ಯುವಕನ ಕೊಲೆ ಯತ್ನ – ಮೂರು ಆರೋಪಿಗಳ ಬಂಧನ
ಮಂಗಳೂರು: ನಗರದ ನೆಲ್ಲಿಕಾಯಿ ರಸ್ತೆಯ ಅಪಾರ್ಟ್ ಮೆಂಟ್ ಒಂದರ ಪಾರ್ಕಿಂಗ್ ಸ್ಥಳದಲ್ಲಿ ಯುವಕನೋರ್ವನನ್ನು ಕೊಲೆಗೆ ಯತ್ನಿಸಿದ ಪ್ರಕರಣದ ಸಂಬಂಧ ಮೂವರು ಆರೋಪಿಗಳನ್ನು ಮಂಗಳೂರು ದಕ್ಷಿಣ ಪೋಲಿಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನಡುಪಳ್ಳೀ ಮಸೀದಿ ಬಳಿ ಅಹ್ಮದ್ ಸಿನಾನ್ ಜಲೀಲ್ ಚಿನ್ನ ಶಿನಾನ್ (22), ಕುದ್ರೋಳಿಯ ಶೇಖ್ ಶಹಬಾಝ್ ಚಾಬಾ (22), ಕುದ್ರೋಳಿಯ ಅನೀಶ್ ಅಶ್ರಫ್ (19) ಎಂದು ಗುರುತಿಸಲಾಗಿದೆ.
ಡಿಸೆಂಬರ್ 2 ರಂದು ರಾತ್ರಿ ಸುಮಾರು 10-45 ಗಂಟೆಗೆ ಮೊಹಮ್ಮದ್ ಇಜಾಸ್ ರವರು ತನ್ನ ಆಕ್ಟೀವಾ ಸ್ಕೂಟರ್ ನಲ್ಲಿ ತಮ್ಮ ಅಪಾರ್ಟ್ ಮೆಂಟ್ ಗೆ ಬಂದು ಎಂಟ್ರಾನ್ಸ್ ಬಳಿ ಸ್ಕೂಟರನ್ನು ನಿಲ್ಲಿಸಿದ ಸಮಯ ಆರೋಪಿಗಳು ಹಿಂದಿನಿಂದ ಬಂದು ತಲವಾರುಗಳಿಂದ ಕಡಿದಾಗ, ಮೊಹಮ್ಮದ್ ಇಜಾಸ್ ರವರು ಜೀವ ಭಯದಿಂದ ಓಡಿದ ಸಮಯ ಆರೋಪಿಗಳು ಬೆನ್ನಟ್ಟಿಕೊಂಡು ಹೋಗಿ ಅಪಾರ್ಟ್ ಮೆಂಟಿನ ಮೆಟ್ಟಿಲ ಬಳಿ ತಲವಾರುಗಳಿಂದ ತಲೆಗೆ ಕಡಿದು, ಚೂರಿಯಿಂದ ಬೆನ್ನಿಗೆ ಇರಿದು ಮಾರಣಾಂತಿಕವಾದ ತೀವ್ರತರಹದ ಗಾಯಗೊಳಿಸಿ, ಪರಾರಿಯಾಗಿದ್ದರು. ಈ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.
ಡಿಸೆಂಬರ್ 9 ರಂದು ಬೆಳಿಗ್ಗೆ 07-10 ಗಂಟೆಗೆ ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಆರೋಪಿಗಳನ್ನು ಸುರತ್ಕಲ್ ಜಂಕ್ಷನ್ ಬಳಿಯಿಂದ ದಸ್ತಗಿರಿ ಮಾಡಿ, ಕೃತ್ಯಕ್ಕೆ ಉಪಯೋಗಿಸಿದ ಆಕ್ಟೀವಾ ಸ್ಕೂಟರ್, ತಲವಾರು ಹಾಗೂ ಚೂರಿಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಆರೋಪಿಗಳು ಕೃತ್ಯ ನಡೆಸಿದ ಬಳಿಕ ಆರೋಪಿಗಳು ಗೋವಾಕ್ಕೆ ಪರಾರಿಯಾಗಿದ್ದರು. ಗೋವಾದಿಂದ ವಾಪಾಸ್ಸು ಮಂಗಳೂರಿಗೆ ಬರುತ್ತಿರುವ ಸಮಯ ಖಚಿತ ಮಾಹಿತಿ ಪಡೆದು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಈ ಹಿಂದೆ ಬಂದರು ಬಳಿ ಗಾಯಾಳು ಮೊಹಮ್ಮದ್ ಇಜಾಸ್ ಹಾಗೂ ಆರೋಪಿಗಳ ನಡುವೆ ನಡೆದ ಗಲಾಟೆಯ ದ್ವೇಷದಿಂದ ಆರೋಪಿಗಳು ಕೃತ್ಯ ನಡೆಸಿರುವುದೆಂದು ತನಿಖಾ ಸಮಯ ತಿಳಿದು ಬಂದಿರುತ್ತದೆ.
ಈ ಪ್ರಕರಣದಲ್ಲಿ ಇತರ ಯಾರು ಆರೋಪಿಗಳು ಭಾಗಿಯಾಗಿರುತ್ತಾರೆ ಎಂಬ ಬಗ್ಗೆ ತನಿಖೆ ನಡೆಸಿ, ಅವರ ವಿರುದ್ದ ಹಾಗೂ ಆರೋಪಿಗಳಿಗೆ ಆಶ್ರಯ ಮತ್ತು ಹಣಕಾಸಿನ ನೆರವು ನೀಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಬೆಳ್ಳಿಯಪ್ಪ ಕೆ. ಯು ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅನಂತ ಮುರ್ಡೇಶ್ವರ ರವರು ಆರೋಪಿಗಳನ್ನು ಬಂಧಿಸಿರುತ್ತಾರೆ. ಸಿಬ್ಬಂಧಿಗಳು ಆರೋಪಿ ಪತ್ತೆಗೆ ಸಹಕರಿಸಿರುತ್ತಾರೆ.