ರಕ್ತ ಚೆಲ್ಲಿಯಾದ್ರೂ ದತ್ತಪೀಠವನ್ನ ಹಿಂದೂ ಪೀಠವಾಗಿಸ್ತೇವೆ – ಪ್ರಮೋದ್ ಮುತಾಲಿಕ್
ಚಿಕ್ಕಮಗಳೂರು: ರಕ್ತಚೆಲ್ಲಿಯಾದರು ದತ್ತಪೀಠವನ್ನ ಹಿಂದೂಗಳ ಪೀಠವಾಗಿಸುತ್ತೇವೆ ಎಂದು ಸರ್ಕಾರಕ್ಕೆ ಸ್ಪಷ್ಟಪಡಿಸುತ್ತೇವೆ ಅಂತ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದಲ್ಲಿ ಶ್ರೀರಾಮಸೇನೆ ನೇತೃತ್ವದಲ್ಲಿ ನಡೆಯುತ್ತಿರುವ ದತ್ತಮಾಲಾ ಅಭಿಯಾನದ ಅಂತಿಮ ದಿನವಾದ ಇಂದು ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಮುತಾಲಿಕ್ ರಾಜಕೀಯ ಮುಖಂಡರ ವಿಳಂಬ ನೀತಿಯ ವಿರುದ್ಧ ವಾಗ್ದಾಳಿ ನಡೆಸಿದರು.
ದತ್ತಪೀಠ ವಿವಾದವನ್ನು ಶಾಂತಿಯಿಂದಲೇ ಬಗೆಹರಿಸಬಹುದು. ಆದರೆ ವಿವಾದವನ್ನು ಜೀವಂತವಾಗಿರುವಂತೆ ರಾಜಕಾರಣಿಗಳು, ಬುದ್ಧಿಜೀವಿಗಳು ನೋಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡ ಅವರು ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿದ್ದರು. ಇಂದು ದೇವೇಗೌಡ ಅವರ ಪುತ್ರರಾದ ಎಚ್‍ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾರೆ. ತಂದೆಯಂತೆ ಇಂದು ದತ್ತಪೀಠ ವಿವಾದವನ್ನ ಬಗೆಹರಿಸಿ ಹಿಂದೂಗಳಿಗೆ ನೀಡಬೇಕೆಂದು ಎಂದು ಮನವಿ ಮಾಡಿದರು.
ದತ್ತಪೀಠದ ಪ್ರದೇಶದಲ್ಲಿರುವ ನಾಗೇನಹಳ್ಳಿ ಬಳಿರುವ ಬಾಬಾಬುಡನ್ ದರ್ಗಾವನ್ನು ಮುಸ್ಲಿಮರಿಗೆ ಒಪ್ಪಿಸಿ, ಈಗ ಇರುವ ಶ್ರೀ ಗುರು ದತ್ತಾತ್ರೇಯ ಪೀಠವನ್ನು ಹಿಂದೂಗಳಿಗೆ ನೀಡುವ ಮೂಲಕ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಬಹುದು. ಕಾಂಗ್ರೆಸ್ ಹಾಗೂ ಬುದ್ಧಿಜೀವಿಗಳಿಗೆ ದತ್ತಪೀಠದ ವಿವಾದ ಜೀವಂತವಾಗಿರಬೇಕಿದೆ. ಬುದ್ಧಿ ಜೀವಿಗಳ ಕಿತಾಪತಿ ಇರುವವರೆಗೂ ನೀತಿ ನಿಯಮಗಳು, ಬಂಧನಗಳು ಸಾಕಷ್ಟು ಇರುತ್ತದೆ. ಇವುಗಳೆಲ್ಲ ಇದ್ದರು ಕೂಡ ಭಕ್ತರು ಯಾವುದಕ್ಕೂ ಹೆದರದೆ ಹೋರಾಟದಲ್ಲಿ ಭಾಗವಹಿಸಿದ್ದಾರೆ. ನಮ್ಮ ಹೋರಾಟವನ್ನು ಯಾವುದೇ ಕಾರಣಕ್ಕೂ ತಡೆಯಲು ಸಾಧ್ಯವಿಲ್ಲ. ದತ್ತಪೀಠ ಹಿಂದೂಗಳ ಪೀಠ ಆಗುವವರೆಗೂ ನಮ್ಮ ಹೋರಾಟ ನಿರಂತರ ಎಂದು ಖಡಕ್ ಆಗಿ ನುಡಿದಿದ್ದಾರೆ.
ಕೃಪೆ : ಪಬ್ಲಿಕ್ ಟಿವಿ