ರಕ್ತಪಾತದಿಂದ ದತ್ತಪೀಠ ಹಿಂಪಡೆಯಲು ಮುತಾಲಿಕ್ ಅವರಂತಹ ಸಾವಿರ ನಾಯಕರು ಬಂದರೂ ಅಸಾಧ್ಯ : ಅನ್ಸಾರ್ ಅಹ್ಮದ್
ಉಡುಪಿ : ರಕ್ತ ಚೆಲ್ಲಿಯಾದ್ರೂ ದತ್ತಪೀಠವನ್ನು ಹಿಂದೂ ಪೀಠವಾಗಿಸ್ತೇವೆ ಎನ್ನುವಂತಹ ಪ್ರಮೋದ್ ಮುತಾಲಿಕ್ ರವರ ಹೇಳಿಕೆಯನ್ನು ಯಾವೊಬ್ಬ ಪ್ರಜ್ಞಾವಂತ ಭಾರತೀಯ ನಾಗರಿಕನೂ ಬೆಂಬಲಿಸಲು ಸಾಧ್ಯವಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹ್ಮದ್ ಪ್ರತಿಕ್ರಿಯಿಸಿದ್ದಾರೆ.
ರಕ್ತಪಾತದಿಂದ ಇಂತಹ ಸಮಸ್ಯೆಯನ್ನು ಬಗೆಹರಿಸಲು ಪ್ರಮೋದ್ ಮುತಾಲಿಕ್ ರವರಂತಹ ಸಾವಿರ ನಾಯಕರು ಬಂದರು ಸಾಧ್ಯವಿಲ್ಲ. ಬದಲಾಗಿ ಸೌಹಾರ್ದತೆಯಿಂದ ಪ್ರೀತಿ ಪೂರ್ವಕವಾಗಿ ಯಾ ಕಾನೂನು ಸುವ್ಯವಸ್ಥೆ-ನ್ಯಾಯಾಂಗದ ತೀರ್ಪಿನ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಒಳಿತು. ಇಂತಹ ಉದ್ವೇಗ ಭರಿತ ಹೇಳಿಕೆಗಳನ್ನು ಕೊಟ್ಟು ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುವಂತಹ ಪ್ರಯತ್ನವನ್ನು ಮುತಾಲಿಕ ರವರಂತಹ ನಾಯಕರುಗಳು ಇನ್ನಾದರೂ ನಿಲ್ಲಿಸಲಿ.
ದೇವರ ಸ್ಥಾನವನ್ನು ದೇವರಿಗೆ ಮರಳಿ ಒದಗಿಸಿಕೊಡಲು ಪ್ರಮೋದ್ ಮುತಾಲಿಕ್ ಯಾ ಯಾವೊಬ್ಬ ಮನುಷ್ಯನಿಂದಲೂ ಸಾಧ್ಯವಿಲ್ಲ.ಒಂದು ವೇಳೆ ದೇವರ ನೆಲೆ ಇದ್ದದ್ದೇ ಹೌದಾದರೆ ದೇವರ ಶಕ್ತಿ ಇದ್ದದ್ದೇ ಹೌದಾದರೆ ಆ ಸ್ಥಾನವನ್ನು ವಾಪಾಸು ಪಡೆದು ಕೊಳ್ಳಲು ದೇವರಿಗೆ ಚೆನ್ನಾಗಿ ತಿಳಿದಿದೆ. ದೇವರೇ ತನ್ನ ಪಾಡಿಗೆ ತಾನು ಸುಮ್ಮನಿರುವಾಗ ಇಂಥವರಿಗೆ ಇದೆಲ್ಲ ಬೇಕಾ ಎಂದು ಅನ್ಸಾರ್ ಅಹ್ಮದ್ ಉಡುಪಿಯವರು ತನ್ನ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.