ಯುವಕರ ಭವಿಷ್ಯವನ್ನು ಹಸನುಗೊಳಿಸುವಲ್ಲಿ ಪ್ರಧಾನಿಗಳು ಯೋಜನೆ ರೂಪಿಸಲಿ : ಎನ್.ಎಸ್.ಯು.ಐ
ಉಡುಪಿ: ಪ್ರಧಾನಿಯವರ 70ನೇ ಹುಟ್ಟುಹಬ್ಬವನ್ನು ದೇಶದಾತ್ಯಂತ ಬಿಜೆಪಿ ಕಾರ್ಯಕರ್ತರು ಆಚರಿಸುತ್ತಿದ್ದಾರೆ. ಪ್ರಧಾನಿಯವರು ಯುವಕರ ಭವಿಷ್ಯವನ್ನು ಹಸನುಗೊಳಿಸುವಲ್ಲಿ ಇನ್ನಾದರೂ ಕಾರ್ಯೋನ್ಮುಖರಾಗ ಬೇಕೆಂಬುದು ನಮ್ಮ ಬಯಕೆ ಎಂದು ಎನ್.ಎಸ್.ಯು.ಐ.ಯ ಮುಖಂಡರಾದ ಸೌರಭ್ ಬಲ್ಲಾಳ್ರವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೇಶ ಇಂದು ಸಂದಿಗ್ಧತೆಯ ಸ್ಥಿತಿಯಲ್ಲಿದೆ. ಸರಕಾರ ಯುವಕರಿಗೆ ಸ್ವಾವಲಂಬಿ ಹಾಗೂ ಸ್ವಾಭಿಮಾನದ ಬದುಕು ಸಾಗಿಸಲು ಯಾವುದೇ ಉದ್ಯೋಗ ಅವಕಾಶದ ಯೋಜನೆಗಳನ್ನು ರೂಪಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಅದರೊಂದಿಗೆ ಲಾಕ್ಡೌನ್ನಿಂದಾಗಿ ದೇಶದಲ್ಲೆಡೆ ಯುವಕರು ಇದ್ದ ಉದ್ಯೋಗವನ್ನೇ ಕಳೆದುಕೊಂಡು ನಿರುದ್ಯೋಗಿಗಳಾಗಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ದೇಶವು ಇದುವರೆಗೆ ಕಂಡಿರದ ಆಂತರಿಕ ಸಮಸ್ಯೆ ಹಾಗೂ ಬಾಹ್ಯ ಸಮಸ್ಯೆಗಳಿಂದ ಜರ್ಜರಿತವಾಗಿದೆ. ಲಾಕ್ಡೌನ್ನಿಂದ ಜನತೆ ಸಂಕಷ್ಟದಲ್ಲಿದ್ದರೆ ಮೋದಿ ನೇತೃತ್ವದ ಕೇಂದ್ರ ಸರಕಾರ ಜನರಿಗೆ ಸರಕಾರದಿಂದ ದೊರಕುತ್ತಿರುವ ಸೌಲಭ್ಯಗಳನ್ನು ಕಡಿತಗೊಳಿಸಿ ಜೀವನವನ್ನೇ ದುಸ್ಥರ ಮಾಡುತ್ತಿದೆ. ಸರಕಾರಿ ಸೌಮ್ಯ ಸಂಸ್ಥೆಗಳನ್ನು ಒಂದೊಂದಾಗಿ ಖಾಸಗಿಯವರಿಗೆ ಮಾರಿ ಯುವಕರ ಸ್ವಾವಲಂಬಿ ಬದುಕಿಗೆ ಕೊಡಲಿ ಏಟು ನೀಡುತ್ತಿದೆ. ಭಾರತ-ಚೀನಾ ಗಡಿ ಸಂಘರ್ಷದೊಂದಿಗೆ ಸಮರದ ಛಾಯೆ ಆವರಿಸಿದೆ. ಒಂದು ಕಾಲದಲ್ಲಿ ಹಿಂದೂ ರಾಷ್ಟ್ರವಾಗಿ ಭಾರತದೊಂದಿಗೆ ಒಳ್ಳೆಯ ಬಾದಂವ್ಯ ಹೊಂದಿದ ಚಿಕ್ಕ ರಾಷ್ಟ್ರ ನೇಪಾಳ ಕೂಡಾ ಭಾರತದೊಂದಿಗೆ ತಗಾದೆ ತೆಗೆಯುತ್ತಿದೆ.
ರಾಜ್ಯ ಸರಕಾರವೂ ಕೂಡಾ ಯುವಕರ ಸ್ವಾವಲಂಬಿ ಬದುಕಿಗೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ರೂಪಿಸುವ ಬದಲು ಕೋವಿಡ್ ಅವ್ಯವಹಾರ ಹಾಗೂ ಡ್ರಗ್ಸ್ ಜಾಲವನ್ನು ಭೇದಿಸುವಲ್ಲಿ ವಿಫಲವಾಗಿ ಯುವಕರು ಭ್ರಷ್ಟಾಚಾರ ಹಾಗೂ ಮಾದಕ ವ್ಯಸನಿಗಳಾಗಲು ಪೂರಕ ವಾತಾವರಣ ಕಲ್ಪಿಸುತ್ತಿದೆ.
ಸಮಾಜಕ್ಕೆ ಕಂಟಕವಾಗಿರುವ, ಯುವಕರ ಜೀವನಕ್ಕೆ ಮುಳುವಾಗಿರುವ ಡ್ರಗ್ಸ್ ದಂಧೆಯನ್ನು ತಡೆಯುವ ಇಚ್ಚಾಶಕ್ತಿಯನ್ನು ರಾಜ್ಯ ಸರಕಾರ ಪ್ರದರ್ಶಿಸಬೇಕು. ಡ್ರಗ್ಸ್ ಮಾಫಿಯಾದಿಂದ ಯುವ ಸಮುದಾಯ ಹಾಗೂ ಸಮಾಜವನ್ನು ರಕ್ಷಿಸುವ ಗುರುತರ ಜವಾಬ್ದಾರಿ ಸರಕಾರದ ಮೇಲಿದೆ. ಪ್ರಧಾನಿ ಮೋದಿಯವರ ಜನ್ಮದಿನದ ಪ್ರಯುಕ್ತ ಸೆ. 17ರಂದು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಎಸ್.ಎಸ್.ಯು.ಐ. ಆಚರಿಸುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ಯುವಕರು 24 ಗಂಟೆಗಳ ಟ್ವಿಟ್ಟರ್ ಅಭಿಯಾನದಲ್ಲಿ ಭಾಗವಹಿಸಿ ಕೇಂದ್ರ ಸರಕಾರಕ್ಕೆ ನಿರುದ್ಯೋಗ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವಂತೆ ವಿನಂತಿಸಿದ್ದಾರೆ.