ಯಶ್ಪಾಲ್ ಸುವರ್ಣರಿಗೆ ಬಿಜೆಪಿ ಟಿಕೆಟ್ ಕೈತಪ್ಪುವ ಭೀತಿ; ಯುವ ಕಾರ್ಯಕರ್ತರ ಆಕ್ರೋಶ

Spread the love

ಯಶ್ಪಾಲ್ ಸುವರ್ಣರಿಗೆ ಬಿಜೆಪಿ ಟಿಕೆಟ್ ಕೈತಪ್ಪುವ ಭೀತಿ; ಯುವ ಕಾರ್ಯಕರ್ತರ ಆಕ್ರೋಶ

ಮಂಗಳೂರು/ಉಡುಪಿ: ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕೂಡ ಆರಂಭವಾಗಿದ್ದು ಉಡುಪಿ ಜಿಲ್ಲೆಯ ಬಿಜೆಪಿಯಲ್ಲಿ ಮಾತ್ರ ಇನ್ನೂ ಕೂಡ ಎರಡು ಅತೀ ಹೆಚ್ಚು ಜಿದ್ದಾಜಿದ್ದಿಯ ಕಣವಾಗಿರುವ ಉಡುಪಿ ಮತ್ತು ಕಾಪುವಿಗೆ ಅಭ್ಯರ್ಥಿಗಳ ಘೊಷಣೆ ಮಾತ್ರ ಆಗದಿರುವುದು ಪಕ್ಷಕ್ಕೆ ಹಿನ್ನಡೆ ಉಂಟಾಗಲಿದೆ ಎಂಬ ಮಾಹಿತಿ ಬರಲು ಆರಂಭಿಸಿದೆ.

ಕಾಪುವಿನಲ್ಲಿ ಯುವ ಅಭ್ಯರ್ಥಿಗೆ ಅವಕಾಶ ನೀಡಬೇಕು ಎಂಬ ಯುವ ಬಿಜೆಪಿ ಕಾರ್ಯಕರ್ತರ ಮನವಿಗೆ ಪಕ್ಷದ ರಾಜ್ಯ ಮತ್ತು ಕೇಂದ್ರ ನಾಯಕರು ತಲೆಕೆಡಿಸಿಕೊಂಡಿಲ್ಲ ಎನ್ನಲಾಗುತ್ತಿದ್ದು, ಬಿಜೆಪಿಯ ಯುವ ನಾಯಕ ಮೊಗವೀರ ಸಮಾಜದ ಮುಖಂಡ ಹಾಗೂ ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಯಶ್ಪಾಲ್ ಸುವರ್ಣ ಅವರಿಗೆ ಕಾಪು ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಬೇಕು ಎಂಬ ಕೂಗು ಬಲವಾಗಿ ಕೇಳಿಬಂದಿತ್ತು ಆದರೆ ಪಕ್ಷದೊಳಗಿನ ಕಚ್ಚಾಟ ಮತ್ತು ಪ್ರತಿಷ್ಟೆಯ ಕಾರಣ ಈಗ ಯಶ್ಪಾಲ್ ಸುವರ್ಣರಿಗೆ ಟಿಕೆಟ್ ಕೈತಪ್ಪುವುದು ಬಹುತೇಕ ಖಚಿತವಾಗಿದ್ದು, ಇದರಿಂದ ಆಕ್ರೋಶಗೊಂಡ ಯುವ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳ ಮೂಲಕ ಪಕ್ಷದ ನಾಯಕರ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಉಡುಪಿಗೆ ಅಮಿತ್ ಶಾ ಬಂದಾಗ ಅವರು ಮೀನುಗಾರರನ್ನು ಉದ್ದೇಶಿಸಿ ಮಲ್ಪೆ ಕಡಲತೀರದಲ್ಲಿ ಬೃಹತ್ ಸಂಖ್ಯೆಯ ಮೀನುಗಾರರನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಕಾರ್ಯಕ್ರಮದ ಯಶಸ್ಸಿಗೆ ಹಗಲಿರಳು ದುಡಿಯುವುದಲ್ಲದೆ ತನ್ನ ಸ್ವಂತ ಹಣವನ್ನೇ ಮೀನುಗಾರ ಮುಖಂಡ ಹಾಗೂ ಬಿಜೆಪಿ ರಾಜ್ಯ ಯುವ ಮೋರ್ಚಾದ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಖರ್ಚು ಮಾಡಿದ್ದು ಅವರಿಗೆ ಈ ಬಾರಿ ಕಾಪುವಿನಿಂದ ಟಿಕೆಟ್ ನೀಡಬೇಕು ಎಂಬ ಬಲವಾದ ಕೂಗು ಕೂಡ ಕೇಳಿಬಂದಿತ್ತು. ಆದರೆ ಯಶ್ಪಾಲ್ ಸುವರ್ಣ ಅವರಿಗೆ ನೀಡದಂತೆ ಪಕ್ಷದೊಳಗಿನ ಒಂದು ಗುಂಪು ಬಲವಾದ ಲಾಬಿ ನಡೆಸಿದ್ದು ಇದರಿಂದ ಯುವ ಬಿಜೆಪಿ ಕಾರ್ಯಕರ್ತರು ಆಕ್ರೋಶವನ್ನು ಟ್ವಿಟ್ಟರ್ ಮೂಲಕ ಹೊರಹಾಕಿದ್ದಾರೆ. ಅಲ್ಲದೆ ಒಂದು ವೇಳೆ ಯಶ್ಪಾಲ್ ಅವರಿಗೆ ಟಿಕೆಟ್ ಲಭಿಸದೆ ಹೋದಲ್ಲಿ ಉಡುಪಿ ಮತ್ತು ಕಾಪುವಿನಲ್ಲಿ ಪಕ್ಷ ಹಿನ್ನಡೆ ಕಾಣಲಿದೆ ಎಂಬ ಎಚ್ಚರಿಕೆಯ ಸಂದೇಶವನ್ನು ಕೂಡ ರವಾನಿಸಿದ್ದಾರೆ.

