ಮ್ಯಾನೇಮ್ಮೆಂಟ್ ಫೆಸ್ಟ್ ‘ರೀವಿಲೇಷನ್-2020’ಯ ಉದ್ಘಾಟನೆ
ಮೂಡುಬಿದಿರೆ: ಔಪಚಾರಿಕ ಶಿಕ್ಷಣದೊಂದಿಗೆ ಜೀವನ ಶಿಕ್ಷಣವನ್ನು ಕಲಿಯದೆ ಹೋದರೆ ಸಂಕಷ್ಟದ ದಿನಗಳನ್ನ ಬಾಳಿನಲ್ಲಿ ಎದುರಿಸಬೇಕಾಗುತ್ತದೆ. ಆದ್ದರಿಂದ ಬದುಕಿನ ನಾಳೆಯ ಭವಿತವ್ಯಕ್ಕಾಗಿ ಜೀವನ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೆಗೌಡ ಹೇಳಿದರು.
ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಗಂಣದಲ್ಲಿ ನಡೆದ ಮ್ಯಾನೇಜ್ಮೆಂಟ್ ವಿಭಾಗದ ವತಿಯಿಂದ ನಡೆದ ರಾಜ್ಯಮಟ್ಟದ ಅಂತರ್ ಕಾಲೇಜು ಫೆಸ್ಟ್ ‘ರೀವಿಲೇಷನ್-2020’ನ್ನು ಉದ್ಘಾಟಿಸಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಪಾಯೋಗಿಕ ಶಿಕ್ಷಣ ನೀಡುವುದರ ಮೂಲಕ ಸರ್ವತೋಮುಖ ಬೆಳವಣಿಗೆಗೆ ಹೆಚ್ಚು ಗಮನ ನೀಡಲಾಗುತ್ತದೆ. ಇಲ್ಲಿ ದೇಶ ವಿದೇಶದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವುದರಿಂದ ಸರ್ವ ಜನಾಂಗದ ಶಾಂತಿಯ ತೋಟವಾಗಿ ಮಾರ್ಪಟ್ಟಿದೆ ಎಂದರು.
ಪ್ರತಿಯೊಬ್ಬರು ಜೀವನದಲ್ಲಿ ಒಂದಲ್ಲ ಒಂದು ತಪ್ಪನ್ನು ಮಾಡಿದವರೆ, ಆದರೆ ಆ ತಪ್ಪನ್ನ ತಿದ್ದಿಕೊಂಡು, ಪುನಃ ಮರುಕಳಿಸದಂತೆ ನೋಡಿಕೊಳ್ಳುವುದು ನಮ್ಮ ಏಳಿಗೆಗೆ ಸಹಕಾರಿ. ಛಲ ಬಿಡದೆ ಮಾಡುವ ಪ್ರತಿ ಕಾರ್ಯವು ಯಶಸ್ಸನ್ನು ತಂದು ಕೊಡುತ್ತದೆ ಎಂದರು. ರಾಮ ರಾಜ್ಯದ ಕಲ್ಪನೆ ಇಂದಿನ ರಾಜಕಾರಣಿಗಳಲ್ಲಿ ಮರೆಯಾಗುತ್ತಿದ್ದು, ಸ್ವಾರ್ಥಪರತೆ ಹೆಚ್ಚಾಗಿದೆ. ಆದ್ದರಿಂದ ರಾಷ್ಟ್ರ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತ ಯುವ ಜನತೆ ತಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡದೆ, ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ ಆಳ್ವ ಮಾತನಾಡಿ, ಜೀವನದಲ್ಲಿ ಹಲವು ಹೋರಾಟಗಳನ್ನ ಎದುರಿಸಬೇಕಾಗುತ್ತದೆ. ಆದರೆ ಛಲಬಿಡದೇ ತಾಳ್ಮೆಯಿಂದ ಹೋರಾಟ ಮಾಡಿದರೆ ಗುರಿಯನ್ನು ತಲುಪಲು ಸಾಧ್ಯ. ನಮ್ಮಲ್ಲಡಗಿರುವ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಇಂತಹ ವೇದಿಕೆಗಳು ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು. ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥೆ ಸುರೇಖ, ಉಪನ್ಯಾಸಕರಾದ ಚೈತ್ರ ರಾವ್ ಹಾಗೂ ಗುರುಪ್ರಸಾದ್ ಮತ್ತು ವಿದ್ಯಾರ್ಥಿ ಸಂಯೋಜಕರಾದ ಶ್ರೇಯಾ ಶೆಟ್ಟಿ ಉಪಸ್ಥಿತರಿದ್ದರು. ದೇಚಾಮ್ಮ ನಿರೂಪಿಸಿ, ರಾಹುಲ್ ಸ್ವಾಗತಿಸಿ ಹಾಗೂ ಪ್ರೀತೇಶ್ ವಂದಿಸಿದರು.