ಯುಪಿ ಸಿಎಮ್ ಆದಿತ್ಯನಾಥ್ ಅವರು ‘ಯೋಗಿ’ ಯಾಗಲು ನಾಲಾಯಕ್ – ಸುಧೀರ್ ಕುಮಾರ್ ಮರೋಳಿ

Spread the love

ಯುಪಿ ಸಿಎಮ್ ಆದಿತ್ಯನಾಥ್ ಅವರು ‘ಯೋಗಿ’ ಯಾಗಲು ನಾಲಾಯಕ್ – ಸುಧೀರ್ ಕುಮಾರ್ ಮರೋಳಿ

ಉಡುಪಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಯಾರೂ ಯೋಗಿ ಎಂದು ಕರೆಯಬೇಕಾಗಿಲ್ಲ. ಅವರು ಯೋಗಿಯಾಗಲು ನಾಲಾಯಕ್ ಎಂದು ಕೆಪಿಸಿಸಿ ವಕ್ತಾರ ನ್ಯಾಯವಾದಿ ಸುಧೀರ್ ಕುಮಾರ್ ಮರೋಳಿ ಹೇಳಿದರು.

ಅವರು ಶುಕ್ರವಾರ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ದಿ. ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ ಅಂಗವಾಗಿ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ನಡೆದ ರೈತರು ಮತ್ತು ಕೃಷಿ ಕಾರ್ಮಿಕರನ್ನು ಉಳಿಸಿ ಪ್ರತಿಭಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆದಿತ್ಯನಾಥ್ ಅಸಮರ್ಥರು. ಆರೋಪಿಗಳ ರಕ್ಷಣೆಗೆ ಮುಂದಾದವರು ನೈಜ ಹಿಂದೂ ಆಗಿರಲು ಸಾಧ್ಯವೇ ಇಲ್ಲ. ಹೆಣದ ಮೇಲೆ ಸವಾರಿ ಮಾಡುವ ಇವರ ಅಟ್ಟಹಾಸಕ್ಕೆ ಜನ ತಕ್ಕ ಪಾಠ ಕಲಿಸಲಿದ್ದಾರೆ’ ‘ಘಟನಾ ಸ್ಥಳಕ್ಕೆ ತೆರಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ತಡೆದಿರುವುದನ್ನು ಯುವ ಕಾಂಗ್ರೆಸ್ ಖಂಡಿಸುತ್ತದೆ. ರಾಹುಲ್ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಯನ್ನು ಹತ್ತಿಕ್ಕಲು ನಿಮ್ಮಿಂದ ಸಾಧ್ಯವಿಲ್ಲ. ಅದರ ಬದಲಾಗಿ, ಆದಿತ್ಯನಾಥ್ ಅವರಿಂದ ಆಗುತ್ತಿರುವ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ತಡೆಯಿರಿ. ಇಲ್ಲದಿದ್ದರೆ, ಜನರೇ ಬಿಜೆಪಿ ಆಡಳಿತಕ್ಕೆ ಅಂತ್ಯ ಹಾಡುತ್ತಾರೆ’ ಎಂದು ಟೀಕಿಸಿದರು.

ಮಹಾತ್ಮಾ ಗಾಂಧೀಜಿಯವರನ್ನು ಜೀವಿತಾವಧಿಯಲ್ಲಿ ಮುಸಲ್ಮಾನರು, ಹಿಂದೂಗಳು, ದಲಿತರು ಎಲ್ಲರೂ ಶಂಕಾಸ್ಮದ ದೃಷ್ಟಿಯಿಂದಲೇ ನೋಡಿದ್ದರು. ಪ್ರಸ್ತುತ ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿಯೂ ಇದೇ ರೀತಿಯಲ್ಲಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರವನ್ನು ಕಳೆದುಕೊಂಡಿದೆ. ಆದರೆ ಶ್ರೀಸಾಮಾನ್ಯನ ನಿಟ್ಟುಸಿರುವ ಬಿಜೆಪಿಗೆ ಶಾಪವಾಗಿ ಪರಿಣಮಿಸಿದಾಗ ಕಾಂಗ್ರೆಸ್ ಪರ್ಯಾಯವಾಗಿ ಕಾಣಲಿದೆ ಎಂದು ಹೇಳಿದರು.

