ಉಡುಪಿ: ಮನಸ್ಸಿನಲ್ಲಿ ಯೋಚಿಸಿದಂತೆ ಮತ್ತು ನುಡಿದಂತೆ ಕೆಲಸ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್ ತಿಳಿಸಿದ್ದಾರೆ.
ಅವರು ಮಂಗಳವಾರ ಉಡುಪಿ ಬನ್ನಂಜೆಯ ಸಮಾಜ ಕಲ್ಯಾಣ ಇಲಾಖಾ ವಸತಿ ನಿಲಯದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶ್ರೀ ಮಹಾವೀರ ಜಯಂತಿ ಆಚರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಹಾತ್ಮ ಗಾಂಧೀ ಸಹ ತಮ್ಮ ಮಹಾವೀರರ ಸಂದೇಶದಂತೆ ಅಹಿಂಸೆ ಯನ್ನು ಪಾಲಿಸುತ್ತಿದ್ದರು, ಮಹಾವೀರರ ಕುರಿತು ಪುಸ್ತಕಗಳನ್ನು ಓದಿ, ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಹೇಳಿದ ಅವರು , ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ 15 ಕೋಟಿ ರೂ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಶ್ರೀಕಾಂತ್ ಸಿದ್ಧಾಪುರ ಮಾತನಾಡಿ, ಜೈನರ 24 ನೆ ತೀರ್ಥಂಕರರಾದ ಮಹಾವೀರರ ಸಂದೇಶದಲ್ಲಿ ಪ್ರಮುಖವಾಗಿ ಆತ್ಮವಿಶ್ವಾಸ ಮತ್ತು ಧೈರ್ಯ ಹಾಗೂ ಸ್ವಾವಲಂಬನೆಯನ್ನು ಕಾಣಬಹುದಾಗಿದೆ, ಅಹಿಂಸೆ ಕುರಿತು ಭೋದಿಸಿದ ಮಹಾವೀರರು, ಮನಸ್ಸಿನಲ್ಲಿ ಮತ್ತೊಬ್ಬರಿಗೆ ನೋವು ನೀಡುವ ಕುರಿತು ಯೋಚಿಸುವುದೂ ಸಹ ಹಿಂಸೆ ಎನಿಸಿಕೊಳ್ಳುತ್ತದೆ, ನೀನು ಬದುಕು ಇತರರನ್ನು ಬದುಕಲು ಬಿಡು ಎಂದು ಭೋಧಿಸಿದರು. ಸರಳವಾದ ಬದುಕಿನಿಂದ ಜಗತ್ ಕಲ್ಯಾಣ ಎಂದಿದ್ದ ಅವರ ಸಂದೇಶಗಳು ಇಂದಿನ ಆಧುನಿಕ ಜಗತ್ತಿಗೂ ಪ್ರಸ್ತುತ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ರಂಗಪ್ಪ ಸ್ವಾಗತಿಸಿದರು. ಜೈನ್ ಮಿಲನ್ ಉಡುಪಿಯ ಅಧ್ಯಕ್ಷ ಪ್ರಸನ್ನ ಕುಮಾರ್ ವಂದಿಸಿದರು. ಕಲಾವಿದ ಶಂಕರ್ ದಾಸ್ ಚಂಡ್ಕಳ ನಿರೂಪಿಸಿದರು.
ಯೋಗೀಶ್ ಕಿಣಿ ಮತ್ತು ತಂಡ , ಕುಕ್ಕುಂದೂರು, ಕಾರ್ಕಳ ಇವರಿಂದ ಸಂಗೀತ ಗಾಯನ ಕಾರ್ಯಕ್ರಮ ನಡೆಯಿತು.