ಯಡಿಯೂರಪ್ಪ ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ, ಪಕ್ಷದ ಹೈಕಮಾಂಡ್ಗೂ ಇವರಿಂದ ಸಾಕಾಗಿ ಹೋಗಿದೆ: ಯತ್ನಾಳ

Spread the love

ಯಡಿಯೂರಪ್ಪ ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ, ಪಕ್ಷದ ಹೈಕಮಾಂಡ್ಗೂ ಇವರಿಂದ ಸಾಕಾಗಿ ಹೋಗಿದೆ: ಯತ್ನಾಳ

ವಿಜಯಪುರ: ಮೇಲಿನವರಿಗೂ ಯಡಿಯೂರಪ್ಪ ಸಾಕಾಗಿದ್ದಾರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ​​​ಇನ್ನು ಬಹಳ ದಿನ ಅಧಿಕಾರದಲ್ಲಿ ಇರುವುದಿಲ್ಲ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದ ವಾರ್ಡ್ ಸಂಖ್ಯೆ 3ರಲ್ಲಿ ನಿನ್ನೆ ರಾತ್ರಿ ನಡೆದ ಹಣಮಂತ ದೇವ್ಥಾನದ ಕಾಂಪೌಂಡ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಯಡಿಯೂರಪ್ಪನವರ ನಂತರ ಉತ್ತರ ಕರ್ನಾಟಕವವರೇ ಮುಖ್ಯಮಂತ್ರಿ ಯಾಗಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಕಾರ್ಪೋರೇಟರ್ ಪ್ರಸ್ತಾಪಿಸಿದ ವಿಜಯಪುರಕ್ಕೆ ಬಂದಿದ್ದ ರೂ.125 ಕೋಟಿ ಅನುದಾನವನ್ನು ಸರ್ಕಾರ ವಾಪಸ್ ಪಡೆದಿದ್ದರ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದ ಯತ್ನಾಳ್ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಮತ್ತೆ ಹೊರ ಹಾಕಿದ್ದಾರೆ. ವಿಜಯಪುರಕ್ಕೆ ಬಂದಿದ್ದ ರೂ.12 5 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಅವರು ಹಿಂದಕ್ಕೆ ಪಡೆದಿದ್ದಾರೆ. ಅನುದಾನವನ್ನು ಬರೀ ಶಿವಮೊಗ್ಗಕ್ಕೆ ಒಯ್ಯುತ್ತಿದ್ದಾರೆ.

ಇನ್ನೇನು ಅವರು ಬಹಳ ದಿವಸ ಅಧಿಕಾರದಲ್ಲಿ ಇರುವುದಿಲ್ಲ. ಅವರದೂ ಬಂದೈತಿ. ಏಕೆಂದ್ರೆ ಮೇಲಿನವರಿಗೂ ಅವರು ಸಾಕಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೊನ್ನೆ ಉಮೇಶ ಕತ್ತಿ ಇವರು ಶಿವಮೊಗ್ಗ ಮುಖ್ಯ ಮಂತ್ರಿಯೋ? ಕರ್ನಾಟಕದ ಮುಖ್ಯ ಮಂತ್ರಿಯೋ ಎಂದು ಹೇಳಿಕೆ ನೀಡಿದ್ದರು ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರಕ್ಕೆ ನೀಡಿದ್ದ ಅನುದಾನ ವಾಪಸ್ ಪಡೆದಿದ್ದರೂ ನಾನು ಬಿಡಲ್ಲ.ಹೇಗೆ ತರಬೇಕೋ ತರ್ತಿನಿ.ಬೆಂಗ ಳೂರಿನವರು ಬಂದು ವಿಜಯಪುರದ ನಮ್ಮ ಮನೆಯ ಮುಂದೆ ನಿಲ್ಲಬೇಕು. ಈಗ ನಾವು ಅವರ ಮನೆಯ ಮುಂದೆ ಹೋಗಿ ನಿಲ್ಲುತ್ತಿದ್ದೇವೆ. ಉತ್ತರ ಕರ್ನಾಟಕದ ಶಾಸಕರಿಂದಲೇ ಬಿಜೆಪಿಯವರು ಮುಖ್ಯಮಂತ್ರಿ ಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಮಂಡ್ಯ, ಚಾಮರಾಜನಗರ ಮತ್ತು ಕೋಲಾರದಲ್ಲಿ ಯಾರಾದರೂ ಬಿಜೆಪಿಗೆ ಓಟ್ ಹಾಕ್ತಾರಾ? ಎಂದು ಪ್ರಶ್ನಿಸಿದ ಅವರು, ಉತ್ತರ ಕರ್ನಾಟಕದವರೇ 100 ಶಾಸಕರನ್ನು ಆಯ್ಕೆ ಮಾಡಿ ಕಳುಹಿಸುತ್ತಾರೆ.ಆ ಮೇಲೆ ಆ ಕಡೆ 10 ರಿಂದ 15 ಶಾಸಕರು ಆಯ್ಕೆಯಾಗಿರುತ್ತಾರೆ. ಹೀಗಾಗಿ ಮೇಲಿನವರಿಗೂ ಇದು ಗೊತ್ತಾಗಿದೆ.ಮುಂದಿನ ಉತ್ತರಾಧಿಕಾರಿ ಉತ್ತರ ಕರ್ನಾಟಕದವರೇ ಆಗುತ್ತಾರೆ. ಪ್ರಧಾನಿ ಮಂತ್ರಿಗಳ ಮನಸ್ಸಿನಲ್ಲಿ ಈ ವಿಚಾರ ಬಂದಿದೆ. ಯಡಿಯೂರಪ್ಪ ಬಳಿಕ ಉತ್ತರ ಕರ್ನಾಟಕವದವರಿಗೆ ಸಿಎಂ ಮಾಡೋಣ ಎಂದಿದ್ದಾರೆ. ಅದೂ ಕೂಡ ಬಹುತೇಕ ಫೈನಲ್ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಆಮೂಲಕ ನವೆಂಬರ್, ಡಿಸೆಂಬರ್ ವೇಳೆಗೆ ಮುಖ್ಯಮಂತ್ರಿ ಬದಲಾವಣೆ ಖಚಿತವೆನ್ನುವ ಮಾಹಿತಿಯನ್ನು ಯತ್ನಾಳ್ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಸಚಿವ ಸಂಪುಟ ಪುನಾರಚನೆ,ವಿಸ್ತರಣೆಗೆ ಮುಂದಾಗಿದ್ದಾ ಯಡಿಯೂರಪ್ಪನಿಗೆ ಪಕ್ಷದ ಹೈಕಮಾಂಡ್ ಯಾವುದೇ ಮಾಹಿತಿ ನೀಡದೆ ವಾಪಸ್ ರಾಜ್ಯಕ್ಕೆ ತೆರಳುವಂತೆ ಸೂಚಿಸಿದ್ದರು. ಈ ಮೊದಲು ವಿಧಾನ ಸಭೆ ಅಧಿವೇಶನ ನಂತರ ಉಪ ಚುನಾವಣೆ ಎದುರಾಗಿದ್ದು, ಚುನಾವಣೆ ಫಲಿತಾಂಶ ನೋಡಿಕೊಂಡು ಡಿಸೆಂಬರ್ ವೇಳೆಗೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಉತ್ತರ ಕರ್ನಾಟಕದವರನ್ನು ಸಿಎಂ ಮಾಡುವುದು ಬಹುತೇಕ ಖಚಿತವಾದಂತಾಗಿದೆ.


Spread the love