ಕಾಂಗ್ರೆಸ್ ಸರ್ವರನ್ನು ಒಪ್ಪುವ ಪ್ರೀತಿಯ ರಾಜಕಾರಣವನ್ನು ಮಾಡುತ್ತದೆ. ಎಪಿಎಂಸಿ ಕಾಯ್ದೆ ಇರುವುದರಿಂದ ಕೊನೆ ಪಕ್ಷ ರೈತರಿಗೆ ಬೆಂಬಲ ಬೆಲೆಯಾದರೂ ಸಿಗುತ್ತಿತ್ತು. ಕೇಂದ್ರ ಸರ್ಕಾರ ಹೊಸ ಕಾಯ್ದೆ ಮೂಲಕ ಅದನ್ನೂ ಸಿಗದಂತೆ ಮಾಡಿದೆ ಎಂದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಕರೊನಾ ಸಂಕಷ್ಟ ಸಮಯವನ್ನು ಬಳಸಿಕೊಂಡು ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ಜನವಿರೋಧಿ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ತಂದು ಜನರ ಮೇಲೆ ಹೇರುವ ಪ್ರಯತ್ನ ಮಾಡುತ್ತಿದೆ. ರೈತರನ್ನು ಮತ್ತು ಕೂಲಿಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿದೆ. ಕೊರೋನಾ ನಿಯಂತ್ರಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದರು. ವಿಶ್ವಗುರು ಸ್ಥಾನದಲ್ಲಿ ನಿಲ್ಲಬೇಕಾಗಿದ್ದ ಭಾರತ ಇಂದು ಕೊರೋನಾ ಪೀಡಿತರ ಸಂಖ್ಯೆಯಲ್ಲಿ ನಂಬರ್1 ಆಗಿರುವುದು ದುರಂತ ಎಂದು ಆಕ್ರೋಶ ಹೊರಹಾಕಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿಯವರು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿ ಕೊಟ್ಟ ಗಾಂಧಿಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆಯಂದೆ ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯನ್ನು ಪ್ರತಿಭಟಿಸುವ ಪ್ರಮೇಯ ಒದಗಿಬಂದಿರುವುದು ಖೇದಕರ. ರಾಷ್ಟ್ರ ಮತ್ತು ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಸರಕಾರ ರೈತರು, ದಲಿತರು ಮತ್ತು ಅಶಕ್ತ ಸಮುದಾಯದವರನ್ನು ಗುರಿಯಾಗಿಸಿಕೊಂಡು ಹಲ್ಲೆಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಎನ್ಎಸ್ಯುಐ ಜಿಲ್ಲಾ ಅಧ್ಯಕ್ಷ ಸೌರಭ ಬಲ್ಲಾಳ್, ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಾಗ್ಲೆ, ಮುಖಂಡರಾದ ಫಾ. ವಿಲಿಯಂ ಮಾರ್ಟಿಸ್, ಶಶಿಧರ ಶೆಟ್ಟಿ ಎರ್ಮಾಳ್, ಜ್ಯೋತಿ ಹೆಬ್ಬಾರ್, ವೆರೊನಿಕಾ ಕರ್ನೇಲಿಯೊ, ಭಾಸ್ಕರ ರಾವ್ ಕಿದಿಯೂರು, ರಮೇಶ್ ಕಾಂಚನ್, ಯತೀಶ್ ಕರ್ಕೇರಾ, ರೋಶನಿ ಒಲಿವರ್, ಶಶಿಧರ್ ಶೆಟ್ಟಿ, ಡಾ|ಸುನೀತಾ ಶೆಟ್ಟಿ, ಮೀನಾಕ್ಷಿ ಮಾಧವ, ಸುನೀಲ್ ಬಂಗೇರ, ನಿತ್ಯಾನಂದ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ಪ್ರಭಾಕರ ಆಚಾರ್ಯ, ಜನಾರ್ದನ ಭಂಡಾರ್ಕರ್, ರಮೇಶ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.


Spread the love