ಜನರಿಗೆ ಹೊರೆಯಾಗುತ್ತಿದೆ. ಅಲ್ಲದೆ, ಕಾನೂನು ಜಾರಿಗೊಳಿಸುವ ಮೊದಲು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಬೇಕಿತ್ತು. ಆದರೆ, ವಾಹನ ಸವಾರರಿಗೆ ಎಚ್ಚರಿಕೆ ನೀಡದೇ ನೂತನ ಕಾಯ್ದೆಯಡಿ ಬೇಕಾಬಿಟ್ಟಿಯಾಗಿ ವಾಹನ ಸವಾರರಿಂದ ದಂಡ ವಸೂಲಿ ಮಾಡಲಾಗುತ್ತಿದೆ ಎಂದು ದೂರಿದರು.
ಹೊಸ ಕಾಯ್ದೆ ಜನರಲ್ಲಿ ಭಯದ ವಾತಾವರಣ ನಿರ್ವಿುಸಿದ್ದು, ವಾಹನಗಳನ್ನು ರಸ್ತೆಗಳಿಗೆ ಇಳಿಸಲು ಯೋಚಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ನೂತನ ಕಾಯ್ದೆ ಜನರಿಗೆ ಹೊರೆಯಾಗುವ ಬದಲು ಕಾಯ್ದೆಯನ್ನು ಮರುಪರಿಶೀಲಿಸಿ ಜಾರಿಗೊಳಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಯು.ಆರ್ ಸಭಾಪತಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಶ್ವಾಸ್ ಅಮೀನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ, ಕಾಂಗ್ರೆಸ್ ನಾಯಕರಾದ ವೆರೋನಿಕಾ ಕರ್ನೆಲಿಯೋ, ಡಾ|ಸುನೀತಾ ಶೆಟ್ಟಿ, ರೋಶನಿ ಒಲಿವೇರಾ ಮುಂತಾದವರು ಭಾಗವಹಿಸಿದರು.