ಯುವಜನರು ಗಳಿಸಿದ ದುಡಿಮೆಯಲ್ಲಿ ಸಮಾಜಕ್ಕೆ ವಿನಿಯೋಗಿಸುವ ಸ್ವಭಾವ ಬೆಳಿಸಿಕೊಳ್ಳಿ – ಅಣ್ಣಾಮಲೈ
ಬ್ರಹ್ಮಾವರ : ಗಳಿಸಿದ ದುಡಿಮೆಯಲ್ಲಿ ಸಮಾಜಕ್ಕೆ ಕಿಂಚಿತ್ತಾದರೂ ಕೊಡುವ ಸ್ವಭಾವವನ್ನು ಯುವಜನತೆ ಬೆಳೆಸಿಕೊಳ್ಳಬೇಕು ಎಂದು ಮಾಜಿ ಐ.ಪಿ.ಎಸ್ ಅಧಿಕಾರಿ ಅಣ್ಣಾಮಲೈ ಹೇಳಿದರು.
ಇಂದು ಯುವ ಜನಾಂಗದಲ್ಲಿ ಸಂಘಟನಾ ಶಕ್ತಿ, ಇಚ್ಛಾಶಕ್ತಿ ಕಡಿಮೆಯಾಗುತ್ತಿದೆ. ಇಚ್ಛಾಶಕ್ತಿಯ ಕೊರತೆಯಿಂದ ದೇಶದಲ್ಲಿ ಕಳೆದ ಒಂದು ವರ್ಷದಲ್ಲೇ ಸುಮಾರು15 ಮಂದಿ 15ವರ್ಷಕ್ಕಿಂತ ಕಡಿಮೆ ವರ್ಷದ ಮಕ್ಕಳು ಆತ್ಮಹತ್ಯೆಯ ಮೊರೆ ಹೋಗಿದ್ದಾರೆ. ಇತರೆ ದೇಶಗಳಲ್ಲಿ ಇರುವ ಹಾಗೆ ನಮ್ಮ ದೇಶದಲ್ಲಿ ಕಮ್ಯುನಿಟಿ ಲೀಡರ್ಶಿಪ್ ಇಲ್ಲದೇ ಇರುವ ಕಾರಣ ಇಂತಹ ಘಟನೆಗಳು ಹೆಚ್ಚಾಗುತ್ತಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಆಶೀರ್ವಚನ ನೀಡಿದ ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಯುವಜನತೆಯಲ್ಲಿ ಮಾನವೀಯ ಪ್ರವೃತ್ತಿ ಬರಬೇಕು. ಮೊಬೈಲ್ ಗೀಳಿನಿಂದ ಹೊರಬಂದು ನೊಂದವರ ಕಣ್ಣೀರು ಒರೆಸುವ ಕಾರ್ಯ ಯುವ ಜನತೆಯಿಂದ ಆಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಧನ ಸಹಾಯ, ಕಿಡ್ನಿ ವೈಫಲ್ಯ ಮಕ್ಕಳಿಗೆ ಧನ ಸಹಾಯ, ಬಡವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ, ಅಂಗವಿಕಲರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ, ಸಂಚಲನ ವ್ಯಕ್ತಿ 2020 ಪ್ರಶಸ್ತಿ ಪ್ರದಾನ, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಬ್ರಹ್ಮಾವರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ರಾಘವೇಂದ್ರ ಸಿ, ಉದ್ಯಮಿ ಹಾಗೂ ಸಮಾಜಸೇವಕ ಗುರ್ಮೆ ಸುರೇಶ್ ಶೆಟ್ಟಿ, ಜಯಕರ್ ಶೆಟ್ಟಿ ಇಂದ್ರಾಳಿ, ವಕೀಲ ಸುಪ್ರಸಾದ್ ಶೆಟ್ಟಿ ಬೈಕಾಡಿ, ಉದ್ಯಮಿ ಚೇತನ್ ಕುಮಾರ್ ಶೆಟ್ಟಿ, ಆಶಾ ಎ, ಪದ್ಮಶ್ರೀ ಟಿ, ರೇಡಿಯೋ ಜಾಕಿ ಎರೋಲ್ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ನಂದಕಿಶೋರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸ್ವರ್ಣಶ್ರೀ ವಂದಿಸಿದರು.