ರಂಗ್‍ರಂಗ್‍ದ ದಿಬ್ಬಣ ಕರಾವಳಿಯಾದ್ಯಂತ ತೆರೆಗೆ
ಮಂಗಳೂರು: ವಾರಿನ್ ಕಂಬೈನ್ಸ್ ಲಾಂಛನದಲ್ಲಿ ತಯಾರಾಗಿರುವ ಶರತ್ ಕೋಟ್ಯಾನ್ ನಿರ್ಮಾಣದ ಕೃಷ್ಣಪ್ರಸಾದ್ ಉಪ್ಪಿನಕೋಟೆ ನಿರ್ದೇಶನದ ರಂಗ್ ರಂಗ್‍ದ ದಿಬ್ಬಣ ನವಂಬರ್ 3ರಂದು ಮಂಗಳೂರಿನ ಜ್ಯೋತಿ ಮಂದಿರದಲ್ಲಿ ಬಿಡುಗಡೆಗೊಂಡಿತು.
ಜೆಪ್ಪಿನಮೊಗರು ವನದುರ್ಗೆ ಮಂತ್ರ ಮೂರ್ತಿ ದೈವಸ್ಥಾನದ ಮೊಕ್ತೇಸರರಾದ ಯೋಗೀಶ್ ಭಟ್ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. `ರಂಗ್ ರಂಗ್‍ದ ದಿಬ್ಬಣ’ ತುಳು ಸಿನಿಮಾ ನೂರು ದಿನಗಳ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಶುಭ ಹಾರೈಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ತುಳು ಭಾಷೆಗೆ ತುಳು ನಾಟಕಗಳ ಕೊಡುಗೆ ಪ್ರಮುಖವಾದುದು. ಅದರ ಜತೆಗೆ ತುಳು ಸಿನಿಮಾ ರಂಗದ ಕೊಡುಗೆಯೂ ಇದೆ. ತುಳು ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಮನರಂಜನೆಯ ಜತೆಗೆ ಉತ್ತಮ ಸಂದೇಶವೂ ಲಭಿಸಿದೆ ಎಂದರು. ಹಿರಿಯ ನಿರ್ದೇಶಕ ಡಾ. ರಿಚರ್ಡ್ ಕ್ಯಾಸ್ಟಲಿನೊ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಿನಿಮಾ ನಿರ್ಮಾಣದ ಸಂಖ್ಯೆಯೂ ಜಾಸ್ತಿಯಾಗಿದೆ. ಸಿನಿಮಾದಲ್ಲಿ ಉತ್ತಮ ಗುಣಮಟ್ಟವನ್ನು ನೀಡುವ ಮೂಲಕ ಹೊಸತನದತ್ತ ಚಿಂತನೆ ನಡೆಸಬೇಕೆಂದರು.
ಸಮಾರಂಭದಲ್ಲಿ ಚಲನಚಿತ್ರ ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ್, ವಿಜಯಕುಮಾರ್ ಕೊಡಿಯಾಲ್‍ಬೈಲ್, ಉದ್ಯಮಿ ಶ್ರೀನಿವಾಸ ರೆಡ್ಡಿ, ತುಳು ಚಲನ ಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ್, ಜಗದೀಶ ಕಾರ್ನವರು, ಆರ್.ಧನರಾಜ್, ಇಸ್ಮಾಯಿಲ್ ಮೂಡುಶೆಡ್ಡೆ, ಎನ್.ಆರ್.ಕೆ. ವಿಶ್ವನಾಥ್, ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ್, ಅರ್ಜುನ್ ಕಾಪಿಕಾಡ್, ಪಮ್ಮಿ ಕೊಡಿಯಾಲ್ ಬೈಲ್, ರಂಗ್ ರಂಗ್‍ದ ದಿಬ್ಬಣದ ನಿರ್ದೇಶಕ ಕೃಷ್ಣಪ್ರಸಾದ್ ಉಪ್ಪಿನಕೋಟೆ, ನಿರ್ಮಾಪಕರಾದ ಶರತ್ ಕೋಟ್ಯಾನ್, ಪ್ರಶಾಂತ್ ಸಾಮಗ, ಸಂಗೀತ ನಿರ್ದೇಶಕ ಎಸ್.ಪಿ. ಚಂದ್ರಕಾಂತ್, ಶ್ರೀನಿವಾಸ ಬಾಬು, ರವಿರಾಜ್ ಶೆಟ್ಟಿ, ಸಂಹಿತಾ ಶಾ, ಸ್ವಾತಿ ಬಂಗೇರ, ಕೇಶವ ಸುವರ್ಣ, ದಿನೇಶ್ ಅತ್ತಾವರ್, ಮೊದಲಾದವರಿದ್ದರು.
ಜಿ.ಎ. ಬೋಳೂರು ಕಾರ್ಯಕ್ರಮ ನಿರ್ವಹಿಸಿದರು. ರಂಗ್ ರಂಗ್‍ದ ದಿಬ್ಬಣ ಸಿನಿಮಾವು ಮಂಗಳೂರಿನಲ್ಲಿ ಜ್ಯೋತಿ, ಪಿವಿಆರ್, ಸಿನಿಪೊಲೀಸ್, ಬಿಗ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನಾ, ಕಾರ್ಕಳದಲ್ಲಿ ರಾಧಿಕಾ, ಬೆಳ್ತಂಗಡಿಯಲ್ಲಿ ಭಾರತ್, ಮೂಡಬಿದ್ರೆಯಲ್ಲಿ ಅಮರಶ್ರೀ, ಸುಳ್ಯದಲ್ಲಿ ಸಂತೋಷ್, ಸುರತ್ಕಲ್ ನಲ್ಲಿ ನಟರಾಜ್, ಮಣಿಪಾಲದಲ್ಲಿ ಐನಾಕ್ಸ್ ಚಿತ್ರಮಂದಿರದಲ್ಲಿ ತೆರೆ ಕಂಡಿದೆ.
ರಂಗ್ ರಂಗ್‍ದ ದಿಬ್ಬಣ ಸಿನಿಮಾಕ್ಕೆ ಕರಾವಳಿ ಜಿಲ್ಲೆಯಾದ್ಯಂತ ಒಳ್ಳೆಯ ಪ್ರತಿಕ್ರಿಯೆ ಲಭಿಸಿದ್ದು, ಸಿನಿಮಾದಲ್ಲಿ ಕಾಲೇಜು ಹುಡುಗರು ಪ್ರೀತಿ ಪ್ರೇಮದ ಬಲೆಗೆ ಬಿದ್ದು ಆ ಬಳಿಕ ನಡೆಯುವ ಅವಾಂತರಗಳನ್ನು ಬಿಚ್ಚಿಡುವ ತುಳುನಾಡಿನ ಅಪ್ಪಟ ತುಳು ಮಣ್ಣಿನ ಅಪರೂಪದ ಪ್ರೇಮ ಕಥೆಯನ್ನು ರಂಗ್‍ರಂಗ್‍ದ ದಿಬ್ಬಣ ಒಳಗೊಂಡಿದೆ.