ಮ0ಗಳೂರು : ಎರಡು ದಿನಗಳ ಕಾಲ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ನಡೆದ ಮಂಗಳೂರು ಉದ್ಯೋಗ ಮೇಳವು ಶುಕ್ರವಾರ ಸಮಾಪನಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಉದ್ಯೋಗಮೇಳದ ರುವಾರಿ, ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಈ ಉದ್ಯೋಗ ಮೇಳವು ಚಾರಿತ್ರಿಕವಾಗಿದ್ದು. ಉದ್ಯೋಗಾಂಕ್ಷಿಗಳ ಸ್ಪಂದನೆಯು ಅಭೂತಪೂರ್ವವಾಗಿದೆ ಎಂದರು.
ಸಾಕಷ್ಟು ಉನ್ನತ ವಿದ್ಯಾಸಂಸ್ಥೆಗಳನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತೀವರ್ಷ ಒಂದು ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಕಲಿತು ಹೊರಗೆ ಬರುತ್ತಿದ್ದಾರೆ. ಉದ್ಯೋಗವು ಇವರ ಮುಂದೆ ದೊಡ್ಡ ಸವಾಲಾಗಿದೆ. ಉದ್ಯೋಗವಿಲ್ಲದೇ ಬೇರೆ ರಾಜ್ಯ ಹಾಗೂ ವಿದೇಶಗಳಿಗೂ ತೆರಳುತ್ತಿದ್ದಾರೆ. ಮಂಗಳೂರು ಉದ್ಯೋಗಮೇಳವು ಇಲ್ಲಿನ ಯುವಜನತೆಗೆ ಸಾಕಷ್ಟು ನೆಮ್ಮದಿ ನೀಡಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದ ಅನೇಕ ಕಂಪೆನಿ, ಕೈಗಾರಿಕಾ ಸಂಸ್ಥೆಗಳ ಮಾನವ ಸಂಪನ್ಮೂಲ ಅಧಿಕಾರಿಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯವರೇ ಸಾಕಷ್ಟು ಮಂದಿ ಇರುವುದು ಕಂಡುಬಂದಿದ್ದು, ಇದು ಹೆಮ್ಮೆ ಮೂಡಿಸುತ್ತಿದೆ. ಇದು ಇಲ್ಲಿನ ಪ್ರತಿಭೆಗಳನ್ನು ವ್ಯಕ್ತಪಡಿಸುತ್ತದೆ. ಮಂಗಳೂರು ಉದ್ಯೋಗಮೇಳದಲ್ಲಿ ಸುಮಾರು 22 ರಾಜ್ಯಗಳ ಉದ್ಯೋಗಾಂಕ್ಷಿಗಳು ಹಾಜರಾಗಿದ್ದಾರೆ ಎಂದು ಸಚಿವ ರಮಾನಾಥ ರೈ ತಿಳಿಸಿದರು.
ಮಂಗಳೂರು ಉದ್ಯೋಗಮೇಳದಲ್ಲಿ ಭಾಗವಹಿಸಿದ ಎಲ್ಲಾ ಕಂಪೆನಿಗಳಿಗೆ, ಉದ್ಯೋಗಾಂಕ್ಷಿಗಳಿಗೆ, ಕೆನರಾ ಇಂಜಿನಿಯರಿಂಗ್ ಕಾಲೇಜು, ಆಳ್ವಾಸ್ ಶಿಕ್ಷಣ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮಾಧ್ಯಮಗಳಿಗೆ ಸಚಿವರು ಕೃತಜ್ಞತೆ ಸಲ್ಲಿಸಿದರು.
