ರಫೇಲ್ ಯುದ್ದ ವಿಮಾನ ಖರೀದಿ ಹಗರಣ ; ಜಂಟಿ ಸದನ ಸಮಿತಿ ತನಿಖೆಗೆ ವಿನಯ್ ಕುಮಾರ್ ಸೊರಕೆ ಆಗ್ರಹ
ಉಡುಪಿ: ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೇಂದ್ರ ಸರಕಾರದ ಬೆಲೆ ಏರಿಕೆ ಆಡಳಿತ ವೈಫಲ್ಯ, ಹಾಗೂ ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಹಗರಣ ವಿರುದ್ಧ ಸೋಮವಾರ ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆಯ ಎದುರಿನಿಂದ ಬೃಹತ್ ಜಾಥವನ್ನು ಸೋಮವಾರ ಹಮ್ಮಿಕೊಂಡಿತ್ತು.
ಈ ಸಂದರ್ಭ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಕೇಂದ್ರ ಸರಕಾರದ ಅತ್ಯಂತ ದೊಡ್ಡ ರಫೇಲ್ ಹಗರಣದ ಬಗ್ಗೆ ಜಾಗೃತಿಗಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಈ ಹಗರಣವನ್ನು ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿಗೆ ವಹಿಸಿಕೊಡಬೇಕೆಂಬ ಉದ್ದೇಶ ನಮ್ಮದಾಗಿದೆ.
ಮೋದಿ ಸರಕಾರ ಬಂದ ನಂತರ ವಿಪರೀತ ಬೆಲೆ ಆಗಿದೆ ಮುಂದಿನ ಕೆಲವೇ ದಿನಗಳಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ 100 ರುಪಾಯಿ ಆಗಲಿದೆ. ಅಡುಗೆ ಅನಿಲ ದರವೂ ಇನ್ನಿಲ್ಲದಂತೆ ಹೆಚ್ಚಾಗಿದೆ. ನಿನ್ನ ಏಕಾಏಕಿ 40 ರುಪಾಯಿ ಏರಿಕೆ ಕಂಡಿದೆ ಮೋದಿ ಸರಕಾರವು ಜನರಿಗೆ ಕೊಟ್ಟ ಆಶ್ವಾಸನೆ ಪೂರೈಸಿಲ್ಲ. 9 ಕೋಟಿ ಯುವಕರಿಗೆ ಉದ್ಯೋಗ ಕೊಡುವ ಭರವಸೆ ನೀಡಿದ್ದರೂ, ಯಾವುದೂ ಆಗಿಲ್ಲ. ಜಿಎಸ್ಟಿ, ಹಾಗೂ ನೋಟ್ ಬ್ಯಾನ್ ಸಮಸ್ಯೆಯಿಂದ ಜನರು ರೋಸಿ ಹೋಗಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಮುಂದಿಟ್ಟು ನಾವು ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಎ.ಕೆ.ಆ್ಯಂಟನಿ ರಕ್ಷಣಾ ಸಚಿವರಾಗಿದ್ದಾಗ ಮಿಲಿಟರಿ ಕ್ಷೇತ್ರ ಬಲಪಡಿಸಲು ಫ್ರಾನ್ಸ್ನ ರಫೆಲ್ ಕಂಪೆನಿ ಜತೆ ಯುದ್ಧವಿಮಾನ ಖರೀದಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆಗ ಒಂದು ವಿಮಾನದ ಬೆಲೆ ₹ 526 ಕೋಟಿ ಇತ್ತು. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ರಷ್ಯಾಗೆ ಭೇಟಿನಿಡಿದ ಬಳಿಕ, ಒಂದು ವಿಮಾನಕ್ಕೆ ₹ 1,570 ಕೋಟಿ ಕೊಟ್ಟು ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸೊರಕೆ ಆರೋಪಿಸಿದರು.
ಯುದ್ಧ ವಿಮಾನ ತಯಾರಿಕೆಯಲ್ಲಿ ಅನುಭವ ಇಲ್ಲದ ಅನಿಲ್ ಅಂಬಾನಿ ಮಾಲೀಕತ್ವದ ಕಂಪೆನಿಗೆ ಟೆಂಡರ್ ನೀಡಲಾಗಿದೆ. ರಕ್ಷಣಾ ಕ್ಷೇತ್ರದ ಭದ್ರತಾ ಸೂಕ್ಷ್ಮಗಳನ್ನು ಬದಿಗೊತ್ತಿ ಟೆಂಡರ್ ನೀಡಿರುವುದು ಖಂಡನೀಯ. ರಫೇಲ್ ಹಗರಣದಲ್ಲಿ ₹ 40 ಸಾವಿರ ಕೋಟಿ ಅಕ್ರಮ ನಡೆದಿದ್ದು, ಕೂಡಲೇ ಜಂಟಿ ಸದನ ಸಮಿತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದರು.
ರಾಜೀವ್ ಗಾಂಧಿ ಮೇಲೆ ಬೋಫೋರ್ಸ್ ಹಗರಣದ ಆರೋಪ ಹೊರಿಸಿದ ಬಿಜೆಪಿ, ಎಲ್ಲೆಡೆ ಅಪಪ್ರಚಾರ ನಡೆಸಿತು. ಈಗ ₹ 40,000 ಕೋಟಿ ಹಗರಣ ನಡೆದಿದ್ದರೂ ಪ್ರಧಾನಿ ಮೋದಿ ತುಟಿಬಿಚ್ಚುತ್ತಿಲ್ಲ ಎಂದರು.
