ಮ0ಗಳೂರು: ಜನವರಿ 17ರಿಂದ 20ರವರೆಗೆ ರವರೆಗೆ ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಚಾಲನ ಸಮಿತಿ ಸಭೆಯು ದ.ಕ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅಧ್ಯಕ್ಷತೆಯಲ್ಲಿ ಜರುಗಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ರಾಮಕೃಷ್ಣ ರಾವ್, ಈ ವರ್ಷದಲ್ಲಿ ನಡೆಯಲಿರುವ ಪಲ್ಸ್ ಪೋಲಿಯೋ ಕಾರ್ಯಕ್ರಮದ ಕ್ರಿಯಾ ಯೋಜನೆಯನ್ನು ಸಭೆಯ ಗಮನಕ್ಕೆ ತಂದರು. ಈ ವರ್ಷದ 0-5 ವರ್ಷದೊಳಗಿನ ಗ್ರಾಮಾಂತರ-115790, ನಗರ-53157, ಆಗಿದ್ದು ಮಕ್ಕಳ ಒಟ್ಟು ಸಂಖ್ಯೆ-168947 ಈ ವರ್ಷದ ಸಾಧಿಸ ಬೇಕಾದ ಗುರಿಯಾಗಿರುತ್ತದೆ. ಲಸಿಕಾ ಬೂತ್/ತಂಡಗಳು-921, ಲಸಿಕಾದಾರರ ಸಂಖ್ಯೆ-3828, ಮೇಲ್ವಿಚಾರಕರ ಸಂಖ್ಯೆ -192 ಟ್ರಾನ್ಸಿಟ್ ತಂಡ-28 ಹಾಗೂ ಸಂಚಾರಿ ತಂಡಗಳು-8 ಕರ್ತವ್ಯ ನಿರ್ವಹಿಸುವ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ ಜಿಲ್ಲಾಧಿಕಾರಿಗಳು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಎಲ್ಲಾ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯ, ಸರಕಾರೇತರ ಸಂಘ ಸಂಸ್ಥೆಗಳು, ಎಲ್ಲಾ ನರ್ಸಿಂಗ್ ಕಾಲೇಜುಗಳು, ಇತರ ಎಲ್ಲಾ ಇಲಾಖೆಗಳ ಸಹಕಾರ ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಯಶಸ್ವಿಗೊಳಿಸಲು ತಿಳಿಸಿದರು. ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಮಾಡುವ ಬಗ್ಗೆ ಹಾಗೂ ಅರ್ಹ ಫಲಾನುಭವಿಗಳಿಗೆ ಈ ಕಾರ್ಯಕ್ರಮ ತಲುಪಿಸುವ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದರು. ಜಿಲ್ಲೆಯ ಫಲಾನುಭವಿಗಳು ಅಲ್ಲದೆ ಯಾತ್ರಿಕರ ಮೂಲಕ ಬಂದ ಫಲಾನುಭವಿಗಳನ್ನು ಪ್ರತ್ಯೇಕವಾಗಿ ಗುರುತಿಸಿ, ಅವರಿಗೂ ಲಸಿಕೆ ತಲುಪಿಸುವಂತೆ ತಿಳಿಸಿದರು.
ಲಸಿಕಾ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ 2 ದಿನ ಮುಂಚಿತವಾಗಿ ನಿರಂತರ ವಿದ್ಯುತ್ ಪೂರೈಸುವ ಮೂಲಕ ಲಸಿಕಾ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಹಕರಿಸುವಂತೆ ಮೆಸ್ಕಾಂ ಅಧಿಕಾರಿಯವರಿಗೆ ಅಧ್ಯಕ್ಷರು ಸೂಚಿಸಿದರು. ಲಸಿಕಾ ತಂಡದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ/ಮೇಲ್ವಿಚಾರಕರಿಗೆ ಯಾವುದೇ ವಾಹನಗಳ ಕೊರತೆಯಿಂದ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಗೆ ಅಧ್ಯಕ್ಷರು ಸೂಚಿಸಿದರು. ಅಲ್ಲದೆ ವೈದ್ಯಾಧಿಕಾರಿಗಳು ಮುಂಜಾಗ್ರತಾಕ್ರಮವಾಗಿ ವಾಹನಗಳಿಲ್ಲದೆ ತೊಂದರೆಯಾಗದ ರೀತಿಯಲ್ಲಿ ಕ್ರಮವಹಿಸುವ ಬಗ್ಗೆ ತಿಳಿಸಿದರು. ಗ್ರಾಮ ಮತ್ತು ಪಟ್ಟಣಗಳಲ್ಲಿ ಧ್ವನಿವರ್ಧಕಗಳ ಮೂಲಕ ಪ್ರಚಾರ, ಕರಪತ್ರಗಳ ವಿತರಣೆ ಹಾಗೂ ಬ್ಯಾನರ್‍ಗಳನ್ನು ಅಳವಡಿಸುವ ಬಗ್ಗೆ ಹಾಗೂ ಕೇಬಲ್ ಟಿ.ವಿಗಳಲ್ಲಿ ಪ್ರಚಾರ ಮಾಡುವ ಬಗ್ಗೆ ಸೂಚಿಸಿದರು. ಕಾರ್ಯಕ್ರಮಕ್ಕೆ ಪುರಸಭೆ,ನಗರ ಪಂಚಾಯತ್, ಮಹಾನಗರ ಪಾಲಿಕೆ ಗ್ರಾಮಾ ಪಂಚಾಯತ್ ಸಹಕಾರ ನೀಡುವಂತೆ ಸೂಚಿಸಿದರು. ತಾಲೂಕು ಮಟ್ಟದಲ್ಲಿ ತಾಲೂಕು ಚಾಲನಾ ಸಮಿತಿ ಸಭೆಯನ್ನು ನಡೆಸಲು ಸೂಚಿಸಿದರು.
ಜಿಲ್ಲಾ ಮಟ್ಟದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಚಾಲನ ಸಮಿತಿ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಐ.ಶ್ರೀವಿದ್ಯಾ, ವಿಶ್ವ ಸಂಸ್ಥೆಯ ಸರ್ವಲೆನ್ಸ್ ವೈದ್ಯಾಧಿಕಾರಿ ಡಾ|| ಸತೀಶ್ಚಂದ್ರ ವೆನ್‍ಲಾಕ್ ಆಸ್ಪತ್ರೆ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ|| ರಾಜೇಶ್ವರಿ ದೇವಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ|| ಸಿಕಂದರ್ ಪಾಷಾ ಉಪಸ್ಥಿತರಿದ್ದರು