Home Mangalorean News Kannada News ಯಡಿಯೂರಪ್ಪ ಸರಕಾರದಿಂದ ಜನರ ಧ್ವನಿ ಹತ್ತಿಕ್ಕುವ ಪ್ರಯತ್ನ – ವಿನಯ್ ಕುಮಾರ್ ಸೊರಕೆ

ಯಡಿಯೂರಪ್ಪ ಸರಕಾರದಿಂದ ಜನರ ಧ್ವನಿ ಹತ್ತಿಕ್ಕುವ ಪ್ರಯತ್ನ – ವಿನಯ್ ಕುಮಾರ್ ಸೊರಕೆ

Spread the love

ಯಡಿಯೂರಪ್ಪ ಸರಕಾರದಿಂದ ಜನರ ಧ್ವನಿ ಹತ್ತಿಕ್ಕುವ ಪ್ರಯತ್ನ – ವಿನಯ್ ಕುಮಾರ್ ಸೊರಕೆ

ಉಡುಪಿ : ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ರಾಜ್ಯದಾದ್ಯಂತ 144 ಸೆಕ್ಷನ್ ವಿಧಿಸಿ, ಯಾರನ್ನೋ ಮೆಚ್ಚಿಸಲು ಸರಕಾರ ಮಂಗಳೂರಿನಲ್ಲಿ ಗೋಲಿಬಾರ್ ನಡೆಸಿದ್ದು, ಇದರಿಂದ ಪ್ರತಿಭಟನೆ ಮಾಡುವ ಜನರ ಹಕ್ಕನ್ನು ಹತ್ತಿಕ್ಕುವ ಪ್ರಯತ್ನ ರಾಜ್ಯದ ಬಿಜೆಪಿ ಸರಕಾರ ನಡೆಸುತ್ತಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಶನಿವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಈ ಕಾಯ್ದೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ, ನಾವು ಹೋರಾಟ ಮಾಡುತ್ತೇವೆ. ಕೇಂದ್ರ ಸರ್ಕಾರವು ಕೇವಲ ಕೆಲ ವರ್ಗ, ಧರ್ಮದವರನ್ನು ಗುರಿಯಾಗಿಸಬಾರದು ಎಲ್ಲ ವರ್ಗ, ಜಾತಿ, ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು

ಮಂಗಳೂರಿನಲ್ಲಿ ಏಕಾಏಕಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಅಕ್ಷಮ್ಯ. ಎಲ್ಲಿಯೂ ತೀವ್ರವಾದ ಪ್ರತಿಭಟನೆಗಳು ನಡೆದಿರಲಿಲ್ಲ. ಕಾನೂನಿಗೆ ಧಕ್ಕೆಯಾಗುವಂತಹ ಸನ್ನಿವೇಶಗಳು ನಿರ್ಮಾಣವಾಗಿರಲಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಲ್ಲದೆ ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಅಮಾಯಕರು ಸಾವನಪ್ಪಿದ್ದಾರೆ. ಮಂಗಳೂರು ಪೊಲೀಸರ ವರ್ತನೆ ಖಂಡನೀಯ ಈ ಬಗ್ಗೆ ಸೂಕ್ತ ತನಿಖೆಯಾಗಲಿ ಎಂದರು.

ಇದೇ ವೇಳೆ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಕೇಂದ್ರ ಸರಕಾರ ಜಾರಿಗೆ ತಂದಿರುವ ಅಸಂವಿಧಾನಿಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ ಆದರೆ ಈ ಪ್ರತೀಭಟನೆಯನ್ನು ಹತ್ತಿಕ್ಕಲು ರಾಜ್ಯ ಸರಕಾರ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೆ ಗೊಳಿಸಿ ಸಾರ್ವಜನಿಕ ಸಭೆ ಹಾಗೂ ಮೆರವಣಿಗೆಗೆ ಅವಕಾಶ ನಿರಾಕರಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕುದಂತೆ.

ಬಿಜೆಪಿ ನೇತೃತ್ವದ ಕೇಂದ್ರ ಸರಕಾ ತನ್ನ ಅಸಮರ್ಪಕ ಆರ್ಥೀಕ ನೀತಿ, ಬೆಲೆ ಏರಿಕೆ, ಮಹಿಳೆಯರ ಮೇಲೆ ನಡೆಯುತ್ತಿರುವ ದೌಜರ್ನ್ಯ, ನಿರುದ್ಯೋಗ ಸಮಸ್ಯೆ, ಫಾಸ್ಟ್ ಟ್ಯಾಗ್ ಸಮಸ್ಯೆಗಳಿಂದ ಜರ್ಜರಿತವಾಗಿದ್ದು ತನ್ನ ಆಡಳಿತ ವೈಫಲ್ಯವನ್ನು ಮರೆಮಾಚಲು ಭಾವನಾತ್ಮಕ ವಿಷಯಗಳೊಂದಿಗೆ ಚೆಲ್ಲಾಟವಾಡುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ದೇಶದ ಜನರು ಎತ್ತುತ್ತಿರುವ ಧ್ವನಿಯನ್ನು ಹತ್ತಿಕ್ಕಲು ಕೇಂದ್ರ ಸರಕಾರವು ಬಲ ಪ್ರಯೋಗಕ್ಕೆ ಮುಂದಾಗಿದೆ. ಇಂಟರ್ ನೆಟ್ ಸ್ಥಗಿತ, ಪ್ರತಿಭಟನಾಕಾರರ ಹಾಗೂ ವಿದ್ಯಾರ್ಥಿಗಳ ಬಂಧನದೊಂದಿಗೆ ದೇಶದಲ್ಲಿ ತುರ್ತು ಪರಿಸ್ಥೀತಿಗಿಂತಲೂ ಕೆಟ್ಟ ಪರಿಸ್ಥಿತಿ ಇದ್ದು ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು ಸರ್ವಾಧಿಕಾರಿ ರಾಷ್ಟ್ರವಾಗಿ ರೂಪಾಂತರವಾಗುತ್ತಿದೆ ಎಂದರು.

ಕಳೆದ ಬಾರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಇಬ್ಬರು ರೈತರನ್ನು ಗೋಲಿಬಾರ್ ನಿಂದ ಹತ್ಯೆಗೈದಿದ್ದರೆ ದ್ವಿತೀಯ ಬಾರಿ ಅಧಿಕಾರಕ್ಕೆ ಬಂದು ಇಬ್ಬರು ಯುವಕರನ್ನು ಗೋಲಿಬಾರ್ ಮೂಲಕ ಹತ್ಯೆಗೈದಿರುವುದು ಬಿಜೆಪಿಯ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ನಾಯಕರಾದ ಕಿಶನ್ ಹೆಗ್ಡೆ ಕೊಳಕೆಬೈಲು, ಹರೀಶ್ ಕಿಣಿ, ನರಸಿಂಹ ಮೂರ್ತಿ, ಭಾಸ್ಕರ್ ರಾವ್ ಕಿದಿಯೂರು ಹಾಗೂ ಇತರರು ಉಪಸ್ಥಿತರಿದ್ದರು.


Spread the love

Exit mobile version