Home Mangalorean News Kannada News ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಿಸಲು ಒಗ್ಗಟ್ಟಾಗಿ ಶ್ರಮಿಸೋಣ – ಯಶಪಾಲ್ ಸುವರ್ಣ

ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಿಸಲು ಒಗ್ಗಟ್ಟಾಗಿ ಶ್ರಮಿಸೋಣ – ಯಶಪಾಲ್ ಸುವರ್ಣ

Spread the love

ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಿಸಲು ಒಗ್ಗಟ್ಟಾಗಿ ಶ್ರಮಿಸೋಣ – ಯಶಪಾಲ್ ಸುವರ್ಣ

ಉಡುಪಿ: ಲೋಕಸಭಾ ಚುನಾವಣೆಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ನಾನು ಬಿಜೆಪಿಯ ಅಭ್ಯರ್ಥಿಯಾಗಬೇಕು ಎಂದು ಪಕ್ಷದ ಹಿರಿಯರು,ಕಾರ್ಯಕರ್ತಮಿತ್ರರು ಮತ್ತು ಹಿತೈಷಿಗಳು ಬಯಸಿದ ಕಾರಣ ನಾನು ಟಿಕೇಟು ಅಪೇಕ್ಷಿತನಾಗಿದ್ದೆ. ಟಿಕೇಟು ಅಂತಿಮಗೊಳ್ಳುವ ಕೊನೆಯ ಹಂತದವರೆಗೂ ನನ್ನ ಹೆಸರು ಮುಂಚೂಣಿಯಲ್ಲಿತ್ತು. ದಿಲ್ಲಿಯಲ್ಲಿ ನಡೆದ ವರಿಷ್ಠರ ಸಭೆಯಲ್ಲೂ ಅನೇಕ ಬಾರಿ ನನ್ನಂಥ ಸಾಮಾನ್ಯ ಕಾರ್ಯಕರ್ತನ ಹೆಸರು ಪ್ರಸ್ತಾಪವಾಗಿದೆ. ಇದು ನನ್ನ ಮೇಲೆ ಪಕ್ಷದ ಹಿರಿಯರು ಮತ್ತು ಕಾರ್ಯಕರ್ತ ಮಿತ್ರರು ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿ. ಲೋಕಸಭಾ ಟಿಕೇಟು ವಂಚಿತನಾದರೂ ನಾನು ಸಹಸ್ರಾರು ಕಾರ್ಯಕರ್ತರ ಆದರ ಅಭಿಮಾನಗಳನ್ನು ಗಳಿಸಿರುತ್ತೇನೆ ಇದೂ ನನಗೆ ಚುನಾವಣೆ ಗೆದ್ದಷ್ಟೇ ಖುಷಿ ನೀಡಿದೆ ನನ್ನನ್ನು ಬೆಂಬಲಿಸಿದ ಎಲ್ಲಾ ಕಾರ್ಯಕರ್ತ ಮಿತ್ರರಿಗೂ ಹೃದಯಾಂತರಾಳದ ಕೃತಜ್ಙತೆಗಳು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಅವರು ತಿಳಿಸಿದ್ದಾರೆ.

ನಾನು ಸಂಘಪರಿವಾರದ ಹಿನ್ನೆಲೆ ಇರುವ ಕುಟುಂಬದಿಂದಲೇ ಬೆಳೆದು ಬಂದವನು, ಶಾಲಾ ದಿನಗಳಿಂದಲೂ ಸಂಘಪರಿವಾರದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಬಂದಿರುತ್ತೇನೆ. ಬದುಕಿನಲ್ಲಿ ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ಗುರಿಯೆಡೆಗೆ ಮುನ್ನಡೆಯಬೇಕು ಎಂದು ಸಂಘ ನಮಗೆ ನೀಡಿದ ಶಿಕ್ಷಣ. ಇದಕ್ಕಿಂತ ಉತ್ತಮ ಅವಕಾಶ ನಮಗಾಗಿ ಮುಂದೆ ಕಾಯುತ್ತಿರಬಹುದು ಎಂಬ ಭರವಸೆಯೊಂದಿಗೆ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ನನ್ನ ಕಾರ್ಯವನ್ನು ಮುಂದುವರೆಸಲಿದ್ದೇನೆ. ಪಕ್ಷದ ಹಿರಿಯರು ಹಾಲಿ ಸಂಸದೆ ಕುಮಾರಿ ಶೋಭಾ ಕರಂದ್ಲಾಜೆ ಅವರಿಗೆ ಮತ್ತೆ ಟಿಕೇಟ್ ನೀಡಿದ್ದಾರೆ.ಹಿರಿಯರ ನಿರ್ಧಾರವನ್ನು ಶಿರಸಾ ವಹಿಸಿ ಪಾಲಿಸಬೇಕಾಗಿರುವುದು ಕಾರ್ಯಕರ್ತರಾದ ನಮ್ಮ ಕರ್ತವ್ಯ. ನಮ್ಮ ನಾಯಕಿ ಶೋಭಾ ಕರಂದ್ಲಾಜೆ ಅವರ ಪರವಾಗಿ ಇಂದಿನಿಂದಲೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡು ಕರಾವಳಿಯಲ್ಲಿ ಮತ್ತೊಮ್ಮೆ ಕೇಸರಿ ಕೋಟೆಯನ್ನು ಭದ್ರಪಡಿಸುವ ಕಾರ್ಯಕ್ಕೆ ನಾವೆಲ್ಲಾ ಮುಂದಾಗಬೇಕಿದೆ.ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿ ನಮ್ಮ ಅಭ್ಯರ್ಥಿ ಕಳೆದ ಬಾರಿಗಿಂತ ಎರಡು ಲಕ್ಷಕ್ಕೂ ಅಧಿಕ ಮತದಿಂದ ಜಯಗಳಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ

ವ್ಯಕ್ತಿಗಿಂಥ ಪಕ್ಷ, ಪಕ್ಷಕ್ಕಿಂತ ರಾಷ್ಟ್ರ ಮುಖ್ಯ ಎಂಬ ಚಿಂತನೆಯನ್ನು ಅಳವಡಿಸಿಕೊಂಡವರು ನಾವು. ಟಿಕೇಟಿನ ಚರ್ಚೆಯನ್ನು ಇನ್ನೂ ಮುಂದುವರೆಸಿ ಗೊಂದಲ ಸೃಷ್ಟಿಸಿ ನಮ್ಮ ಎದುರಾಳಿಗಳಿಗೆ ಪರೋಕ್ಷವಾಗಿ ಸಹಕಾರ ನೀಡುವುದನ್ನು ಬಿಟ್ಟು ರಾಷ್ಟ್ರದ ಉನ್ನತಿಗಾಗಿ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಏಕನಿಷ್ಟೆಯಿಂದ ಪಕ್ಷಕ್ಕಾಗಿ ದುಡಿಯೋಣ ನಮ್ಮೆಲ್ಲರ ಹೆಮ್ಮೆಯ ನಾಯಕ ನರೇಂದ್ರ ಮೋದಿ ಅವರು ೩೬೦ಕ್ಕೂ ಅಧಿಕ ಸಂಸದರ ಬೆಂಬಲದೊಂದಿಗೆ ಮತ್ತೊಮ್ಮೆ ದೇಶದ ಪ್ರಧಾನಿ ಹುದ್ದೆ ಅಲಂಕರಿಸುವಂತೆ ಮಾಡೋಣ ಎಂದು ಅವರು ತನ್ನ ಬೆಂಬಲಿಗರಿಗೆ ಕರೆ ನೀಡಿದ್ದಾರೆ.


Spread the love

Exit mobile version