ಯುವಜನತೆ ಪ್ರಶ್ನಿಸುವ ಮನೋಭಾವ ಹೊಂದಿದಾಗ ಪ್ರಜಾಪ್ರಭುತ್ವದ ಮೌಲ್ಯ ಅರಿಯಬಹುದು – ಡಾ ಕನ್ಹಯ್ಯ ಕುಮಾರ್

Spread the love

ಯುವಜನತೆ ಪ್ರಶ್ನಿಸುವ ಮನೋಭಾವ ಹೊಂದಿದಾಗ ಪ್ರಜಾಪ್ರಭುತ್ವದ ಮೌಲ್ಯ ಅರಿಯಬಹುದು – ಡಾ ಕನ್ಹಯ್ಯ ಕುಮಾರ್

ಮಂಗಳೂರು: ಯುವ ಸಮುದಾಯ ಪ್ರಶ್ನಿಸುವ ಮನೋಭಾವ ಹೊಂದಿದಾಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಿಜವಾಗಿ ಅರಿಯಲು ಸಾಧ್ಯವಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಡಾ. ಕನ್ಹಯ್ಯ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಶನಿವಾರ ನಗರದ ಸಹೋದಯದ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರ ದಿವಂಗತ ಬಿ.ವಿ. ಕಕ್ಕಿಲ್ಲಾಯ ಅವರ ಶತಾಬ್ಧಿ ಕಾರ್ಯಕ್ರಮದಲ್ಲಿ ‘ಕವಲು ದಾರಿಯಲ್ಲಿ ಭಾರತದ ಯುವಜನರು’ ಎಂಬ ವಿಷಯದಲ್ಲಿ ಮಾತನಾಡಿದರು.

ಇಂದಿನ ಯುವಜನತೆ ಇತಿಹಾಸವನ್ನು, ಸ್ವಾತಂತ್ರ ಹೋರಾಟಗಾರರ ಬಗ್ಗೆ ಅಧ್ಯಯನ ಮಾಡುವುದಾಗಲಿ, ಅರಿಯುವ ಪ್ರಯತ್ನವನ್ನೂ ಮಾಡುವುದಿಲ್ಲ. ಇಂತಹ ವ್ಯವಸ್ಥೆಯಲ್ಲಿ ನಮಗೆ ಇತರ ರಾಜ್ಯಗಳ, ದೇಶದ ಇತಿಹಾಸ ಬಗ್ಗೆ ತಿಳಿದಿರಲು ಹೇಗೆ ಸಾಧ್ಯ ಎಂದವರು ಪ್ರಶ್ನಿಸಿದರು.

ಸ್ವಾತಂತ್ರ ಬಳಿಕ ಕಳೆದ 70 ವರ್ಷಗಳಲ್ಲಿ ದೇಶದಲ್ಲಿ ಬಹಳಷ್ಟು ಕ್ಷೇತ್ರಗಳಲ್ಲಿ ಬದಲಾವಣೆಗಳಾಗಿವೆ. ಅಭಿವೃದ್ಧಿ ಆಗಿದೆ. ಆದರೆ ಆಗಬೇಕಾಗಿದ್ದ ಪ್ರಮಾಣದಲ್ಲಿ ಆಗಿಲ್ಲ ಎನ್ನುವುದು ನಿಜ. ಇಂದಿನ ಯುವ ಸಮುದಾಯ ಯಾವ ಮಟ್ಟವನ್ನು ಏರಬೇಕಾಗಿತ್ತೋ ಆ ಮಟ್ಟಕ್ಕೆ ತಲುಪಿಲ್ಲ ಎಂಬುದು ವಾಸ್ತವ. ಇದಕ್ಕೆ ಕಾರಣ ಬಾಲ್ಯದಲ್ಲೇ ಹೆತ್ತವರು ಮಕ್ಕಳಿಗೆ ರಾಜನೀತಿ, ರಾಜಕಾರಣಿಗಳ ಬಗ್ಗೆ ಕೆಟ್ಟದಾಗಿ ಬಿಂಬಿಸಿರುವುದು. ಪ್ರಶ್ನಿಸುವ ಹಕ್ಕಿನಿಂದ ದೂರ ಸರಿಸಿರುವುದು ಎಂದವರು ಹೇಳಿದರು.

