ರಂಗ್ ರಂಗ್‍ದ ದಿಬ್ಬಣ ತುಳುಚಿತ್ರದ ಧ್ವನಿಸುರುಳಿ ಪೇಜಾವರ ಸ್ವಾಮೀಜಿ ಬಿಡುಗಡೆ
ಉಡುಪಿ: ಸಂಪೂರ್ಣ ಕರಾವಳಿಯಲ್ಲಿ ಚಿತ್ರೀಕರಣಗೊಂಡು ಸ್ಯಾಂಡಲ್‍ವುಡ್ ತಂತ್ರಜ್ಞರ ಕೈಚಳಕದಿಂದ ಅದ್ದೂರಿಯಾಗಿ ಮೂಡಿ ಬಂದಿರುವ ಈ ಚಿತ್ರದ ಧ್ವನಿಸುರುಳಿಯನ್ನು ಉಡುಪಿ ಕೃಷ್ಣ ಮಠದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ನಿರ್ಮಾಪಕರಾದ ಶರತ್ ಕೋಟ್ಯಾನ್ , ನಿರ್ದೇಶಕರಾದ ಕೃಷ್ಣ ಪ್ರಸಾದ್ ಉಪ್ಪಿನಕೋಟೆ, ಸಂಗೀತ ನಿರ್ದೇಶಕರಾದ ಎಸ್.ಪಿ.ಚಂದ್ರಕಾಂತ್,ನಾಯಕ ನಟ ನಟಿಯರಾದ ರವಿರಾಜ್ ಶೆಟ್ಟಿ,ಪ್ರಶಾಂತ್ ಸಾಮಗ,ಸ್ವಾತಿ ಬಂಗೇರ ,ಸಂಹಿತಾ ಶಾ ಮುಂತಾದವರು ಉಪಸ್ಥಿತರಿದ್ದರು.
ತುಳುಭಾಷೆಯಲ್ಲಿ ಕರಾವಳಿಯ ಪ್ರತಿಭಾವಂತ ಯುವಕರೇ ನಿರ್ಮಿಸುತ್ತಿರುವ ಒಂದು ಉತ್ತಮ ಕಮರ್ಷಿಯಲ್ ಚಿತ್ರ ರಂಗ್ ರಂಗ್‍ದ ದಿಬ್ಬಣದಲ್ಲಿ ಅನೇಕ ಹೊಸ ಪ್ರತಿಭೆಗಳನ್ನು ಪರಿಚಯಿಸಲಾಗಿದೆ. ಬೆಂಗಳೂರಿನಲ್ಲಿ ಎಡಿಟಿಂಗ್, ಡಬ್ಬಿಂಗ್,ರಿರೆರ್ಕಾಡಿಂಗ್ ಮುಗಿಸಿದ್ದು, ಮುಂದಿನ ಮೇ ತಿಂಗಳಲ್ಲಿ ರಾಜ್ಯಾದ್ಯಂತ ಚಿತ್ರ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿದೆ.
ವಿಭಿನ್ನ ಕಥಾಹಂದರ ಮತ್ತು ಟೈಟಲ್‍ನ್ನು ಹೊಂದಿರುವ ರಂಗ್ ರಂಗ್‍ದ ದಿಬ್ಬಣ ತುಳು ಚಿತ್ರ ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿರುವ ತುಳುನಾಡಿನ ಯುವಕರೇ ಸೇರಿ ಅದ್ದೂರಿಯಾಗಿ ನಿರ್ಮಿಸುತ್ತಿರುವ ಚಿತ್ರವಾಗಿದೆ. ಕಾಲೇಜು ಹುಡುಗರು ಪ್ರೀತಿ ಪ್ರೇಮದ ಬಲೆಗೆಬಿದ್ದು, ಆ ಬಳಿಕ ನಡೆಯುವ ಅವಾಂತರಗಳನ್ನು ಬಿಚ್ಚಿಡುವ ತುಳುನಾಡಿನ ಅಪ್ಪಟ ತುಳು ಮಣ್ಣಿನ ಅಪರೂಪದ ಪ್ರೇಮ ಕಥೆಯೇ ರಂಗ್ ರಂಗ್‍ದ ದಿಬ್ಬಣ. ಚಿತ್ರದುದ್ದಕ್ಕೂ ಹಾಸ್ಯ ಸನ್ನಿವೇಶಗಳನ್ನು ವಿಭಿನ್ನವಾಗಿ ನಿರೂಪಿಸಲಾಗಿದ್ದು, ಡ್ರಗ್ಸ್ ವಿರುದ್ಧ ಯುವಜನರಲ್ಲಿ ಜಾಗೃತಿ ಮೂಡಿಸುವ ಚಿತ್ರವಾಗಿ ಮೂಡಿಬಂದಿದೆ.
