ಯುವ ವಿಜ್ಞಾನಿ, ಪಕ್ಷಿ ತಜ್ಞ ಹರೀಶ್ ಭಟ್ ನಿಧನ
ಕಟಪಾಡಿ: ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಯುವ ವಿಜ್ಞಾನಿ ಹಾಗೂ ಪಕ್ಷಿ ತಜ್ಞ, ಉಡುಪಿ ಉದ್ಯಾವರ ಮೂಲದ ಹರೀಶ್ ಭಟ್ ಶುಕ್ರವಾರ ರಾತ್ರಿ ಮೂಡುಬಿದಿರೆಯಲ್ಲಿ ನಿಧನರಾದರು.
ಮೂಡುಬಿದಿರೆ ಆಳ್ವಾಸ್ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ದ.ಕ. ಮತ್ತು ಉಡು ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ, ಸ್ಪರ್ಧೆಗೆ ಮಾರ್ಗದರ್ಶನ ನೀಡಲು ಆಗಮಿಸಿದ್ದರು. ಶುಕ್ರವಾರ ಬೆಳಗ್ಗೆ ಉಪನ್ಯಾಸಕರ ಜತೆ ಸಮಾಲೋಚನೆ ನಡೆಸಿ, ಬಳಿಕ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರ ಜತೆ ಮಾತುಕತೆ ನಡೆಸಿ, ಅವರ ಜತೆ ಊಟ ಮಾಡಿದ್ದರು.
ಮಧ್ಯಾಹ್ನ ಮತ್ತೆ ಪ್ರದರ್ಶನ ವೀಕ್ಷಣೆ ಆಗಮಿಸಿದ್ದ ಸಂದರ್ಭ 2.45ರ ಹೊತ್ತಿಗೆ ಅಲ್ಲೇ ಕುಸಿದು ಬಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತಾದರೂ, ದೇಹ ಸ್ಥಿತಿ ಗಂಭೀರವಿದ್ದ ಕಾರಣ ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ತೀವ್ರ ಮೆದುಳು ರಕ್ತಸ್ರಾವಕ್ಕೆ ತುತ್ತಾಗಿದ್ದ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಪರಿಸರ, ಜೀವಿರಾಶಿಗಳು ಮತ್ತು ಸಸ್ಯ ಸಂಕುಲಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದ ಅವರು ಅದಮ್ಯ ಚೈತನ್ಯ ಹಾಗೂ ವಾಗ್ದೇವಿ ಸಂಸ್ಥೆಗಳೊಂದಿಗೆ ಸೇರಿ ಸಂಶೋಧನೆ ಮತ್ತು ವಿಜ್ಞಾನ ಸಂಬಂಧಿಸಿ ಚಟುವಟಿಕೆಯಲ್ಲಿ ತೊಡಗಿದ್ದರು.
ನಿಧನದ ಸುದ್ದಿ ತಿಳಿದು ಕೇಂದ್ರ ಸಚಿವ ಅನಂತ ಕುಮಾರ್, ಪತ್ನಿ ತೇಜಸ್ವಿನಿ ಶನಿವಾರ ಉದ್ಯಾವರದ ನಿವಾಸಕ್ಕೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಕಾಪು ಶಾಸಕ ವಿನಯಕುಮಾರ್ ಸೊರಕೆ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ. ಮೋಹನ್ ಆಳ್ವ, ಜಿಪಂ ಅಧ್ಯಕ್ಷ ದಿನಕರ ಬಾಬು, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಶಾಸಕ ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್ ಅಂತಿಮ ನಮನ ಸಲ್ಲಿಸಿದ್ದಾರೆ. ಮೃತರ ಅಂತ್ಯ ಕ್ರಿಯೆ ಉದ್ಯಾವರ ಹಿಂದೂ ರುದ್ರಭೂಮಿಯಲ್ಲಿ ಶನಿವಾರ ನಡೆಯಿತು.