ಯು.ಜಿ.ಸಿ. : ವೃತ್ತಿ ಶಿಕ್ಷಣ ಅಧ್ಯಯನಕ್ಕೆ ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜು ಆಯ್ಕೆ
ಉಜಿರೆ: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯು.ಜಿ.ಸಿ.) ದ ಅನುದಾನದೊಂದಿಗೆ ಉಜಿರೆಯಲ್ಲಿರುವ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಮೂರು ವಿಷಯಗಳಲ್ಲಿ ವೃತ್ತಿ ಶಿಕ್ಷಣ ಪದವಿ ತರಗತಿ ಪ್ರಾರಂಭಿಸಲು ಅನುಮತಿ ದೊರಕಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಸತೀಶ್ಚಂದ್ರ ಎಸ್. ತಿಳಿಸಿದ್ದಾರೆ. ಅವರು ಮಂಗಳವಾರ ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವೃತ್ತಿ ಶಿಕ್ಷಣ ಅಧ್ಯಯನಕ್ಕೆ ಆಯ್ಕೆಯಾದ ರಾಜ್ಯದ ಹದಿನೆಂಟು ಕಾಲೇಜುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಅನುದಾನಿತ ಕಾಲೇಜು ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜು ಆಗಿದ್ದು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಆಶ್ರಯದಲ್ಲಿ ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್, ವಾಣಿಜ್ಯ ವಿಭಾಗದ ಆಶ್ರಯದಲ್ಲಿ ರೀಟೆಲ್ ಆ್ಯಂಡ್ ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಆಶ್ರಯದಲ್ಲಿ ಸಾಫ್ಟ್ವೇರ್ ಆ್ಯಂಡ್ ಆ್ಯಪ್ ಡೆವಲಪ್ಮೆಂಟ್ ಕೋರ್ಸ್ಗಳನ್ನು ಸದ್ಯದಲ್ಲಿಯೇ ಪ್ರಾರಂಭಿಸಲಾಗುವುದು.
ಶೇ. 25 ರಷ್ಟು ಪಠ್ಯವನ್ನು ತರಗತಿ ಕೋಣೆಗಳಲ್ಲಿ ಬೋಧನೆ ಮಾಡಿದರೆ ಶೇ. 75 ರಷ್ಟು ಪಠ್ಯವನ್ನು ಪ್ರಾಯೋಗಿಕ ಜ್ಞಾನ, ತಾಂತ್ರಿಕ ಪರಿಣತಿ ಹಾಗೂ ಔದ್ಯಮಿಕ ಕ್ಷೇತ್ರಗಳಲ್ಲಿ ಕಲಿಯಬೇಕಾಗುತ್ತದೆ. ಈ ಬಗ್ಯೆ ಈಗಾಗಲೇ ಪ್ರತಿಷ್ಠಿತ ಕಂಪೆನಿಗಳೊಂದಿಗೆ ಕಾಲೇಜು ಒಡಂಬಡಿಕೆ ಮಾಡಿಕೊಂಡಿದೆ ಎಂದು ಅವರು ತಿಳಿಸಿದರು.
ಪ್ರತಿ ಕೋರ್ಸ್ಗೆ ಯು.ಜಿ.ಸಿ. ಒಂದು ಕೋಟಿ ಎಂಬತ್ತ ಏಳು ಲಕ್ಷ ರೂ. ಅನುದಾನ ನೀಡುತ್ತದೆ. ನೂತನ ಕೋರ್ಸ್ಗಳಿಗೆ ಈಗಾಗಲೇ ಪ್ರವೇಶ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಆಸಕ್ತ ವಿದ್ಯಾರ್ಥಿಗಳು ಕಾಲೇಜು ಕಾರ್ಯಾಲಯವನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಪ್ರೊ. ಸುವೀರ್ ಜೈನ್, ಸಂಚಾರಿ ದೂರವಾಣಿ : 9880088705.
ಗ್ರಾಮೀಣ ಪ್ರದೇಶದಲ್ಲಿರುವ ಎಸ್.ಡಿ.ಎಂ. ಕಾಲೇಜಿಗೆ ಯು.ಜಿ.ಸಿ. ಹೊಸ ವೃತ್ತಿ ಶಿಕ್ಷಣ ಪದವಿ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಿರುವ ಬಗ್ಯೆ ಆಡಳಿತ ಮಂಡಳಿ ಅಧ್ಯಕ್ಷರಾದ ಡಿ. ವೀರೇಂದ್ರ ಹೆಗ್ಗಡೆಯವರು, ಉಪಾಧ್ಯಕ್ಷರುಗಳಾದ ಪ್ರೊ. ಎಸ್. ಪ್ರಭಾಕರ್ ಮತ್ತು ಡಿ. ಸುರೇಂದ್ರ ಕುಮಾರ್ ಹಾಗೂ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್ ಮತ್ತು ಡಾ. ಬಿ. ಯಶೋವರ್ಮ ಸಂತಸ ವ್ಯಕ್ತಪಡಿಸಿದ್ದಾರೆ.
ನೂತನ ವೃತ್ತಿ ಶಿಕ್ಷಣ ಕೋರ್ಸ್ಗಳ ಸಂಯೋಜಕ ಪ್ರೊ. ಸುವೀರ್ ಜೈನ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಭಾಸ್ಕರ ಹೆಗ್ಡೆ ಮತ್ತು ಉಪನ್ಯಾಸಕ ಹಂಪೇಶ್ ಉಪಸ್ಥತರಿದ್ದು ಪೂರಕ ಮಾಹಿತಿ ನೀಡಿದರು.