Home Mangalorean News Kannada News ಮೋದಿ ಸರಕಾರ ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುತ್ತಿದೆ – ದಿನೇಶ್ ಗುಂಡೂರಾವ್

ಮೋದಿ ಸರಕಾರ ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುತ್ತಿದೆ – ದಿನೇಶ್ ಗುಂಡೂರಾವ್

Spread the love

ಮೋದಿ ಸರಕಾರ ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುತ್ತಿದೆ – ದಿನೇಶ್ ಗುಂಡೂರಾವ್

ಕುಂದಾಪುರ: ಸುಳ್ಳುಗಳನ್ನೇ ಹೇಳುತ್ತಿರುವ ಮೋದಿ ಸರಕಾರ ದೇಶದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಅಗತ್ಯವಸ್ತುಗಳ ಬೆಲೆಗಳು ಏರುತ್ತಿದ್ದರೂ ಕೇಂದ್ರ ಸರಕಾರ ಅತ್ತ ಗಮನ ಹರಿಸದೆ ಅಧಿಕಾರಕ್ಕಾಗಿ ವಿವಿಧ ರಾಜ್ಯಗಳಲ್ಲಿ ಶಾಸಕರ ಖರೀದಿಗೆ ಕೋಟಿ ಕೋಟಿ ಖರ್ಚು ಮಾಡುತ್ತಿದೆ. ಹಿಂದು ಮುಸ್ಲಿಂರಲ್ಲಿ ಒಡಕು ಉಂಟುಮಾಡುವ ಮೂಲಕ ಹೆಣದ ಮೇಲೆ ರಾಜಕೀಯ ಮಾಡಲು ಹೊರಟಿದೆ. ಮುಖ್ಯ ಮಂತ್ರಿ ಸಿದ್ಧರಾಮಯ್ಯರವರ ಮೇಲೆ ಗೂಬೆ ಕುರಿಸುವ ಪ್ರಯತ್ನಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್  ಹೇಳಿದರು.

ಅವರು ಮಂಗಳವಾರ ಬೈಂದೂರು  ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ವಿವಿಧ ಘಟಕಗಳ ಪದಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

