ಯಶೋಗಾಥೆಗಳು ಆರಂಭವಾಗುವುದೇ ಬಡತನ, ಹಸಿವಿನಿಂದ
‘ಜನತಾ ನವನೀತ-2024’ ಉದ್ಘಾಟಿಸಿ ಶಿಕ್ಷಕ ರಾಜೇಂದ್ರ ಭಟ್ ಅಭಿಮತ
ಕುಂದಾಪುರ: ಗೆದ್ದವರ ಕಥೆಗಳಿಗಿಂತಲೂ ಅತೀ ಹೆಚ್ಚು ಸೋತವರ ಕಥೆಗಳನ್ನು ಓದಬೇಕು. ಗೆದ್ದವರ ಕಥೆಗಳು ಅಹಂಕಾರವನ್ನು ಕಲಿಸಿದರೆ ಸೋತವರ ಕಥೆಗಳು ನಮಗೆ ಬದುಕುವುದನ್ನು ಕಲಿಸುತ್ತವೆ. ಯಶೋಗಾಥೆಗಳು ಆರಂಭವಾಗುವುದೇ ಬಡತನ ಹಾಗೂ ಹಸಿವಿನಿಂದ ಎಂದು ಶಿಕ್ಷಕ, ವ್ಯಕ್ತಿತ್ವ ವಿಕಸನ ತರಬೇತುದಾರ ರಾಜೇಂದ್ರ ಭಟ್ ಕೆ ಅಭಿಮತ ವ್ಯಕ್ತಪಡಿಸಿದರು.
ಕುಂದಾಪುರದ ಮೊಗವೀರ ಭವನದಲ್ಲಿ ಸೋಮವಾರ ಜರುಗಿದ ವಿವಿವಿ ಮಂಡಳಿ (ರಿ) ಹೆಮ್ಮಾಡಿ, ಸಮರ್ಪಣಾ ಎಜ್ಯುಕೇಶನಲ್ ಟ್ರಸ್ಟ್ (ರಿ) ಆಡಳಿತಕ್ಕೊಳಪಟ್ಟ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಹೆಮ್ಮಾಡಿ ಇದರ ‘ಜನತಾ ನವನೀತ-2024’ ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ, ಪರೀಕ್ಷೆಯಲ್ಲಿ, ಬದುಕಿನಲ್ಲಿ ಸೋತವರ ಕಥೆಗಳು ನಮ್ಮನ್ನು ಪ್ರೇರೇಪಿಸುತ್ತಾ ಹೋಗುತ್ತದವೆ. ಸೋತವರ ಕಥೆಗಳು ನಮಗೆ ಆದರ್ಶಗಳಾಗುತ್ತವೆ. ಗೆದ್ದಾಗ ಮಾತ್ರ ಸಂಭ್ರಮಿಸುವುದಲ್ಲ. ಸೋತಾಗಲೂ ಸಂಭ್ರಮಿಸಬೇಕು. ಸಣ್ಣ ಸಣ್ಣ ಸೋಲುಗಳನ್ನು ಎದುರಿಸುವುದನ್ನು ಅತ್ಯದ್ಭುತವಾಗಿ ಕಲಿಯಬೇಕು. ಅಂಕಗಳ ಜೊತೆಗೆ ಒಳ್ಳೆಯ ಮೌಲ್ಯ, ಆದರ್ಶಗಳನ್ನು ಮೈಗೂಡಿಸಿಕೊಂಡರೆ ಉತ್ತಮ ಮನುಷ್ಯರಾಗಲು ಸಾಧ್ಯ. ಸ್ವಾಭಿಮಾನದ ಮೂಲಕ ಬದುಕುವುದು ಹೇಗೆ ಎನ್ನುವುದನ್ನು ಪೋಷಕರಿಂದ ಕಲಿತುಕೊಳ್ಳಲು ಸಾಧ್ಯವಿದೆ ಎಂದರು.
