ಯಕ್ಷಗಾನದಿಂದ ಕಾನೂನು ಸುವ್ಯವಸ್ಥೆ ಹದೆಗೆಡುತ್ತದೆಯೇ? – ಸುನೀಲ್ ಕುಮಾರ್ ಪ್ರಶ್ನೆ
ಕಾರ್ಕಳ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೇ ಯಕ್ಷಗಾನದಿಂದ ಕಾನೂನು ಸುವ್ಯವಸ್ಥೆ ಹದೆಗೆಡುತ್ತದೆಯೇ? ಅಥವಾ ಯಕ್ಷಗಾನದಿಂದ ಯಾರ ಮನಸಿಗಾದರೂ ನೋವಾಗುತ್ತದೆಯೇ? ಎಂದು ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್ ಪ್ರಶ್ನಿಸಿದ್ದಾರೆ.
ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಮುಂಡ್ಲಿಯಲ್ಲಿ ನಿನ್ನೆ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನದ ಆಯೋಜಕರ ಮೇಲೆ ಪ್ರಕರಣ ದಾಖಲಿಸಿರುವ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೇ ನೀವೊಬ್ಬರು ಸಭ್ಯ ಹಾಗೂ ಸುಸಂಸ್ಕೃತ ವ್ಯಕ್ತಿ ಎಂದು ನಾವೆಲ್ಲ ಭಾವಿಸಿದ್ದೇ ಈಗ ಸುಳ್ಳಾಗಿದೆ. ನಿಮ್ಮ ಅವಧಿಯಲ್ಲಿ ಪೊಲೀಸ್ ಇಲಾಖೆ ಎಂಬುದು ಅಭಿವ್ಯಕ್ತಿ ಸ್ವಾತಂತ್ರ್ಯದ ದಮನಕ್ಕೆ ಪದೇ ಪದೇ ಬಳಕೆಯಾಗುತ್ತಿದೆ ಎಂಬುದು ಆತ್ಯಂತ ಬೇಸರದ ಸಂಗತಿಯಾಗಿದ್ದು, ವಾಕ್ ಸ್ವಾತಂತ್ರ್ಯ, ಸಂವಿಧಾನ ಇತ್ಯಾದಿ ವಿಚಾರಗಳು ನಿಮಗೆ ಭಾಷಣದ ಸರಕಾಗಿ ಬಿಟ್ಟಿದೆ.
ಇಲ್ಲವಾದರೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಮುಂಡ್ಲಿಯಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನವನ್ನು ಸ್ಥಳೀಯ ಕಾಂಗ್ರೆಸ್ ಮುಖಂಡನ ದೂರಿನ ಮೇರೆಗೆ ಸ್ಥಗಿತಗೊಳಿಸಲು ಹೊರಟಿದ್ದು ಎಷ್ಟು ಸರಿ? ಯಕ್ಷಗಾನ ಕರಾವಳಿ ಜಿಲ್ಲೆಗಳ ಪ್ರಾರಂಪರಿಕ ಕಲೆಯಾಗಿದ್ದು ರಾತ್ರಿ ಪೂರ್ತಿ ಪ್ರದರ್ಶನಗೊಳ್ಳುತ್ತದೆ. ಆದರೆ ಕಾಂಗ್ರೆಸ್ ನಾಯಕ ದೂರು ಕೊಟ್ಟ ಎಂಬ ಕಾರಣಕ್ಕೆ ಎಸ್ಪಿಯೇ ಯಕ್ಷಗಾನ ನಿಲ್ಲಿಸಲು ಪೊಲೀಸರನ್ನು ಕಳುಹಿಸಿದ್ದು ಎಷ್ಟು ಸರಿ?
ಸಾಲದಕ್ಕೆ ಮರುದಿನ ಯಕ್ಷಗಾನ ಆಯೋಜಕರ ಮೇಲೆ ಮೊಕದ್ದಮೆ ದಾಖಲಿಸುವ ಮೂಲಕ ನಿಮ್ಮ ಪೊಲೀಸರು ಎಫ್ ಐಆರ್ ಸರ್ಕಾರ ನಡೆಸಲು ಹೊರಟಿದ್ದಾರಾ ? ಇಂದು ಯಕ್ಷಗಾನ. ನಾಳೆ ಕಂಬಳ, ಭೂತಕೋಲ ಇತ್ಯಾದಿ ಧಾರ್ಮಿಕ ಆಚರಣೆಗಳನ್ನು ಕಾಂಗ್ರೆಸ್ ನಾಯಕರು ದೂರು ಕೊಟ್ಟರೆಂದು ನಿಲ್ಲಿಸುತ್ತೀರಾ ? ರಾಜ್ಯದ ಮುಖ್ಯಮಂತ್ರಿಯಾಗಬೇಕೆಂಬ ಕನಸು ಕಾಣುತ್ತಿರುವ ನಿಮಗೆ ನಾಡಿನ ಸಾಂಸ್ಕೃತಿಕ ಆಯಾಮದ ಬಗ್ಗೆ ಕಲ್ಫನೆ ಇಲ್ಲವೋ ಅಥವಾ ಇಲಾಖೆಯ ಮೇಲೆ ಹಿಡಿತವಿಲ್ಲವೋ? ಎಂದು ಪ್ರಶ್ನಿಸಿದ್ದಾರೆ.