ಯಶ್ಪಾಲ್ ಸುವರ್ಣರೇ, ತಾವು ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ್ದು ‘ಈವ್ನಿಂಗ್ ವಾಕ್ ಮಾಡಲೋ’? – ವೆರೋನಿಕಾ ಕರ್ನೆಲಿಯೋ
- ಉಸ್ತುವಾರಿ ಸಚಿವೆ ಮಳೆಹಾನಿ ಪರಿಶೀಲನೆ ಮಾಡಿದ್ದಾರೆ ಹೊರತು ಜಾಲಿ ರೈಡ್ ಮಾಡಲು ಬಂದಿರಲಿಲ್ಲ
- ಬಾಲಿಶ ಹೇಳಿಕೆಗಳನ್ನು ಬಿಟ್ಟರೆ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನಿದೆ ಎನ್ನುವುದನ್ನು ತಿಳಿಸಿ
ಉಡುಪಿ : ಉಡುಪಿ ಜಿಲ್ಲೆಯ ಕರಾವಳಿ ಹಾಗೂ ಇತರ ಭಾಗಗಳಲ್ಲಿ ಮಳೆಯಿಂದಾಗಿ ಹಾನಿಗೆ ಒಳಗಾದ ಸಮುದ್ರ ಕೊರೆತದ ತೀರ ಪ್ರದೇಶಗಳು, ನೆರೆ ಹಾನಿಗೊಳಗಾದ ಪ್ರದೇಶಗಳ ಪರಿಸ್ಥಿತಿ ಹಾಗೂ ಅಲ್ಲಿನ ಜನಜೀವನದ ಪರಿಸ್ಥಿತಿಯ ವೀಕ್ಷಣೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪ್ರವಾಸ ಕಾರ್ಯಕ್ರಮಗಳನ್ನು ‘ ಚಿಕ್ಕಿ ತಿಂದು ಹೋದ ಹಾಗೆ ಆಯಿತು ‘ ಎಂದು ಲೇವಡಿ ಮಾಡಿರುವ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರ ಹೇಳಿಕೆ ರಾಜಕೀಯದಲ್ಲಿ ಅವರಿನ್ನೂ ಎಳಸು ಎನ್ನುವುದು ಎತ್ತಿ ತೋರಿಸುತ್ತದೆ. ಒರ್ವ ಮಹಿಳಾ ಸಚಿವೆಯ ಕುರಿತು ಮಾತನಾಡುವಾಗ ಯಾವ ಭಾಷೆ ಬಳಸಬೇಕು ಎನ್ನುವ ಕನಿಷ್ಠ ಜ್ಞಾನ ಕೂಡ ಇಲ್ಲ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ವ್ಯಂಗ್ಯವಾಡಿದ್ದಾರೆ.
ಕ್ಯಾಬಿನೆಟ್ ನಲ್ಲಿ ಓರ್ವರೇ ಮಹಿಳಾ ಸಚಿವೆಯಾಗಿ ದೊಡ್ಡ ಜವಾಬ್ದಾರಿಯ ನಡುವೆಯೂ ಕೂಡ ಭಾನುವಾರದ ರಜೆಯನ್ನು ಕೂಡ ಲೆಕ್ಕಿಸದೇ ಬೆಳಗ್ಗಿನಿಂದ ಸಂಜೆಯ ತನಕ ಇಡೀ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ನೆರೆ, ಕಡಲ್ಕೊರೆತ, ಮಳೆಹಾನಿಯ ಕುರಿತು ಪರಿಶೀಲನೆ ನಡೆಸಿದ್ದಾರೆ ಹೊರತು ಜಾಲಿ ರೈಡ್ ಮಾಡಲು ಬಂದಿರಲಿಲ್ಲ. ಸಚಿವೆಯ ಪ್ರವಾಸವನ್ನು ‘ ಚಿಕ್ಕಿ ತಿಂದು ಹೋದ ಹಾಗೆ ಆಯಿತು ‘ ಹೇಳಿರುವ ತಾವು ಎರಡು ದಿನಗಳ ಹಿಂದೆ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ್ದು ಈವ್ನಿಂಗ್ ವಾಕ್ ಮಾಡಲೋ? ಅಥವಾ ಸಮಸ್ಯೆ ಅರಿಯಲೋ ಎನ್ನುವುದನ್ನು ಮೊದಲು ತಿಳಿದುಕೊಳ್ಳಿ.
ಉಡುಪಿ ಕ್ಷೇತ್ರ ಹಿಂದೆಯೂ ಹಲವಾರು ಬಿಜೆಪಿ ಶಾಸಕರನ್ನು ಸಚಿವರನ್ನು ಕಂಡಿದೆ ಆದರೆ ತಮ್ಮಷ್ಟು ಬಾಲೀಶ ಹೇಳಿಕೆ ನೀಡುವ ಶಾಸಕರನ್ನು ಆಯ್ಕೆ ಮಾಡಿರುವ ಜನರು ಈಗ ಪರಿತಪಿಸುತ್ತಿದ್ದಾರೆ. ಶಾಸಕರಾಗಿ ಆಯ್ಕೆಯಾಗಿ ಒಂದು ವರ್ಷ ಕಳೆದರೂ ಕೂಡ ಕ್ಷೇತ್ರಕ್ಕೆ ಒಂದೇ ಒಂದು ಯೋಜನೆ ತರಲು ಸಾಧ್ಯವಾಗದ ತಾವು ಕೇವಲ ಹೇಳಿಕೆಗಳಿಗಷ್ಟೇ ಸೀಮಿತವಾಗಿರುವುದು ಬಿಟ್ಟರೆ ಹಿಂದಿನ ಶಾಸಕರು ಮಾಡಿದ ಕನಿಷ್ಠ 5% ಕೆಲಸ ಕೂಡ ಮಾಡಲು ತಮ್ಮಿಂದ ಸಾಧ್ಯವಾಗಿಲ್ಲ ಎನ್ನುವ ಸತ್ಯ ಕ್ಷೇತ್ರದ ಜನತೆಗೆ ತಿಳಿದಿದೆ.