ಜೀವನದಲ್ಲಿ ಉತ್ತಮ ಅಂಕ ಗಳಿಸುವುದು ಕಷ್ಟವಲ್ಲ. ಸಾಧನೆ ಮಾಡಿದವರ ಕಥೆಗಳು ಆರಂಭವಾಗುವುದೇ ಬಡತನ, ಹಸಿವು, ಗುಡಿಸಲುಗಳ ಮೂಲಕ. ಬಾಲ್ಯದಿಂದ ಹಸಿವಿನ ಪರಿಚಯ ಇದ್ದವರು ಸಾಧನೆಗಳ ಮೆಟ್ಟಿಲು ಹತ್ತುವುದರಲ್ಲಿ ಸಂದೇಹವೇ ಇಲ್ಲ. ರಸ್ತೆ ಅಪಘಾತವೊಂದರಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಹಲವು ಶಸ್ತ್ರ ಚಿಕಿತ್ಸೆಗಳ ಬಳಿಕ ನೋವುಗಳನ್ನು ಅನುಭವಿಸಿ ಮೈದಾನಕ್ಕೆ ಬಂದು ಭಾರತದ ಪರ ಆಡಿ ವಿಶ್ವಕಪ್ ಗೆಲ್ಲಿಸಿಕೊಟ್ಟ ಕ್ರಿಕೆಟಿಗ ರಿಷಬ್ ಪಂತ್ ನಮಗೆಲ್ಲರಿಗೂ ಪ್ರೇರಣೆಯಾಗಬೇಕು. ಕಷ್ಟಗಳನ್ನು ಹೇಗೆ ಗೆಲ್ಲಬೇಕು, ಸಮಸ್ಯೆಗಳನ್ನು ಹೇಗೆ ಎದುರಿಸಬೇಕು, ಸವಾಲುಗಳನ್ನು ಹೇಗೆ ಸ್ವೀಕರಿಸಬೇಕು ಎನ್ನುವುದನ್ನು ನಮಗೆ ಕ್ರಿಕೆಟಿಗ ರಿಷಬ್ ಪಂತ್ ಕಲಿಸಿಕೊಟ್ಟಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಗಣೇಶ್ ಮೊಗವೀರ, ನಮ್ಮ ಕಾಲೇಜು ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಎಸೆಸ್ಸೆಲ್ಸಿಯಲ್ಲಿ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪ್ರಥಮ ಪಿಯುಸಿಗೆ ದಾಖಲಾತಿ ಮಾಡಿಕೊಂಡು ಅವರಿಂದ ಉತ್ತಮ ಫಲಿತಾಂಶವನ್ನು ಪಡೆಯುವುದು ನಮ್ಮ ದ್ಯೇಯ. ಹೀಗಾಗಿ ಕಳೆದೆರಡು ವರ್ಷಗಳಿಂದ ನಮ್ಮ ಉಪನ್ಯಾಸಕ ವೃಂದದವರ ಅವಿರತ ಶ್ರಮದಿಂದಾಗಿ ಕಾಲೇಜು ನೂರಕ್ಕೆ ನೂರು ಫಲಿತಾಂಶವನ್ನು ದಾಖಲಿಸುತ್ತಿರುವುದು ನಮ್ಮ ಕಾಲೇಜಿನ ಹೆಗ್ಗಳಿಕೆ ಎಂದರು.
ಮುಖ್ಯ ಅತಿಥಿಗಳಾಗಿ ಜನತಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಮಂಜು ಕಾಳಾವರ್, ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ರಮೇಶ್ ಪೂಜಾರಿ, ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಮುಖ್ಯ ಶಿಕ್ಷಕಿ ಕು. ದೀಪಿಕಾ ಆಚಾರ್ಯ ಉಪಸ್ಥಿತರಿದ್ದರು.
ಕಳೆದ ಶೈಕ್ಷಣಿಕ ಸಾಲಿನ ಎಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ಸಾಧಕ ವಿದ್ಯಾರ್ಥಿಗಳು ಮತ್ತವರ ಪೋಷಕರನ್ನು ಸನ್ಮಾನಿಸಲಾಯಿತು. ಬಳಿಕ ಕಾಲೇಜು ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳಿಂದ “ಹಿಗ್ಗಿನ-ಬುಗ್ಗೆ” ಸಾಂಸ್ಕೃತಿಕ ವೈಭವ ಜರುಗಿತು.
ಉಪಪ್ರಾಂಶುಪಾಲ ರಮೇಶ್ ಪೂಜಾರಿ ಧನ್ಯವಾದವಿತ್ತರು. ಕನ್ನಡ ಉಪನ್ಯಾಸಕ ಉದಯ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.