ಒಟ್ಟು ಏಳು ಹಾಡುಗಳಿರುವ ಈ ಚಿತ್ರವನ್ನು ಸಂಪೂರ್ಣ ಸಂಗೀತಮಯ, ಸಾಂಸಾರಿಕ ಚಿತ್ರವಾಗಿ ನಿರ್ಮಾಣ ಮಾಡಲಾಗಿದೆ. ಕಡಲಮಗೆ ಚಿತ್ರಕ್ಕೆ ಕತೆ,ಚಿತ್ರಕತೆ ಬರೆದಿರುವ ನಿರ್ದೇಶಕ ಎಸ್.ಮಹೇಂದರ್ ಗರಡಿಯಲ್ಲಿ ಪಳಗಿರುವ ಯುವ ನಿರ್ದೇಶಕ ಕೃಷ್ಣಪ್ರಸಾದ್ ಉಪ್ಪಿನಕೋಟೆ ಅವರು ಕತೆ ಚಿತ್ರಕತೆ ಬರೆದು ನಿರ್ದೇಶಿಸಿರುವ ಈ ಚಿತ್ರ ಕ್ಲಾಸ್ ಚಿತ್ರವಾಗಿ ಮೂಡಿಬಂದಿದೆ ಎಂಬುದು ಚಿತ್ರದ ನಿರ್ಮಾಪಕ ಬೆಂಗಳೂರಿನ ಯುವ ಉದ್ಯಮಿ ಶರತ್ ಕೋಟ್ಯಾನ್ ಅವರ ಅಭಿಪ್ರಾಯವಾಗಿದೆ. ತುಳುಚಿತ್ರದಲ್ಲಿ ಹಾಸ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ನಿಟ್ಟಿನಲ್ಲಿ ಈ ಚಿತ್ರದುದ್ದಕ್ಕೂ ಸಾಕಷ್ಟು ಹಾಸ್ಯ ಸನ್ನಿವೇಶಗಳನ್ನು ಅಳವಡಿಸಲಾಗಿದೆ. ತುಳುನಾಡಿನ ಪ್ರಮುಖ ಹಾಸ್ಯ ನಟರಾದ ಉಮೇಶ್ ಮಿಜಾರ್, ರಾಘವೇಂದ್ರ ರೈ, ದಿನೇಶ್ ಅತ್ತಾವರ, ರಂಜನ್ ಬೋಳೂರು, ಆರ್‍ಜೆ ರೂಪೇಶ್, ರಘು ಪಾಂಡೇಶ್ವರ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಈ ಚಿತ್ರದ ಮೂಲಕ ನಾಯಕ ನಟರಾಗಿ ರವಿರಾಜ್ ಶೆಟ್ಟಿ, ಪ್ರಶಾಂತ್ ಸಾಮಗ, ನಾಯಕಿಯರಾಗಿ ಸ್ವಾತಿ ಬಂಗೇರ, ಸಂಹಿತಾ ಶಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಲಾಗುತ್ತಿದೆ.
