ಮೋದಿ ತಮ್ಮ ಮುಖಕ್ಕೆ ವ್ಯಾಕ್ಸ್ ಹಚ್ಚಿ ಶೈನಿಂಗ್ ಇರುವಂತೆ ನೋಡಿಕೊಳ್ಳುತ್ತಾರೆ – ಕುಮಾರಸ್ವಾಮಿ ವ್ಯಂಗ್ಯ
ಉಡುಪಿ: ನಾನು ಬಿಸಿಲಿನಲ್ಲಿ ತಿರುಗುತ್ತೇನೆ. ಬೆಳಿಗ್ಗೆ ಸ್ನಾನ ಮಾಡಿ ಪ್ರವಾಸ ಹೊರಟರೆ ಮರುದಿನವೇ ಮತ್ತೆ ಸ್ನಾನ ಮಾಡುತ್ತೇನೆ. ಬಿಸಿಲು, ಮಳೆ, ದೂಳಿನಿಂದ ಮುಖದಲ್ಲಿ ಕಾಂತಿ ಇರುವುದಿಲ್ಲ. ಆದರೆ, ನರೇಂದ್ರ ಮೋದಿ ಅವರ ಜತೆಯಲ್ಲಿ ಯಾವಾಗಲೂ ಮೇಕಪ್ ಮ್ಯಾನ್ ಇರ್ತಾನೆ. ಮೋದಿ ಅವರ ಮುಖಕ್ಕೆ ವ್ಯಾಕ್ಸ್ ಹಚ್ಚಿ ಬೆಳಿಗ್ಗಿನಿಂದ ಸಂಜೆಯವರೆಗೂ ಶೈನಿಂಗ್ ಇರುವಂತೆ ಮಾಡಲಾಗುತ್ತದೆ. ಹೊಳೆಯುವ ಮುಖನೋಡಿ ಮತ ಹಾಕುತ್ತೀರಾ ಅಥವಾ ಜನರ ಮಧ್ಯೆ ಇರುವವರಿಗೆ ಮತ ಹಾಕುತ್ತೀರಾ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದರು.
ಭಾನುವಾರ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಕರಾವಳಿಯ ಭಾಗದಲ್ಲಿ ಯುವಕರನ್ನು ಧರ್ಮದ ಹೆಸರಿನಲ್ಲಿ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಇಂತಹ ಆಮಿಷಗಳಿಗೆ ಯುವ ಜನಾಂಗ ಬಲಿಯಾಗಬಾರದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿದರು.
‘ಪ್ರಧಾನಿ ಮೋದಿ ರಾಜ್ಯದ ಅಭಿವೃದ್ಧಿಗೆ ಕೊಡುಗೆ ಕೊಟ್ಟಿದ್ದರೆ ಬೆಂಬಲಿಸಿ. ಆದರೆ, ಕೋಟ್ಯಂತರ ಯುವಕರ ಜೀವನವನ್ನು ಬೀದಿಪಾಲು ಮಾಡಿದ ಮೋದಿ ಅವರಿಗೆ ಮತ ಹಾಕುವುದು ಸರಿಯೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಯುವಕರು ಬೀದಿ ಬೀದಿಯಲ್ಲಿ ಮೋದಿ ಮೋದಿ ಎಂದು ನೃತ್ಯ ಮಾಡಿದರೆ ಪ್ರಯೋಜನ ಇಲ್ಲ’ ಎಂದರು.
ಸುಂದರರಾಮ ಶೆಟ್ಟರು ಕಷ್ಟಪಟ್ಟು ಕರಾವಳಿಯಲ್ಲಿ ವಿಜಯ ಬ್ಯಾಂಕ್ ಸ್ಥಾಪನೆ ಮಾಡಿದರು. ಕರ್ನಾಟಕಕ್ಕೆ ಹೆಸರು ತಂದುಕೊಟ್ಟ ವಿಜಯ ಬ್ಯಾಂಕ್ ಅನ್ನು ಕೇಂದ್ರ ಸರ್ಕಾರ ಬ್ಯಾಂಕ್ ಆಫ್ ಬರೋಡ ಜತೆ ವಿಲೀನಗೊಳಿಸಿತು. ಇದೇ ಕರಾವಳಿಗೆ ಮೋದಿ ಅವರು ಕೊಟ್ಟ ಕೊಡುಗೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷದ ಜತೆಗಿನ ಹೊಂದಾಣಿಕೆಯ ಬಗ್ಗೆ ಮೋದಿ ಲಘುವಾಗಿ ಮಾತನಾಡುತ್ತಾರೆ. ದೇಶದಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ತಿಳಿದೇ ಬಿಜೆಪಿ 13 ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ಇಷ್ಟಾದರೂ ವಿರೋಧ ಪಕ್ಷಗಳ ಹೊಂದಾಣಿಕೆ ಬಗ್ಗೆ ವಾಗ್ದಾಳಿ ಮಾಡುತ್ತಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಮೈತ್ರಿ ಸರ್ಕಾರಕ್ಕೆ ಹಲವು ರೀತಿಯಲ್ಲಿ ಅಡ್ಡಿಮಾಡಿದರೂ ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಿದ್ದೇವೆ. ಕೃಷಿ ವಲಯಕ್ಕೆ ₹ 46,000 ಕೋಟಿ ಅನುದಾನ ನೀಡಲಾಗುತ್ತಿದೆ. ಕರಾವಳಿ ಭಾಗದಲ್ಲಿ ಭತ್ತ ಬೆಳೆಯಲು ಹೆಕ್ಟೇರ್ಗೆ ₹ 7,500 ಸಬ್ಸಿಡಿ ನೀಡಲಾಗುತ್ತಿದೆ ಎಂದರು.
