ರಥಬೀದಿ ಕಾಲೇಜಿಗೆ 5.10 ಕೋಟಿ ಮತ್ತು ಬಲ್ಮಠ ಕಾಲೇಜಿಗೆ 6.25 ಕೋಟಿ ಬಿಡುಗಡೆ- ಶಾಸಕ ಕಾಮತ್
ಮಂಗಳೂರಿನ ರಥಬೀದಿಯಲ್ಲಿರುವ ಡಾ|ಪಿ. ದಯಾನಂದ ಪೈ- ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 5.10 ಕೋಟಿ ಹಾಗೂ ಬಲ್ಮಠದಲ್ಲಿರುವ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ 6.25 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
2007-08 ರಲ್ಲಿ ಆರಂಭಗೊಂಡ ರಥಬೀದಿಯಲ್ಲಿರುವ ಡಾ|ಪಿ. ದಯಾನಂದ ಪೈ- ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 2070 ದಾಟಿರುವುದರಿಂದ ತರಗತಿ ಕೋಣೆ ರಚನೆಗೆ, ಶೌಚಾಲಯ, ಗ್ರಂಥಾಲಯ, ಆಡಿಟೋರಿಯಂ, ತೆರೆದ ಸಭಾಂಗಣ, ಸೆಮಿನಾರ್ ಭವನ ರಚಿಸಲು ಅಂದಾಜು 10 ಕೋಟಿ ರೂಪಾಯಿಗಳ ಅನುದಾನದ ಅಗತ್ಯತೆ ಇದೆ. ಈಗಿರುವ ನೂತನ ಕಟ್ಟಡದ ಮೇಲ್ಗಡೆ 3 ನೇ ಮತ್ತು 4 ನೇ ಅಂತಸ್ತನ್ನು ರಚಿಸಲು, ಪ್ರತ್ಯೇಕ ಸೆಮಿನಾರ್ ಹಾಲ್, ಆಡಿಯೋ ವಿಶ್ಯುವಲ್ ರೂಂ, 25 ತರಗತಿ ಕೋಣೆಗಳನ್ನು ರಚಿಸಲು ಅನುದಾನ ಬೇಕಾಗಿರುತ್ತದೆ. ಸದ್ಯ ಕಾಲೇಜು ಶಿಕ್ಷಣ ಇಲಾಖೆಯಿಂದ 5.10 ಕೋಟಿ ಬಿಡುಗಡೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಇದರ ಪ್ರಯೋಜನ ಅಲ್ಲಿ ಕಲಿಯುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಿಗಲಿದೆ ಎಂದು ಶಾಸಕ ಕಾಮತ್ ತಿಳಿಸಿದರು.
ಇನ್ನು ಬಲ್ಮಠದಲ್ಲಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಹೊಸ ಕಟ್ಟಡ ನಿರ್ಮಿಸಲು ಮೂರು ಕೋಟಿ, ಕೊಠಡಿಗಳ ರಚನೆಗೆ 1.25 ಕೋಟಿ, ಲ್ಯಾಬ್ ಗೆ 70 ಲಕ್ಷ, ಗ್ರಂಥಾಲಯ ಕಟ್ಟಡಕ್ಕೆ 60 ಲಕ್ಷ, ಶೌಚಾಲಯ ನಿರ್ಮಾಣಕ್ಕೆ 30 ಲಕ್ಷ, ಲೇಡಿಸ್ ವೇಟಿಂಗ್ ರೂಂಗೆ 30 ಲಕ್ಷ ರೂಪಾಯಿ ಬಿಡುಗಡೆಯಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಯೋಗ್ಯ ವಾತಾವರಣದಲ್ಲಿ ಉತ್ತಮ ಮೂಲಭೂತ ಸೌಕರ್ಯಗಳೊಂದಿಗೆ ವಿದ್ಯಾಭ್ಯಾಸ ಮಾಡುವಂತಹ ವಾತಾವರಣ ನಿರ್ಮಾಣ ಮಾಡುವುದು ತಮ್ಮ ಆಶಯ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.