ರಂಗ್‍ರಂಗ್‍ದ ದಿಬ್ಬಣ ಚಿತ್ರದಲ್ಲೂ ಏಳು ಇಂಪಾದ ಹಾಡುಗಳನ್ನು ಬಾಲಿವುಡ್‍ನ ಖ್ಯಾತ ಗಾಯಕರ ಕಂಠಸಿರಿಯಿಂದ ಹಾಡಿಸಲಾಗಿದೆ. ಬಾಲಿವುಡ್ ಸಿಂಗರ್ ಉದಿತ್ ನಾರಾಯಣ್, ಜಾವೇದ್ ಅಲಿ, ಪ್ರಿಯಾ ಹಿಮೇಶ್, ವಿನುತ ಕಾರ್ತಿಕ್, ಅನುರಾಧ ಭಟ್,ಪ್ರತಿಮಾ ಭಟ್, ಡಾ.ವಿಜಯ್ ಹಾಡಿರುವ ಗೀತೆಗಳಲ್ಲಿ ತುಳುನಾಡಿನ ಅಪ್ಪಟ ಸಾಹಿತ್ಯದ ಕಂಪು ಅಡಗಿದೆ. ಹಿಂದಿ ಚಲನಚಿತ್ರಗಳ ಮಾದರಿಯಲ್ಲಿ ಡಿಜಿಟಲ್ ಸೌಂಡ್ ಇಫೆಕ್ಟ್ ನೊಂದಿಗೆ ಹಾಡುಗಳನ್ನು ಮೆಲೋಡಿಯಾಗಿ ಅಳವಡಿಸಲಾಗಿದೆ. ಜಾವೇದ್ ಅಲಿ ಹಾಡಿರುವ ‘ಪಚ್ಚೆ ಕುರಲ್‍ದ ಪಜ್ಜಿ ಕಮ್ಮೆನ’ ಹಾಗೂ ಪ್ರಿಯಾ ಹಿಮೇಶ್ ಹಾಡಿರುವ “ಜವನಾ ತೂಲ” ಈಗಾಗಲೇ ಹಿಟ್ ಹಾಡುಗಳ ಸಾಲಿಗೆ ಸೇರಿದ್ದು, ಪಡ್ಡೆ ಹುಡುಗರನ್ನು ಹುಚ್ಚೆಬ್ಬಿಸಿ ಕುಣಿಯುವಂತೆ ಮಾಡಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಕೃಷ್ಣಪ್ರಸಾದ್ ಉಪ್ಪಿನಕೋಟೆ.
ವಾರಿನ್ ಕಂಬೈನ್ಸ್ ರವರ ಪ್ರಥಮ ಚಿತ್ರವಾದ ರಂಗ್ ರಂಗ್‍ದ ದಿಬ್ಬಣಕ್ಕೆ ಚೆಲುವಿನ ಚಿತ್ತಾರ ಚಿತ್ರದ ಛಾಯಾಗ್ರಾಹಕ ರೇಣುಕುಮಾರ್ ಅವರ ಛಾಯಾಗ್ರಹಣವಿದೆ. ಕಡಲ ಮಗೆ ಚಿತ್ರದ ಸಂಗೀತ ನಿರ್ದೇಶಕ ಎಸ್.ಪಿ.ಚಂದ್ರಕಾಂತ್ ಸಂಗೀತ ನೀಡಿದ್ದಾರೆ. ಸುಧೀರ್ ಅತ್ತಾವರ್, ವಿಜಯಕುಮಾರ್ ಕೊಡಿಯಾಲ್‍ಬೈಲ್, ಸಲೀಂ ಪುತ್ತೂರು ಸಾಹಿತ್ಯ ಬರೆದಿದ್ದಾರೆ. ಮಾಸ್ ಮಾದ ಅವರು ಸಾಹಸ ನಿರ್ದೇಶಕರಾಗಿದ್ದು, ರಂಜೀತ್ ಸುವರ್ಣ, ಕಿಶೋರ್ ಮೂಡಬಿದ್ರಿ ಸಹನಿರ್ದೇಶಕರಾಗಿದ್ದಾರೆ. ಅಕುಲ್ ನೃತ್ಯ ನಿರ್ದೇಶಕರಾಗಿದ್ದಾರೆ. ಮಧು ಸುರತ್ಕಲ್ ಸಂಭಾಷಣೆ ಬರೆದಿದ್ದಾರೆ. ಶ್ರೀನಿವಾಸ್ ಬಾಬು ಸಂಕಲನ, ಕಲೆ ಕೇಶವ ಸುವರ್ಣ ಹಾಗೂ ಹರೀಶ್ ಪ್ರಸಾಧನವಿದೆ. ಸತೀಶ್ ಬ್ರಹ್ಮಾವರ, ರಾಜೇಶ್ ಕುಡ್ಲ ಚಿತ್ರದ ನಿರ್ವಹಣೆ ಮಾಡಿದ್ದಾರೆ.