  ಕಾರ್ಯಕರ್ತರು ಬೂತ್‍ಮಟ್ಟದಲ್ಲಿ ಸಂಘಟಿತರಾಗಿ ಸರಕಾರದ ಸಾಧನೆ ಹಾಗೂ ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ತಿಳಿಸಬೇಕು. ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಕಪ್ಪುಚುಕ್ಕೆ, ಕಳಂಕ ತರಲು ಸರಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಬಿಜೆಪಿ ಹಾಗೂ ಸಂಘಪರಿವಾರ ನಡೆಸುತ್ತಿದೆ. ಕರಾವಳಿ ಪ್ರದೇಶಗಳಲ್ಲಿ ಕೋಮುಗಲಭೆ ಸೃಷ್ಟಿಸಿ ದ್ವೇಷ ಹರಡುವ ಹಾಗೂ ಕಾನೂನು ಸುವ್ಯವಸ್ಥೆ ಹಾಳು ಮಾಡುವ ಸಂಚು ರೂಪಿಸುತ್ತಿದೆ. ಕೋಮು ಗಲಭೆ ಸೃಷ್ಟಿಸಿ ಹೆಣದ ಮೇಲೆ ರಾಜಕಾರಣ ಮಾಡುವ ಕೆಟ್ಟ ವ್ಯವಸ್ಥೆ ಬಿಜೆಪಿ ಮಾಡುತ್ತಿದ್ದು, ಜನರಿಗೆ ಸುಳ್ಳು ಹೇಳಿ ಜನರ ಮನಸ್ಸನ್ನು ಕೆಡಿಸುವ ಕೆಲಸ ಮಾಡುತ್ತಿದೆ.  ರಾಜ್ಯದಲ್ಲಿ ಬಿಜೆಪಿ ಒಡೆದಾಳುವ ನೀತಿ ಅನುಸರಿಸುತ್ತಿದೆ. ಯುವಕರನ್ನು ತಪ್ಪು ದಾರಿಗೆ ಎಳೆಯುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಅಮಿತಾ ಷಾ ಮತ್ತು ನರೇಂದ್ರ ಮೋದಿಯವರು ಗುಜರಾತ್‍ನಲ್ಲಿ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಸಾಕಷ್ಟು ಹಣ ಖರ್ಚು ಮಾಡುತ್ತಿದ್ದಾರೆ. ಚುನಾವಣೆಗಳಲ್ಲಿ ಕೋಟಿ ಕೋಟಿ ಹಣವನ್ನು ಸುರಿಯುತ್ತಿದ್ದಾರೆ ಎಂದು ಆರೋಪಿಸಿದ ಅವರು ರಾಜ್ಯದ ಜನರು ಬಹಳ ಎಚ್ಚರಿಕೆಯಿಂದ ಇರಬೇಕು. ಮುಂಬರು ರಾಜ್ಯ ವಿಧಾನಸಭಾ ಚುನಾವಣೆ ದೇಶದ ದಿಕ್ಸೂಚಿಯನ್ನು ಬದಲಿಸುವ ಚುನಾವಣೆಯಾಗಬೇಕು. ಪ್ರಜಾತಂತ್ರಕ್ಕೆ ವಿರುದ್ಧವಾಗಿ ಹೋಗುತ್ತಿರುವ ಬಿಜೆಪಿಗೆ ಈ ಚುನಾವಣೆ ಪಾಠವಾಗಬೇಕು. ಉಡುಪಿ ಜಿಲ್ಲೆಯಲ್ಲಿ ಐದು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸುವ ವಾತಾವರಣವಿದ್ದು, ಈ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ಇಲ್ಲದಂತೆ ಮಾಡಬೇಕಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ರಾಜ್ಯ ಸರಕಾರದ ಜನಪ್ರಿಯ ಯೋಜನೆಗಳನ್ನು ಮನೆಮನೆಗಳಿಗೆ ತಲುಪಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಅನಂತರ ಬಿಪಿಲ್‍ಎಲ್ ಕಾರ್ಡ್‍ನ್ನು ಸರಳವಾಗಿ ಪಡೆಯುವಂತೆ ಮಾಡಿದೆ, ಅನಿಲ್ ಸಂಪರ್ಕವನ್ನು ಉಚಿತವಾಗಿ ನೀಡುತ್ತಿದೆ. ಬಡವರ ಮನೆ ನಿರ್ಮಾಣಕ್ಕೆ 1.50 ಲಕ್ಷ ರೂ. ಸಹಾಯಧನ, ಬಾವಿ ನಿರ್ಮಾಣಕ್ಕೆ ರೂ. 82 ಸಾವಿರ, ಹಟ್ಟಿ ನಿರ್ಮಾಣಕ್ಕೆ 42 ಸಾವಿರವನ್ನು ರಾಜ್ಯ ಸರಕಾರದಿಂದ ಪಡೆಯಬಹುದಾಗಿದ್ದು ಇದು ಭಾಗ್ಯಗಳ ಸರಕಾರವಾಗಿದೆ ಎಂದರು. ರಾಜ್ಯ ಸರಕಾರದ  ಕಾರ್ಯಕ್ರಮಗಳು ಪ್ರತಿಯೊಂದು ಜಾತಿ, ವರ್ಗ, ಊರು, ಕೇರಿ, ಮನೆಗಳನ್ನು ತಲುಪಿದೆ. ರಾಜ್ಯದಲ್ಲಿ ಹಕ್ಕುಪತ್ರಕ್ಕಾಗಿ ಹಾಗೂ ಅಕ್ರಮಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ನಿವೇಶನ ಮಂಜೂರು ಮಾಡಲಾಗುತ್ತಿದ್ದು ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು 10 ದಿನದ ಒಳಗೆ ರಾಜ್ಯ ಸಚಿವ ಸಂಪುಟ ಬಗೆಹರಿಸಲಿದೆ. ಹಿಂದಿನ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಸುಮಾರು 77 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ ದಾಖಲೆಗಳಿದ್ದರೆ, ಈಗಿನ ಸಿದ್ಧರಾಮಯ್ಯನವರ ಸರಕಾರ ಸಹಕಾರಿ ಬ್ಯಾಂಕುಗಳಲ್ಲಿನ ರೈತರ 50 ಸಾವಿರ ರೂ.ಗಳ ಸಾಲಮನ್ನಾ ಮಾಡಿದ್ದಾರೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲಮನ್ನಾ ಮಾಡುವಂತೆ ಅವರು ಒತ್ತಾಯಿಸಿದರು. ಬಿಜೆಪಿ ಯುವಕರ ಕೈಗೆ ದೊಣ್ಣೆಗಳನ್ನು ನೀಡುತ್ತಿದೆ, ಕಾಂಗ್ರೆಸ್ ಪಕ್ಷ ಯುವಕರನ್ನು ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತದೆ ಎಂದರು.

ಎಐಸಿಸಿ ವೀಕ್ಷಕ ಪಿ.ಸಿ.ವಿಷ್ಣುನಾದನ್  ಮಾತನಾಡಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ದೇಶದ ಅತ್ಯುತ್ತಮ ಮಾದರಿ ಸರಕಾರವಾಗಿದ್ದು, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ವಿವಿಧ ಭಾಗ್ಯ ಯೋಜನೆಗಳ ಮೂಲಕ ಚುನಾವಣೆ ಸಂದರ್ಭ ನೀಡಿದ ಪ್ರಣಾಳಿಕೆಯಲ್ಲಿನ ಶೇ.95ರಷ್ಟು ಭರವಸೆಗಳು ಕಾರ್ಯಗತಗೊಂಡಿದೆ. ಮುಂದಿನ ದಿನಗಳಲ್ಲಿ ಎದುರಾಗುವ ಚುನಾವಣೆಯನ್ನು ಪಕ್ಷದ ಕಾರ್ಯಕರ್ತರು ಗಂಭೀರವಾಗಿ ಪರಿಗಣಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಶ್ರಮಿಸಬೇಕು.

ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಸುಳ್ಳು ಹೇಳುವುದರಲ್ಲಿ ಹಾಗೂ ವಿದೇಶ ಪ್ರವಾಸದಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಮೋದಿಯವರು ಲೋಕಸಭಾ ಚುನಾವಣೆ ಸಂದರ್ಭ ವಿದೇಶದಲ್ಲಿರುವ ಕಪ್ಪುಹಣವನ್ನು ವಾಪಾಸು ತಂದು ಪ್ರತಿಯೊಬ್ಬ ನಾಗರಿಕರ ಬ್ಯಾಂಕ್ ಖಾತೆಗೆ 15 ಲಕ್ಷ ಜಮೆ ಮಾಡುವ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಕಪ್ಪು ಹಣ ವಾಪಾಸು ತರಲು ಸಾಧ್ಯವಾಗಿಲ್ಲ. ಪೆಟ್ರೋಲ್, ಡೀಸೆಲ್, ಎಲ್‍ಪಿಜಿ ಸಹಿತ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಭಯೋತ್ಪಾದನೆ ನಿರ್ಮೂಲನವಾಗಿಲ್ಲ. ಸಬ್‍ಕಾ ಸಾತ್ ಸಬಕಾ ವಿಕಾಸ ಎಂದು ಹೇಳುತ್ತಾ ಪ್ರತಿಯೊಂದು ಹಂತದಲ್ಲಿ ಸುಳ್ಳು ಹೇಳಿ ಜನರ  ಮನಸ್ಸನ್ನು ಕೆಡಿಸುವ ಕೆಲಸ ಬಿಜೆಪಿ ಹಾಗೂ ಆರೆಸ್ಸೆಸ್  ಮಾಡುತ್ತಿದೆ. ಹೀಗಾಗಿ ಜನರಿಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಸಾಧನೆಯ, ಸತ್ಯಾಂಶ, ನಿಜಾಂಶವನ್ನು ಹಾಗೂ ನರೇಂದ್ರ ಮೋದಿಯವರ ಕೇಂದ್ರ ಸರಕಾರದ ವೈಫಲ್ಯಗಳನ್ನು ಜನರಿಗೆ ಮುಟ್ಟಿಸುವ ಕಾರ್ಯಕರ್ತರಿಂದ ನಡೆಯಬೇಕು ಎಂದು ಅವರು ಹೇಳಿದರು.

ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರ ಸೂಚನೆಯಂತೆ ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವ ಕಾರ್ಯ ನಡೆಸಲಾಗುತ್ತಿದೆ. ಪಕ್ಷದ ಬಲವರ್ಧನೆಗೆ ಸಂಘಟನೆಗೆ ಬ್ಲಾಕ್ ಮಟ್ಟದ ಕಾರ್ಯಕರ್ತರು, ಮುಖಂಡರ ಸಲಹೆ ಪಡೆದು ಮುಂದೆ ಎದುರಾಗುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲಾಗುತ್ತಿದೆ. ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಹಾಗೂ ಸಂಘಪರಿವಾರ ಅನುಸರಿಸುತ್ತಿರುವ ನೀತಿ ಸಫಲವಾಗುದಿಲ್ಲ ಎಂದು ಅವರು ಹೇಳಿದರು.

ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಪಕ್ಷದ ಮುಖಂಡ ಮಂಜುನಾಥ ಭಂಡಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಆರ್.ಸಭಾಪತಿ, ಕೆಪಿಸಿಸಿ ಕಾರ್ಯದರ್ಶಿಗಳಾದ ವೆರೋನಿಕಾ ಕರ್ನೇಲಿಯೊ, ಎಂ.ಎಸ್.ಮಹಮ್ಮದ್ , ಮುಖಂಡರಾದ ಮುರಳೀ ಶೆಟ್ಟಿ ಇಂದ್ರಾಳಿ, ಅಮೃತ್ ಶೆಣೈ, ಮುನಿಯಾಲು ಉದಯಕುಮಾರ್ ಶೆಟ್ಟಿ, ನವೀನಚಂದ್ರ ಶೆಟ್ಟಿ, ಸತ್ಯನ್ ಪುತ್ತೂರು, ಸರಳಾ ಕಾಂಚನ್, ಗೌರಿ ದೇವಾಡಿಗ, ಅಶೋಕಕುಮಾರ್ ಕೊಡವೂರು, ನರಸಿಂಹಮೂರ್ತಿ ಉಡುಪಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ರಾಜು ಪೂಜಾರಿ ಬೈಂದೂರು, ರಾಜು ದೇವಾಡಿಗ ತ್ರಾಸಿ, ಜಿಪಂ, ತಾಪಂ ಸದಸ್ಯರು, ವಿವಿಧ ಘಟಕಗಳ ಪದಾಧಿಕಾರಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.

 


Spread the love
1 Comment
Inline Feedbacks
View all comments
ganesh
7 years ago

Houdappa houdu adare ninu satya harischandra tundu
Alwa

wpDiscuz
Exit mobile version