Home Mangalorean News Kannada News ಯಕ್ಷಗಾನ ಪ್ರಸಂಗ ಕೃತಿಗಳನ್ನು ಸಾಹಿತ್ಯ ಕೃತಿಗಳೆಂದು ಪರಿಗಣಿಸಿ

ಯಕ್ಷಗಾನ ಪ್ರಸಂಗ ಕೃತಿಗಳನ್ನು ಸಾಹಿತ್ಯ ಕೃತಿಗಳೆಂದು ಪರಿಗಣಿಸಿ

Spread the love

ಯಕ್ಷಗಾನ ಪ್ರಸಂಗ ಕೃತಿಗಳನ್ನು ಸಾಹಿತ್ಯ ಕೃತಿಗಳೆಂದು ಪರಿಗಣಿಸಿ

ದೆಹಲಿ: ಕರ್ನಾಟಕದ ಕರಾವಳಿಯ ಕಲೆ ಯಕ್ಷಗಾನ. ಇದರ ಪ್ರಸಂಗ ಕೃತಿಯನ್ನು ಮತ್ತು ಕರ್ನಾಟಕ ಸರ್ಕಾರದ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್ತು ಇತರ ಸಾಹಿತ್ಯ ಪ್ರಕಾರಗಳ ಜೊತೆಗೆ ಸಾಹಿತ್ಯಕೃತಿಎಂದು ಗುರುತಿಸಿ ಪುರಸ್ಕರಿಸಬೇಕು ಹಾಗೂ ಪ್ರಸಂಗ ಕರ್ತರನ್ನು ಕವಿಗಳೆಂದು ಗುರುತಿಸಿ ಗೌರವಿಸಬೇಕು ಎಂದು ದೆಹಲಿ ಕರ್ನಾಟಕ ಸಂಘದಅಧ್ಯಕ್ಷಶ್ರೀ ವಸಂತ ಶೆಟ್ಟಿ ಬೆಳ್ಳಾರೆಯವರು ಅಭಿಪ್ರಾಯಪಟ್ಟರು. ಅವರು ಇಂದು ದೆಹಲಿ ಕರ್ನಾಟಕ ಸಂಘ ಹಾಗೂ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಜೊತೆಯಾಗಿ ಡಿಸೆಂಬರ್ 10 ಮತ್ತು 11ರಂದು ಆಯೋಜಿಸಿರುವ ಎರಡು ದಿನಗಳ ವಿಚಾರಗೋಷ್ಠಿ-ತಾಳಮದ್ದಳೆ, ಯಕ್ಷನಾಟ್ಯ ವೈಭವ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡುತ್ತಿದ್ದರು.

dehli-karnataka-yakshagana

ಡಾ. ಎಂ.ಎಸ್. ಮುತ್ತಯ್ಯ ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸಹ್ಯಾದ್ರಿ ವಿಜ್ಞಾನ ಕಾಲೇಜು ಶಿವಮೊಗ್ಗ, ಬಯಲಾಟ ಮತ್ತು ಕಾಲಮಿತಿ ಕುರಿತಾಗಿ ಮಾತಾನಾಡುತ್ತಾ ಸಾಕಷ್ಟು ಪೋಷಕರು ಇಲ್ಲದ ಕಾರಣ ಹಾಗೂ ವಿವಿಧ ಮನೋರಂಜನೆಯ ಹಾವಳಿಯಿಂದಾಗಿ ಬಯಲಾಟ ಇಂದು ಅನಿವಾರ್ಯವಾಗಿ ಕಾಲಮಿತಿಗೆ ಅಳವಡಿಸಿಕೊಳ್ಳಬೇಕಾಗಿದೆ ಎಂದು ನುಡಿದರು.