ಇಂದಿನ ಯುವ ಪೀಳಿಗೆ ಮಾಹಿತಿಯ ಕೊರತೆಯನ್ನು ಅನುಭವಿಸುತ್ತಿದೆಯಾದರೂ ನಾವು ನಿರಾಶವಾದಿಗಳಾಗಬೇಕಿಲ್ಲ. ಇಂದಿನ ಪರಿಸ್ಥಿತಿಗೆ ಭೂತಕಾಲ, ಇತಿಹಾಸ ಕಾರಣವಾಗಿರಬಹುದು. ಇಂದಿನ ನಮ್ಮ ನಡವಳಿಕೆ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬುದನ್ನು ಅರಿತು ನಾವು ಮುನ್ನಡೆಯಬೇಕಿದೆ ಎಂದು ಯುವಕರಿಗೆ ಡಾ. ಕನ್ಹಯ್ಯ ಕರೆ ನೀಡಿದರು.

ದೇಶಭಕ್ತಿಯ ಹೆಸರಿನಲ್ಲಿ ಸರಕಾರದ ಅಂಧ ಭಕ್ತಿ ಮಾಡುತ್ತಿರುವ ಜನರು ಅವರು ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. ದೇಶದ ಮೇಲೆ ಪ್ರೀತಿ ಇದ್ದರೆ, ಅಶಕ್ತರಲ್ಲಿ ಪ್ರಶ್ನೆ ಎತ್ತುವುದಲ್ಲ, ಬದಲಾಗಿ ಬಲಾಢ್ಯರಲ್ಲಿ ಪ್ರಶ್ನೆ ಎತ್ತಬೇಕಿದೆ. ಪ್ರಜಾಪ್ರಭುತ್ವವೆಂದರೆ ವಿಪಕ್ಷಕ್ಕೆ ಪ್ರಶ್ನೆ ಕೇಳುವುದಲ್ಲ. ಬದಲಾಗಿ ಸರಕಾರವನ್ನು ಪ್ರಶ್ನಿಸಬೇಕಿರುವುದು. ಅಧಿಕಾರಕ್ಕೆ ಬಂದ ಬಳಿಕ ಜನರು ಅವರ ಭಕ್ತಿ ಮಾಡುವ ಬದಲು ಅವರ ಬಳಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳಬೇಕು. ಈ ಪ್ರಕ್ರಿಯೆ ನಮ್ಮ ಮನೆಯಲ್ಲಿ ಆರಂಭವಾಗಬೇಕಿದೆ. ನಮ್ಮ ಶಿಕ್ಷಣ ಸಂಸ್ಥೆ, ಉದ್ಯೋಗದ ಸ್ಥಳಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಈ ಪ್ರಜಾಪ್ರಭುತ್ವದ ನಡವಳಿಕೆಗಳನ್ನು ಕಲಿಸಬೇಕಾಗಿದೆ. ತಂದೆಯನ್ನು ಪ್ರಶ್ನಿಸುವ ಅಧಿಕಾರ ಮಗನಿಗಿಲ್ಲದಿದ್ದರೆ, ಪತಿಯನ್ನು ಪ್ರಶ್ನಿಸುವ ಅಧಿಕಾರ ಪತ್ನಿಗಿಲ್ಲದಿರುವಾಗ ನೆರೆಹೊರೆಯನ್ನು ಪ್ರಶ್ನಿಸುವ ಅಧಿಕಾರಿ ನೆರೆಯವನಿಗೆ ಇಲ್ಲದಾಗ ಸಮಾಜ ಪ್ರಜಾಪ್ರಭುತ್ವವಾಗಲು ಹೇಗೆ ಸಾಧ್ಯ. ಇಂತಹ ವ್ಯವಸ್ತೆಯಲ್ಲಿ ಸಂವಿಧಾನದಲ್ಲಿ ಅದೆಷ್ಟು ಒಳ್ಳೆಯ ಅಂಶಗಳನ್ನು ಬರೆಯಲಾಗಿದ್ದರೂ ಅದರೂ ಕೇವಲ ಪುಸ್ತಕಕ್ಕೆ ಮಾತ್ರವೇ ಸೀಮಿತವಾಗಿ ಬಿಡುತ್ತದೆ ಎಂದು ಡಾ. ಕನ್ಹಯ್ಯ ಕುಮಾರ್ ಅಭಿಪ್ರಾಯಿಸಿದರು.


Spread the love