ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ರಾಮೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳು
ಅಯೋಧ್ಯೆ ಶ್ರೀರಾಮ ಮಂದಿರದ ಲೋಕಾರ್ಪಣೆಯ ಸಂಭ್ರಮಾಚರಣೆಯನ್ನು ವಿಶಿಷ್ಟವಾಗಿಸುವ ನಿಟ್ಟಿನಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಜನವರಿ 22 ರಂದು ಶ್ರೀ ಕೃಷ್ಣ ಮಠದಲ್ಲಿ ವಿವಿಧ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.
ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಧ್ವ ಮಂಟಪದಲ್ಲಿ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ಭಕ್ತಾಭಿಮಾಗಳಿಗೆ ಶ್ರೀರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗೆ ಎಲ್.ಇ.ಡಿ ಪರದೆ ವ್ಯವಸ್ಥೆ ಮಾಡಲಾಗಿದ್ದು, ಶಾಸಕರ ವತಿಯಿಂದ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರಿಗೆ ಹಾಲು ಪಾಯಸ ಸೇವೆ ಹಾಗೂ ಮಧ್ಯಾಹ್ನ 1 ಗಂಟೆಗೆ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಕರಸೇವಕರಾಗಿ ಸಲ್ಲಿಸಿದ್ದ ಕಾರ್ಯಕರ್ತರಿಗೆ ಗೌರವಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಬಡ ಕುಟುಂಬಕ್ಕೆ ಮನೆ ಹಸ್ತಾಂತರ :
ಕಲ್ಯಾಣಪುರ ಮೂಡು ತೋನ್ಸೆ ಗ್ರಾಮದ ಶ್ರೀ ಬೋಗ್ರ ಬೆಲ್ಚಡ ರವರಿಗೆ ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಹಿಂದೂ ಯುವಸೇನೆ ಉಡುಪಿ ನಗರ ಅಧ್ಯಕ್ಷ ಸುನೀಲ್ ನೇಜಾರ್ ಸಂಚಾಲಕತ್ವದಲ್ಲಿ ಶ್ರೀ ರಾಮ ಭಕ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಿರ್ಮಿಸಲ್ಪಟ್ಟ ನೂತನ ಮನೆ “ಅಯೋಧ್ಯೆ” ಯನ್ನು ಶ್ರೀ ರಾಮ ಮಂದಿರದ ಲೋಕಾರ್ಪಣೆಯ ಶುಭದಿನ ದಂದು ಹಸ್ತಾಂತರಿಸುವ ಮೂಲಕ ರಾಮ ರಾಜ್ಯದ ಕನಸು ಸಾಕಾರಗೊಳಿಸುವ ಆಶಯ ಹೊಂದಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.