ಮೋದಿ ಸರ್ಕಾರದಿಂದ ಬಡವರ ಹಿತರಕ್ಷಣೆ – ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್
ಮಂಗಳೂರು : ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ನವಂಬರ್ ಅಂತ್ಯದವರೆಗೆ ವಿಸ್ತರಿಸುವ ಮೂಲಕ ಕರೊನಾ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾದ ಬಡವರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಮಹತ್ವದ ನೆರವು ಒದಗಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ಕುಮಾರ್ ಕಟೀಲ್ ತಿಳಿಸಿದ್ದಾರೆ.
ದೇಶದ ಆರ್ಥಿಕ ಚಟುವಟಿಕೆ ಬಲಪಡಿಸಲು 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದೀಗ ಹಬ್ಬಗಳನ್ನು ಗಮನದಲ್ಲಿರಿಸಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಹಾಗೂ ಇತರ ಯೋಜನೆಗಳನ್ನು ದೀಪಾವಳಿ ತನಕ ವಿಸ್ತರಿಸಲು ನಿರ್ಧರಿಸಿದ್ದು ಸ್ವಾಗತಾರ್ಹ. 80 ಕೋಟಿ ಜನರಿಗೆ ಮುಂದಿನ ಐದು ತಿಂಗಳು ಉಚಿತ ಪಡಿತರ ಪಡೆಯಲು ಕೇಂದ್ರದ ಈ ಘೋಷಣೆ ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಒಂದು ದೇಶ ಒಂದು ರೇಶನ್ ಕಾರ್ಡ್ ಯೋಜನೆ ಶೀಘ್ರ ಜಾರಿ ಮಾಡುವುದಾಗಿ ಪ್ರಧಾನಿ ಮೋದಿ ಅವರು ಭರವಸೆ ನೀಡಿದ್ದಾರೆ. ಅನ್ನದಾತನ ಸಂಕಷ್ಟ ನಿವಾರಣೆಗೆ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಕರೊನಾ ಹರಡದಂತೆ ತಡೆಯಲು ರೂಪಿಸಿದ ನಿಯಮಗಳನ್ನು ಜನತೆ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸರ್ಕಾರದ ಜತೆ ಸಹಕರಿಸಬೇಕೆಂದು ನಳಿನ್ ಕುಮಾರ್ ಕಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.