ಈ ಕುರಿತು ಪ್ರತಿನಿಧಿಯೊಂದಿಗೆ ಮಾತನಾಡಿದ ಕಾಪು ಬಿಜೆಪಿ ಯುವಮೋರ್ಚಾದ ನಾಯಕರೊಬ್ಬರು ಪಕ್ಷದ ಸಂಘಟನೆಗೆ ಯಶ್ಪಾಲ್ ಅವರ ಕೊಡುಗೆ ತುಂಬಾ ಇದ್ದು ಯುವಕರ ಪಡೆಯನ್ನೇ ಕಟ್ಟಿಕೊಂಡಿದ್ದು ಈ ಬಾರಿ ಚುನಾವಣೆಯಲ್ಲಿ ಅವರಿಗೆ ಅವಕಾಶ ನೀಡಿದ್ದಲ್ಲಿ ಗೆಲುವು ಖಚಿತ ಆದರೆ ಪಕ್ಷ ಹಳೆಯ ಮುಖಗಳಿಗೆ ಇನ್ನೂ ಕೂಡ ಮಣೆ ಹಾಕಿರುವುದು ಯುವ ಕಾರ್ಯಕರ್ತರಲ್ಲಿ ನಿರಾಶೆ ಮೂಡಿಸಿದೆ ಇದರ ಪರಿಣಾಮ ಉಡುಪಿ ಮತ್ತು ಕಾಪು ಎರಡು ಕ್ಷೇತ್ರಗಳಿಗೆ ಆಗಲಿದೆ ಅಲ್ಲದೆ ಯಶ್ಪಾಲ್ ಅವರನ್ನು ಮೀನುಗಾರ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಲಿದ್ದು ಇದನ್ನಾದರೂ ಗಮನದಲ್ಲಿಟ್ಉ ಪಕ್ಷದ ನಾಯಕರು ಅವರಿಗೆ ಅವಕಾಶ ನೀಡಬೇಕು. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಯುವಕರಿಗೆ ಅವಕಾಶ ನೀಡುತ್ತಿರುವಾಗ ಕಾಪು ಕ್ಷೇತ್ರಕ್ಕೂ ಅವರು ಯಶ್ಪಾಲ್ ಅವರನ್ನೇ ಅಭ್ಯರ್ಥೀ ಮಾಡಿದ್ದಲ್ಲಿ ಪಕ್ಷದ ಗೆಲುವು ಖಚಿತ ಇಲ್ಲವಾದಲ್ಲಿ ಯುವ ಕಾರ್ಯಕರ್ತರ ಭಾವನೆಗಳಿಗೆ ಪಕ್ಷ ನೋವು ಉಂಟು ಮಾಡಿದಂತೆ ಆಗುತ್ತದೆ ಎಂದಿದ್ದಾರೆ.
ಒಟ್ಟಾರೆ ಬಿಜೆಪಿ ಪಕ್ಷದಲ್ಲಿ ಉಡುಪಿ ಮತ್ತು ಕಾಪು ಕ್ಷೇತ್ರಗಳ ಅಭ್ಯರ್ಥಿಯ ಆಯ್ಕೆ ಕಗ್ಗಂಟಾಗಿಯೇ ಉಳಿಯುವ ಖಚಿತ ಲಕ್ಷಣಗಳು ಕಾಣುತ್ತಿದ್ದು ಶಿಸ್ತಿನ ಪಕ್ಷವಾದ ಬಿಜೆಪಿ ಯುವ ಕಾರ್ಯಕರ್ತರ ಭಾವನೆಗಳಿಗೆ ಬೆಲೆ ನೀಡುತ್ತದೊ ಅಥವಾ ಹಳೆಯ ಮುಖಗಳಿಗೆ ಅವಕಾಶ ನೀಡುವುದೋ ಎನ್ನುವುದು ಕಾದು ನೋಡಬೇಕಾಗಿದೆ.


Spread the love