ಸದಾ ಮಹಿಳೆಯನ್ನು ತಾಯಿ ಸಮಾನಳು ಎನ್ನುವ ತಮ್ಮ ಬಿಜೆಪಿ ಪಕ್ಷ ತಮಗೆ ಒರ್ವ ಮಹಿಳಾ ಸಚಿವೆಯ ಬಗ್ಗೆ ಹೇಳಿಕೆ ನೀಡುವಾಗ ಯಾವ ರೀತಿಯಲ್ಲಿ ಮಾತನಾಡಬೇಕು ಎನ್ನುವ ಕನಿಷ್ಠ ಜ್ಞಾನ ಇಲ್ಲದಿರವುದು ವಿಷಾದನೀಯ ಸಂಗತಿ. ತಾವು ಮೊದಲ ಬಾರಿಗೆ ಶಾಸಕರಾಗಿದ್ದು ಕ್ಷೇತ್ರದಲ್ಲಿ ಲೆಕ್ಕವಿಲ್ಲದಷ್ಟು ಸಮಸ್ಯೆಗಳು ತಾಂಡವವಾಡುತ್ತಿದೆ. ಇಂದ್ರಾಳಿ ರೈಲ್ವೆ ಬ್ರಿಡ್ಜ್ ಕಾಮಗಾರಿ ನೆನೆಗುದಿಗೆ ಬಿದ್ದು ವರ್ಷಗಳೇ ಕಳೆದವು. ಸಂತೆಕಟ್ಟೆಯ ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಯನ್ನು ಕೇಳುವವರಿಲ್ಲದಂತಾಗಿದೆ. ಒಂದೇ ಮಳೆಗೆ ಹಾಕಿದ ಡಾಮರು ಕಿತ್ತು ಹೋಗಿ ವಾಹನಗಳು ಡ್ಯಾನ್ಸ್ ಮಾಡಿಕೊಂಡು ಬರುತ್ತಿವೆ. ಮಲ್ಪೆ ತೀರ್ಥಹಳ್ಳೀ ರಸ್ತೆ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ ಇವೆಲ್ಲಾ ಸಮಸ್ಯೆಗಳಿಗೆ ಮುಕ್ತಿ ನೀಡುವ ಬದಲು ತಾವು ಕೇವಲ ಟೀಕೆ ಮಾಡುವುದರಲ್ಲೇ ಕಾಲ ಹರಣ ಮಾಡಿಕೊಂಡು ಒಂದು ವರ್ಷ ಕಳೆದಿದ್ದಿರಿ.
ಸಚಿವರು ಜಿಲ್ಲೆಗೆ ಬರುವ ಮಾಹಿತಿ ತಮಗೆ ಅಧಿಕಾರಿಗಳ ಮೂಲಕ ತಲುಪಿಸುವುದು ವಾಡಿಕೆ ಅದರಂತೆ ತಮಗೆ ನಿಜವಾಗಿ ಕ್ಷೇತ್ರದ ಜನರ ಕಾಳಜಿ ಇದ್ದದ್ದೇ ಆಗಿದ್ದಲ್ಲಿ ಸಚಿವರೊಂದಿಗೆ ಬಂದು ಸ್ಥಳೀಯ ಜನರ ಸಮ್ಯಸ್ಯೆಯನ್ನು ಸಚಿವರ ಗಮನಕ್ಕೆ ತರುವ ಬದಲು ಚಿಲ್ಲರೆ ರಾಜಕಾರಣ ಮಾಡಿಕೊಂಡು ಸಮಯ ಕಳೆಯುತ್ತಿದ್ದೀರಿ. ಜಿಲ್ಲೆಯಲ್ಲಿ ಈ ಹಿಂದೆ ಸಚಿವ, ಶಾಸಕರಾಗಿ ಕರ್ತವ್ಯ ನಿರ್ವಹಿಸಿದವರು ಹಾಕಿ ಕೊಟ್ಟ ಮಾದರಿಯನ್ನು ಅಳಿಸಿಹಾಕುವ ಬದಲು ಇನ್ನಾದರೂ ಅಭಿವೃದ್ಧಿ ಪರ ಶಾಸಕರಾಗಿ ಕೆಲಸ ನಿರ್ವಹಿಸಿದರೆ ಜನರು ತಮ್ಮ ಬಗ್ಗೆ ಹೆಮ್ಮೆ ಪಡುತ್ತಾರೆ ಎನ್ನುವ ಕಿವಿ ಮಾತನ್ನು ಒರ್ವ ಸಹೋದರಿಯಾಗಿ ನೀಡಬಯಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.