ಉಡುಪಿಯಲ್ಲೂ ಉದ್ಯೋಗಮೇಳ: ಮುಖ್ಯ ಅತಿಥಿಯಾಗಿದ್ದ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಶಿಕ್ಷಣದಲ್ಲಿ ಮುಂದಿರುವ ಅವಿಭಜಿತ ದ.ಕ. ಜಿಲ್ಲೆಯಲ್ಲಿ ನಿರುದ್ಯೋಗವೂ ಸಾಕಷ್ಟಿದೆ. ಈ ನಿಟ್ಟಿನಲ್ಲಿ ಮಂಗಳೂರು ಉದ್ಯೋಗ ಏರ್ಪಡಿಸುವ ಮೂಲಕ ಸಚಿವ ರಮಾನಾಥ ರೈ ಅವರು ರಾಜ್ಯದ ಇತರ ಸಚಿವರಿಗೆ ಮಾದರಿಯಾಗಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲೂ ಉದ್ಯೋಗ ಮೇಳ ಏರ್ಪಡಿಸುವ ಉದ್ದೇಶವಿದೆ ಎಂದು ಸಚಿವ ಸೊರಕೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಉದ್ಯೋಗಮೇಳದಲ್ಲಿ ಭಾಗವಹಿಸಿದ ಎಲ್ಲಾ ಉದ್ಯಮ, ಕಂಪೆನಿಗಳಿಗೆ ಸ್ಮರಣಿಕೆಯನ್ನು ಸಚಿವರು ವಿತರಿಸಿದರು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಜಿ.ಪಂ. ಸಿಇಓ ಶ್ರೀವಿದ್ಯಾ, ಅಪರ ಜಿಲ್ಲಾಧಿಕಾರಿ ಕುಮಾರ್, ಉಪವಿಭಾಗಾಧಿಕಾರಿ ಡಾ. ಅಶೋಕ್, ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್.ಮುಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಮಮತಾ ಗಟ್ಟಿ, ವಿವೇಕ್ ಆಳ್ವ, ಪಿಯೂಸ್ ರೋಡ್ರಿಗಸ್, ಯು.ಟಿ. ಇಫ್ತಿಕಾರ್, ಕೆನರಾ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಗಣೇಶ್ ಭಟ್ ಮತ್ತಿತರರು ಇದ್ದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಕಾರ್ಯಕ್ರಮ ನಿರೂಪಿಸಿದರು.
12470 ಭಾಗಿ: ಎರಡು ದಿನಗಳ ಕಾಲ ನಡೆದ ಮಂಗಳೂರು ಉದ್ಯೋಗ ಮೇಳಕ್ಕೆ ಒಟ್ಟು 16695 ಮಂದಿ ಹೆಸರು ನೋಂದಾಯಿಸಿದ್ದರು. ಇವರಲ್ಲಿ ಒಟ್ಟು 12470 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಮೊದಲ ದಿನ 10006 ಹಾಗೂ 2 ನೇ ದಿನ 2464 ಅಭ್ಯರ್ಥಿಗಳು ನೋಂದಾಯಿಸಿ ಹಾಜರಾಗಿದ್ದರು.
ಒಟ್ಟು 223 ಸಂಸ್ಥೆಗಳು ಉದ್ಯೋಗಮೇಳದಲ್ಲಿ ಭಾಗವಹಿಸಿ ನೇಮಕಾತಿ ಪ್ರಕ್ರಿಯೆ ನಡೆಸಿದೆ. ಈ ಪೈಕಿ 165 ಸಂಸ್ಥೆಗಳು ತಮ್ಮ ನೇಮಕಾತಿಯನ್ನು ಪೂರ್ಣಗೊಳಿಸಿ, 655 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, 3200 ಅಭ್ಯರ್ಥಿಗಳನ್ನು ಜೇಷ್ಠತಾ ಪಟ್ಟಿ ಮಾಡಿದೆ. ಉಳಿದ 58 ಸಂಸ್ಥೆಗಳು ಮುಂದಿನ 1 ವಾರದಲ್ಲಿ ನೇಮಕಾತಿ ಪೂರ್ಣಗೊಳಿಸಲಿದೆ. ಅಂತಿಮವಾಗಿ ಸುಮಾರು 5000 ಜನರಿಗೆ ಉದ್ಯೋಗ ದೊರಕುವ ನಿರೀಕ್ಷೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.