ಯಶ್ಪಾಲ್ ಅವರಿಗೆ ಸಿಎಂ ಸಿದ್ದರಾಮಯ್ಯರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ – ಗಣೇಶ್ ಕೆ ನೆಲ್ಲಿಬೆಟ್ಟು

Spread the love

ಯಶ್ಪಾಲ್ ಅವರಿಗೆ ಸಿಎಂ ಸಿದ್ದರಾಮಯ್ಯರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ – ಗಣೇಶ್ ಕೆ ನೆಲ್ಲಿಬೆಟ್ಟು

ಕೋಟ: ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದ ತೀರ್ಪು ಪ್ರಕಟವಾಗುತ್ತಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಉಡುಪಿ ಕ್ಷೇತ್ರದ ಬಿಜೆಪಿ ಶಾಸಕ ಯಶಪಾಲ ಸುವರ್ಣರಿಗೆ ಅಂತಹ ನೈತಿಕತೆ ಇದೆಯೆ ಎಂದು ಎಂದು ಕೋಟ ಬ್ಲಾಕ್ ಕಾಂಗ್ರೆಸ್ ನ ಗಣೇಶ್ ಕೆ ನೆಲ್ಲಿಬೆಟ್ಟು ಪ್ರಶ್ನಿಸಿದ್ದಾರೆ.

ಕೇವಲ ಕೋಮು ರಾಜಕಾರಣ, ಜಾತಿಕಾರಣದಲ್ಲೇ ವ್ಯಸ್ತರಾಗಿ, ಕ್ಷೇತ್ರದಾದ್ಯಂತ ಅಭಿವೃದ್ಧಿ ಗೌಣವಾಗಿ, ಉಡುಪಿ ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿ ಅರೆಬರೆ ಕಾಮಗಾರಿಯಿಂದಾಗಿ ಸಾರ್ವಜನಿಕರು ಅನುಭವಿಸುತ್ತಿರುವ ತೀವ್ರ ತೊಂದರೆಗಳನ್ನು ಅವರದೇ ಮಡಿಲ ಮಾಧ್ಯಮಗಳು ಉಗಿದು ಉಪ್ಪಿನಕಾಯಿ ಹಾಕುತ್ತಿದ್ದರೂ ಅದರ ಬಗೆಗೆಲ್ಲ ಕಿಂಚಿತ್ತೂ ಸ್ಪಂದಿಸದೆ, ಹೈಕೋರ್ಟ್ ತೀರ್ಪನ್ನು ಸರಿಯಾಗಿ ಅರ್ಥೈಸಿಕೊಳ್ಳುವ ಜ್ಞಾನವೂ ಇಲ್ಲದೆ ಬಾಲಿಶ ಹೇಳಿಕೆಗಳನ್ನು ನೀಡುತ್ತಿರುವ ಯಶಪಾಲರು ಸಾರ್ವಜನಿಕವಾಗಿ ನಗೆಪಾಟಲಿಗೀಡಾಗಿದ್ದಾರೆ.

ಗೌರವಾನ್ವಿತ ರಾಜ್ಯಪಾಲರು ಸೆಕ್ಷನ್ 218ರ ಅಡಿ ನೀಡಲಾದ ಪ್ರಾಸಿಕ್ಯೂಶನ್ನನ್ನು ಮಾನ್ಯ ಉಚ್ಛ ನ್ಯಾಯಾಲಯವು ಸಂಪೂರ್ಣವಾಗಿ ತಿರಸ್ಕರಿಸಿ ಪ್ರಾಸಿಕ್ಯೂಶನ್ ಆದೇಶದಲ್ಲಿದ್ದ 17A ಅಡಿಯಲ್ಲಿ ತನಿಖೆ ನಡೆಸುವಂತೆ ಸೂಚಿಸಿದೆ. ತಮ್ಮದೇ ಪಕ್ಷದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರ ವಿರುದ್ಧ ಕೂಡ ಇದೇ 17A ಅಡಿಯಲ್ಲಿ,2022ರಲ್ಲಿ ಘನ ನ್ಯಾಯಾಲಯ ತನಿಖೆಗೆ ಆದೇಶಿಸಿತ್ತು ಎನ್ನುವುದು ಯಶಪಾಲ ಸುವರ್ಣರು ಮರೆತಂತಿದೆ.

ದ್ವೇಷ ರಾಜಕಾರಣದಿಂದ ಬಿಜೆಪಿ ಜನರಿಂದ ಚುನಾಯಿತರಾದ ಸರಕಾರಗಳನ್ನು ಉರುಳಿಸುವ ಕೆಟ್ಟ ಪರಂಪರೆಯನ್ನು ಕರ್ನಾಟಕದಲ್ಲೂ ಮುಂದುವರಿಸಲು ರಾಜಭವನವನ್ನು ದುರುಪಯೋಗಪಡಿಸಿಕೊಳ್ಳುತದೆ. ಯಶಪಾಲರು ಇನ್ನಾದರೂ ಸಿದ್ಧರಾಮಯ್ಯನವರ ಕುರಿತು ಮಾತನಾಡುವ ತಮ್ಮ ಅರ್ಹತೆಯ ಬಗ್ಗೆ ಪರಾಮರ್ಶಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಗಮನಹರಿಸುವಂತಾಗಲಿ ಎಂದು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love