ರತ್ನಾಕರವರ್ಣಿಯ ಕಾವ್ಯದ ವೈಶಿಷ್ಟ್ಯಗಳು ವಿಶೇಷ ಉಪನ್ಯಾಸ
ಮಂಗಳೂರು: ಜೈನಧರ್ಮ ತನ್ನ ಪ್ರಾಬಲ್ಯ ಕಳೆದುಕೊಳ್ಳುತ್ತಿರುವ ಮಧ್ಯಯುಗೀನ ಕಾಲಘಟ್ಟದಲ್ಲಿ, ಸತಿಪತಿಗಳೊಂದಾಗಿಪ್ಪ ಭಕ್ತಿ ಶಿವಂಗೆ ಹಿತಮಪ್ಪುದು ಎಂಬ ವೀರಶೈವ ಧರ್ಮದ ಲಿಂಗಪತಿ ಶರಣಸತಿ ಎಂಬ ಸಾಂಸ್ಥಿಕ ಸಂರಚನೆಯನ್ನು ಮಹಾಕವಿ ರತ್ನಾಕರವರ್ಣಿಯನ ಭರತೇಶ ವೈಭವದ ಭರತನ ಪಾತ್ರಚಿತ್ರಣದ ಮೂಲಕ ಪ್ರೊ.ಸತ್ಯನಾರಾಯಣ ಮಲ್ಲಿಪಟ್ಟ ಅವರು ಗುರುತಿಸುವ ಪ್ರಯತ್ನ ಮಾಡಿದರು.
ಪ್ರಥಮ ದರ್ಜೆಯ ಕಾಲೇಜು ರಥಬೀದಿ ಇಲ್ಲಿ ನಡೆದ ರತ್ನಾಕರವರ್ಣಿಯ ಕಾವ್ಯದ ವೈಶಿಷ್ಟ್ಯಗಳು ಎಂಬ ವಿಚಾರದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಕಠಿಣ ವ್ರತದ ಮೂಲಕ ಸ್ತ್ರೀ ಅಥವ ಮಡದಿ ತನ್ನ ಸಾಧನೆಗೆ ಅಡ್ಡಿ ಆ ಮೂಲಕ ಮೂಕ್ಷಕ್ಕೆ ಸಲ್ಲಬೇಕಾದ ಮನುಷ್ಯ ಎಲ್ಲವನ್ನು ತೊರೆಯಬೇಕು ಎಂಬ ತಾತ್ವಿಕ ಜಿಜ್ಞಾಸೆ ಜೈನಧರ್ಮದಲ್ಲಿದ್ದ ಕಾಲದಲ್ಲಿ ಮತ್ತೆ ಜೈನಧರ್ಮವನ್ನು ಪ್ರವರ್ಧಮಾನಕ್ಕೆ ತರಲು ವೀರಶೈವ ಧರ್ಮದ ಸಡಿಲಿಕೆಗಳನ್ನು ಸ್ವಾತಂತ್ರ್ಯದ ಅಯಾಮವಾಗಿ ರತ್ನಾಕರವರ್ಣಿಯ ಭರತ ಪಾತ್ರದ ಮೂಲಕ ಉನ್ನತೀಕರಿಸಿದ. ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿ, ಮಂಡೆ ಬೆಳದು ಮನಬೊಳಾದ ತವಸಿಯಾಗಿ ತತ್ಕಾಲದಲ್ಲಿ ಬೆಳೆದು ಬದಲಾದ ವ್ಯಕ್ತಿತ್ವ ಭರತನದು ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರೊ ರಾಜಶೇಖರ ಹೆಬ್ಬಾರ್ ವಹಿಸಿಕೊಂಡರು.
ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರು ಹಾಗೂ ಮಹಾಕವಿ ರತ್ನಾಕರವರ್ಣಿಯ ಅಧ್ಯಯನ ಪೀಠದ ಸಂಯೋಜಕರಾದ ಪ್ರೊ ಸೋಮಣ್ಣ ಹೊಂಗಳ್ಳಿಯವರು ಪೀಠದ ಕಾರ್ಯ ಚಟುವಟಿಕೆಯ ಕುರಿತು ಪ್ರಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಪ್ರಕಾಶ್ ಚಂದ್ರ ಸ್ವಾಗತಿಸಿದರು. ಕುಮಾರಿ ಶ್ರೀದೇವಿ ರತ್ನಾಕರವರ್ಣಿಯನ ಸಾಂಗತ್ಯಗಳನ್ನು ಸುಶ್ರಾವ್ಯವಾಗಿ ಹಾಡಿದರು. ಕನ್ನಡ ಸಂಘದ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.