ಮಾಜಿ ಶಾಸಕ ಗೋಪಾಲ ಭಂಡಾರಿ ಮಾತನಾಡಿದ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೀಡಿದ್ದ ಆಶ್ವಾಸನೆಗಳು ಈಡೇರಿಲ್ಲ. ಜನಧನ್ ಖಾತೆಗಳು ನಿಷ್ಕ್ರಿಯವಾಗಿವೆ. ಪೆಟ್ರೋಲ್ ಬೆಲೆ, ಗ್ಯಾಸ್ ಬೆಲೆ ಗಗನಕ್ಕೇರಿದೆ. ಯುಪಿಎ ಅವಧಿಯಲ್ಲಿ ಬ್ಯಾರೆಲ್ ಕಚ್ಚಾತೈಲ 140 ಡಾಲರ್ ಇತ್ತು. ಆಗ ₹ 70ಕ್ಕೆ ಪೆಟ್ರೋಲ್ ಪೂರೈಸಲಾಗುತ್ತಿತ್ತು. ಈಗ ಕಚ್ಚಾತೈಲ ಬೆಲೆ 50 ಡಾಲರ್ ಆಸುಪಾಸಿನಲ್ಲಿದ್ದರೂ ₹ 90 ತಲುಪಿದೆ ಎಂದು ಟೀಕಿಸಿದರು.
ನೋಟು ಅಮಾನ್ಯದಿಂದ ಕಪ್ಪುಹಣ ಸಿಗಲಿಲ್ಲ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ದೇಶದಲ್ಲಿ ಅತ್ಯಾಚಾರಗಳು ಹೆಚ್ಚಾಗಿವೆ. ಗಂಗಾ ಶುದ್ಧೀಕರಣಕ್ಕೆ ₹ 7 ಸಾವಿರ ಕೋಟಿ ಖರ್ಚು ಮಾಡಿದ್ದರೂ ಗಂಗಾ ನದಿ ಶುದ್ಧಿಯಾಗಿಲ್ಲ. ಮತ್ತಷ್ಟು ಮಲಿನವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಎಐಸಿಸಿ ಮುಖಂಡ ಅಮೃತ್ ಶೆಣೈ ಮಾತನಾಡಿ ನಾವು ಕಟ್ಟಿದ ಸಹಸ್ರಾರು ರುಪಾಯಿ ತೆರಿಗೆ ಹಣವನ್ನು ಬಿಜೆಪಿ ಸರಕಾರ ಲೂಟಿ ಮಾಡುತ್ತಿದೆ . ಕೇಂದ್ರ ಸರಕಾರದ ವಿರುದ್ಧ ಯಾಕೇ ಧ್ವನಿ ಎತ್ತಿದರೂ, ಅವರ ಧ್ವನಿಯನ್ನು ಅಡಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಅವರ ಮೇಲೆ ದೇಶ ದ್ರೋಹದ ಪ್ರಕರಣ ದಾಖಲಿಸಲಾಗುತ್ತಿದೆ. ಇನ್ ಕಂ ಟ್ಯಾಕ್ಸ್ ರೈಡ್ ಮಾಡಿ ಬಾಯಿಮುಚ್ಚಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದರು.
ಗ್ರಾಮ ಪಂಚಾಯತಿಯಲ್ಲಿ ಒಂದು ಸಣ್ಣ ವಸ್ತು ಖರೀದಿ ಮಾಡಿದರೂ, ಅದನ್ನು ಸಮಿತಿ ತೀರ್ಮಾನಿಸಬೇಕಿದೆ. ಆದರೆ ರಫೇಲ್ ಯುದ್ಧ ವಿಮಾನ ಖರೀದಿಯ ಸಂದರ್ಭ ಯರೊಬ್ಬರಲ್ಲಿಯೂ ಚರ್ಚಿಸಿದೆ ಆಕ್ರಮ ಎಸೆಯಲಾಗಿದೆ. ಸರಕಾರಿ ಸೌಮ್ಯದ ಎಚ್ಇಎಲ್ ಕಂಪನಿಗೆ ಗುತ್ತಿಗೆ ನೀಡಬೇಕಾಗಿದ್ದು, ಕೆಲವೇ ದಿನಗಳ ಹಿಂದೆ ನೊಂದಾಯಿಸಲ್ಪಟ್ಟ ಅನನುಭವಿ ರಿಲಯನ್ಸ್ ಸಂಸ್ಥೆಗೆ ನೀಡಲಾಗಿದೆ ಎಂದರು.
ಕೆಪಿಸಿಸಿ ಸದಸ್ಯೆ ವೆರೋನಿಕಾ ಕರ್ನೆಲಿಯೊ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ಧನ ತೋನ್ಸೆ, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ ಚಂದ್ರ ಶೆಟ್ಟಿ , ದೀಪಕ್ ಕುಮಾರ್ ಅಬ್ದುಲ್ ಅಜೀಜ್, ಕಾಪು ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಅಮೃತ್ ಶೆಟ್ಟಿ, ದೀಪಕ್ ಕುಮಾರ್ ವೈ ಸುಕುಮಾರ್ , ಯುವ ಕಾಂಗ್ರೆಸಿನ ಮೆಲ್ವಿನ್ ಡಿಸೋಜಾ, ಮಹೀಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ ಮತ್ತಿತರರು ಉಪಸ್ಥಿತರಿದ್ದರು.