ಯುವ ಬ್ರಿಗೇಡ್ ವತಿಯಿಂದ ನಗರದಲ್ಲಿ ಹೈದರಾಬಾದ್ ಸ್ವಾತಂತ್ಯ ಸಂಘರ್ಷ ಕುರಿತು ಕಾರ್ಯಕ್ರಮ
ಮಂಗಳೂರು: ಹೈದರಾಬಾದ್ ಸ್ವಾತಂತ್ರ್ಯ ಹಬ್ಬದ ಪ್ರಯುಕ್ತ ಯುವ ಬ್ರಿಗೆಡ್ ವತಿಯಿಂದ ಶನಿವಾರ ನಗರದ ಟಿ ವಿ ರಮಣ ಪೈ ಸಭಾಂಗಣದಲ್ಲಿ ಹೈದರಾಬಾದ್ ಸ್ವಾತಂತ್ಯ ಸಂಘರ್ಷ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಖ್ಯಾತ ಅಂಕಣಕಾರ ಚಕ್ರವರ್ತಿ ಸೂಲಿಬೇಲೆ ಅವರು ದೇಶಕ್ಕೆ ಸ್ವಾತಂತ್ರ್ಯ ದೊರೆತು ಒಂದು ವರ್ಷ ಒಂದು ತಿಂಗಳು ಬಳಿಕ 1948 ಸೆಪ್ಟೆಂಬರ್ 17 ರಂದು ಹೈದರಾಬಾದ್ ಕರ್ನಾಟಕದ ಜನತೆ ಸ್ವಾತಂತ್ರ್ಯ ಅನುಭವಿಸಿದರು. ಆಪರೇಶನ್ ಪೋಲೊ ಹೆಸರಿನಲ್ಲಿ ಸ್ಯನ್ಯ ನುಗ್ಗಿಸಿ ಧರ್ಮಕ್ಕಾಗಿ ಹುತಾತ್ಮರಾಗುವ ಕನಸಿನೊಂದಿಗೆ ಹೋರಾಟ ನಡೆಸುತ್ತಿದ್ದ ರಜಾಕಾರರನ್ನು ನಾಲ್ಕೆ ದಿನಗಳಲ್ಲಿ ಹಿಮ್ಮೆಟ್ಟಿಸುವುದು ಪಟೇಲರ ಅಪ್ಪಟ ದೇಶಪ್ರೇಮ ಹಾಗೂ ಗೆಲುವಿನ ಗತ್ತಿನಿಂದ ಸಾಧ್ಯವಾಯಿತು. ನಿಜಾಮನ ಆಡಳಿತದಲ್ಲಿ ಬೇಯುತ್ತಿದ್ದ ಹೈದರಾಬಾದ್ ಕರ್ನಾಟಕವನ್ನು ಸ್ವತಂತ್ರ ಭಾರತದ ಭಾಗವಾಗಿ ಮಾಡುವ ಪಣ ಉಕ್ಕಿನ ಮನುಷ್ಯ ಸರ್ದಾರ್ ಪಟೇಲರು ಕೈಗೊಂಡ ಕಾರಣ ಪಕ್ಕದಲ್ಲೊಂದು ಪಾಕಿಸ್ತಾನ ನಿರ್ಮಾಣ ತಪ್ಪಿತು ಎಂದರು.
ಹೈದರಾಬಾದ್ ಕರ್ನಾಟಕವನ್ನು ಪಾಕಿಸ್ತಾನದಂತೆ ಪ್ರತ್ಯೇಕ ರಾಷ್ಟ್ರವಾಗಿ ರೂಪಿಸುವ ನಿಜಾಮನ ಕನಸಿಗೆ ನೀರೆರೆದವನು ಬ್ರಿಟಿಷ್ ವೈಸ್ ರಾಯ್ ಮೌಂಟ್ ಬ್ಯಾಟನ್. ಹಿಂದುಗಳು ಬಹುಸಂಖ್ಯಾತರಿದ್ದ ಇಲ್ಲಿ ಹೊರಗಿನ ಮುಸ್ಲಿಮರನ್ನು ದೊಡ್ಡ ಪ್ರಮಾಣದಲ್ಲಿ ತರುವ ಮೂಲಕ ಹಾಗೂ ರಜಾಕಾರರಿಂದ ಬಲಾತ್ಕಾರವಾಗಿ ಮತಾಂತರ ಮಾಡಿಸುವ ಮೂಲಕ ನಡೆಸುತ್ತಿದ್ದ ಅಟ್ಟಹಾಸಕ್ಕೆ ಮಂಗಳ ಹಾಡಿರುವುದು ಇಂದು ಇತಿಹಾಸ ಎಂದು ಸೂಲಿಬೇಲೆ ಹೇಳಿದರು.
ಮುಖ್ಯ ಅತಿಥಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಮಾತನಾಡಿ ಲೋಕಾಯುಕ್ತ ವ್ಯವಸ್ಥೆಯನ್ನು ಸರಕಾರ ದುರ್ಬಲಗೊಳಿಸಿದೆ. ಇದರಿಂದ ಭ್ರಷ್ಟಾಚರ ತಡೆಯಲು ಇದ್ದ ಆಯುಧ ಕಳೆದುಹೋಗಿದೆ. ಈಗ ಜನರೇ ಆಯುಧವಾಗಬೇಕು. ಭ್ರಷ್ಟಾಚಾರ ತಡೆಯಲು ಯುವ ಬ್ರಿಗೆಡ್ ಇನ್ನಷ್ಟು ಕಾರ್ಯಕ್ರಮ ರೂಪಿಸಬೇಕು. ತನಗೆ ರಾಜಕೀಯ ಉದ್ದೇಶ ಅತ್ಯಂತ ಕಡಿಮೆ ಇದೆ. ಚುನವಾಣೆಗೆ ಇನ್ನೂ ಎರಡು ವರ್ಷ ಇದೆ. ತುಂಬ ದೂರದ ದಿನಗಳ ಬಗ್ಗೆ ತಾನು ಯೋಚಿಸುವುದಿಲ್ಲ ಎಂದರು.