ಉಡುಪಿ ಜಿಲ್ಲೆಯ ರೈತರ ಸಾಲ ಮನ್ನಾ ಮಾಡಲು ₹ 80 ಕೋಟಿ ಹಣ ಬಿಡುಗಡೆಯಾಗಿದೆ. ರಾಜ್ಯದಲ್ಲಿ 15,58 ಲಕ್ಷ ರೈತರ ಕುಟುಂಬಗಳಿಗೆ ಸಾಲ ಮನ್ನಾ ಹಣ ಬಿಡುಗಡೆಯಾಗುತ್ತಿದೆ. 18–19 ಸಾಲಿನಲ್ಲಿ ₹ 6,500 ಕೋಟಿ ಹಣ ರೈತರ ಖಾತೆಗೆ ಈಗಾಗಲೇ ಜಮೆಯಾಗಿದೆ. ಉಳಿದ ಹಣ ಬಿಡುಗಡೆಗೆ ಚುನಾವಣಾ ಆಯೋಗ ತಡೆಯೊಡ್ಡಿದೆ ಎಂದರು.
ಮೈತ್ರಿ ಸರ್ಕಾರ ಬಂದ ಬಳಿಕ ಗಲಭೆಗಳು ನಡೆಯುತ್ತಿಲ್ಲ, ಎಲ್ಲ ಸಮಾಜಗಳಿಗೆ ರಕ್ಷಣೆ ನೀಡಲಾಗುತ್ತಿದೆ. ಕರಾವಳಿ ಮಲೆನಾಡಿನಲ್ಲಿ 1,500 ಕಾಲುಸಂಕಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡಲಾಗುತ್ತಿದೆ ಎಂದರು.
ನರೇಂದ್ರ ಮೋದಿ ಅವರನ್ನು ಬಿಟ್ಟರೆ ಇಲ್ಲಿಯವರೆಗೂ ಯಾವ ಪ್ರಧಾನಿಯೂ ದೇಶಕ್ಕೆ ರಕ್ಷಣೆ ನೀಡಿರಲಿಲ್ಲ ಎಂದು ಬಿಂಬಿಸಲಾಗುತ್ತಿದೆ. ಸ್ವಾತಂತ್ರ್ಯ ನಂತರ ದೇಶ ಹಲವು ಪ್ರಧಾನಿಗಳನ್ನು ಕಂಡಿದೆ. ಎಲ್ಲರೂ ಅವರವರ ಅವಧಿಯಲ್ಲಿ ದೇಶದ ರಕ್ಷಣೆಗೆ ಕೊಡುಗೆ ನೀಡಿದ್ದಾರೆ. ಇದೆಲ್ಲವನ್ನೂ ಮರೆಮಾಚಲಾಗುತ್ತಿದೆ. ರಕ್ಷಣಾ ಇಲಾಖೆ ದೇಶಕ್ಕೆ ರಕ್ಷಣೆ ನೀಡುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರ ಶ್ರಮವೇ ದೊಡ್ಡದು ಎಂದು ಬಿಂಬಿಸಲಾಗುತ್ತಿದೆ ಎಂದು ಸಿಎಂ ಆರೋಪಿಸಿದರು.
ಈ ಸಂದರ್ಭ ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡೀಸ್, ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ಮುಖಂಡರಾದ ವಿನಯ್ಕುಮಾರ್ ಸೊರಕೆ, ಎಲ್.ಎಲ್.ಭೋಜೇಗೌಡ, ಫಾರುಖ್, ಗೋಪಾಲ್ ಭಂಡಾರಿ ಅವರೂ ಇದ್ದರು.