ಕಿಶನ್ ಹೆಗ್ಡೆ ಮತ್ತು ಕೆ.ಎಂ.ಶೇಖರ್ ಸದಸ್ಯರು, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಇವರುಗಳು ಯಕ್ಷಗಾನ ಕಾಲಮಿತಿ ಕುರಿತಾಗಿ ಮಾತಾನಾಡುತ್ತ ಹಳ್ಳಿ ಪ್ರದೇಶಗಳಲ್ಲಿ ದೇವಸ್ಥಾನಗಳು ಹಾಗೂ ಸಂಸ್ಕøತಿಯ ಕಾರಣಕ್ಕಾಗಿ ಇಂದಿಗೂ ಕೂಡಾ ಸಂಪೂರ್ಣ ರಾತ್ರಿ ಯಕ್ಷಗಾನಗಳು ನಡೆಯುತ್ತಿವೆಯಾದರೂ ನಗರ ಪ್ರದೇಶಗಳಲ್ಲಿ ಯಕ್ಷಗಾನ, ಕಾಲಮಿತಿ ಪ್ರಯೋಗಗಳಿಗೆ ಯಶಸ್ವಿಯಾಗಿ ಮಾರ್ಪಾಡಾಗಿದೆ. ಕರ್ನಾಟಕದ ಜನತೆ ಹೊಸ ಪ್ರಯೋಗಗಳನ್ನು ಸದಾ ಸ್ವಾಗತಿಸಿದ್ದಾರೆ. ಇದೇ ರೀತಿಯಲ್ಲಿ ಬಯಲಾಟವನ್ನೂ ಕೂಡ ಯಶಸ್ವಿಯಾಗಿ ಕಾಲಮಿತಿ ಪ್ರಯೋಗಕ್ಕೆ ಅಳವಡಿಸಿದರೆ ಬಯಲಾಟಗಳು ಕೂಡಾ ಯಕ್ಷಗಾನದಷ್ಟೇ ಯಶಸ್ವಿಯಾಗಿ ನಡೆಯುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂದು ಅಭಿಪ್ರಾಯಪಟ್ಟರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ನಾಡೋಜ ಬೆಳಗಲ್ಲು ವೀರಣ್ಣನವರು ಮಾತನಾಡುತ್ತಾ ಯಕ್ಷಗಾನಕ್ಕೆ ದೊರೆತಂತಹ ಪೋಷಕರಾಗಲಿ, ಸಂಶೋಧಕ ವಿದ್ವಾಂಸರಾಗಲಿ, ಮತ್ತು ಪ್ರತಿಭಾವಂತ ಪ್ರೇಕ್ಷಕರಾಗಲಿ ಬಯಲಾಟಕ್ಕೆ ದೊರೆಯದಿರುವುದು ಅತ್ಯಂತ ನೋವಿನ ವಿಚಾರ. ಕರ್ನಾಟಕದ ಎಲ್ಲಾ ಜನತೆ ಯಕ್ಷಗಾನವನ್ನು ಪ್ರೋತ್ಸಾಹಿಸಿ ಬೆಳೆಸಿದಂತೆ ಬಯಲಾಟವನ್ನೂ ಸಹ ಪ್ರೀತಿಯಿಂದ ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ಕರೆಕೊಟ್ಟರು. ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾವನ್ನು ರಾಷ್ಟ್ರೀಯ ಕಲೆ ಎಂದು ಪರಿಗಣಿಸಬೇಕೆಂದು ಅಭಿಪ್ರಾಯಪಟ್ಟರು.

ಯಕ್ಷಗಾನ ಮತ್ತು ಬಯಲಾಟಗಳ ಕುರಿತಾಗಿ ವಿಚಾರಮಂಡಿಸಿದವರೊಡನೆ, ಹತ್ತಾರುಮಂದಿ ಸಭಿಕರು, ಅರ್ಥಗರ್ಭಿತವಾದ ಚರ್ಚೆ ನಡೆಸಿ ಯಕ್ಷಗಾನ ಮತ್ತು ಬಯಲಾಟ ಎರಡೂ ಪ್ರಕಾರಗಳನ್ನು ಬೆಳೆಸಿ ಉಳಿಸಲು ಸರ್ಕಾರ, ಅಕಾಡೆಮಿಗಳು, ಸಂಶೋಧಕರು ಮತ್ತು ವಿದ್ವಾಂಸರು, ವಿಶ್ವವಿದ್ಯಾನಿಲಯಗಳು, ಪೋಷಕರು ಮತ್ತು ಪ್ರೇಕ್ಷಕರು ಎಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕಾದ ಅನಿವಾರ್ಯತೆಯನ್ನು ಎತ್ತಿ ತೋರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ರಿಜಿಸ್ಟ್ರಾರ್ ಎಸ್. ಎಚ್.ಶಿವರುದ್ರಪ್ಪ ಸ್ವಾಗತಿಸಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮವನ್ನು ಸಾಂಸ್ಕøತಿಕ ಸಮಿತಿ ಅಧ್ಯಕ್ಷರಾದ ಸಖಾರಾಮ ಉಪ್ಪೂರು ನಿರೂಪಿಸಿದರು, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ಎಂ.ಎಸ್. ಶಶಿಕುಮಾರ್ ಅವರು ಧನ್ಯವಾದ ಅರ್ಪಿಸಿದರು.

ಸಭಾ ಕಾರ್ಯಕ್ರಮದ ನಂತರ ಸೃಷ್ಟಿ ಸರತ್ಕಲ್, ಮಂಗಳೂರು ತಂಡದವರಿಂದ ಯಕ್ಷಗಾನ ತಾಳಮದ್ದಳೆ ಮತ್ತು‘ಜಯಂತ ಸುಷಮೆ’ ಯಕ್ಷಗಾನ ನಾಟ್ಯ ವೈಭವ ಪ್ರದರ್ಶನಗೊಂಡಿತು. ಕಾವ್ಯಶ್ರೀ ಆಜೇರುರವರ ಸುಶ್ರಾವ್ಯವಾದ ಭಾಗವತಿಕೆ ಕು.ಸುಷ್ಮಾ ಮೈರ್ಪಾಡಿ ಮತ್ತು ಕು.ಶಿವಾನಿ ಸುರತ್ಕಲ್ ಅವರ ನೃತ್ಯ ನೆರೆದ ಸಭಿಕರನ್ನು ರಂಜಿಸಿತು.


Spread the love

Exit mobile version