ರವಿ ಬೆಳಗೆರೆಗೆ ಶಿಕ್ಷೆ: ಶಾಸಕಾಂಗ, ಕಾರ್ಯಾಂಗ ತಿಕ್ಕಾಟ
ಬೆಂಗಳೂರು(ಪ್ರಜಾವಾಣಿ ವಾರ್ತೆ) : ಪತ್ರಕರ್ತ ರವಿ ಬೆಳಗೆರೆ ಮತ್ತು ಅನಿಲ್‌ರಾಜ್ ಅವರಿಗೆ ಪ್ರಕಟಿಸಿರುವ ಶಿಕ್ಷೆ ಜಾರಿಗೊಳಿಸುವ ವಿಷಯದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗದ ಮಧ್ಯೆ ತಿಕ್ಕಾಟ ಆರಂಭಗೊಂಡಿದೆ.
ವಿಧಾನಸಭೆ ಹಕ್ಕುಬಾಧ್ಯತಾ ಸಮಿತಿ ಈ ಇಬ್ಬರೂ ಪತ್ರಕರ್ತರಿಗೆ 1 ವರ್ಷ ಜೈಲು ಮತ್ತು ₹ 10 ಸಾವಿರ ದಂಡ ಶಿಕ್ಷೆ ವಿಧಿಸಿದೆ. ಸಮಿತಿ ಆದೇಶವನ್ನು ತಕ್ಷಣ ಜಾರಿಗೊಳಿಸುವಂತೆ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಅವರಿಗೆ ವಿಧಾನಸಭೆ ಅಧ್ಯಕ್ಷ ಕೆ.ಬಿ. ಕೋಳಿವಾಡ ಈ ತಿಂಗಳ 22ರಂದು ಪತ್ರ ಬರೆದಿದ್ದರು.
ಆದರೆ, ಗೃಹ ಇಲಾಖೆ ವಿಧಾನಸಭಾ ಅಧ್ಯಕ್ಷರ ಆದೇಶವನ್ನು ಇದುವರೆಗೆ ಪಾಲಿಸಿಲ್ಲ. ಬೆಳಗೆರೆ ಅವರನ್ನು ಬಂಧಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌಖಿಕವಾಗಿ ಸೂಚನೆ ನೀಡಿರುವುದರಿಂದ ಅಧಿಕಾರಿಗಳು ತಟಸ್ಥ ನಿಲುವು ತಳೆದಿದ್ದಾರೆ. ಇದರಿಂದ ಕೋಳಿವಾಡ ಕೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಾಸಕಾಂಗ ವಿಧಿಸಿರುವ ಶಿಕ್ಷೆಯನ್ನು ಜಾರಿಗೊಳಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ತಕ್ಷಣವೇ ವಿಧಾನಸಭಾಧ್ಯಕ್ಷರಿಗೆ ವರದಿ ನೀಡಬೇಕು ಎಂದು ಸುಭಾಷ್‌ಚಂದ್ರ ಅವರಿಗೆ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಪತ್ರ ಬರೆದಿದ್ದಾರೆ. ‘ಶಾಸಕಾಂಗದ ಆದೇಶ ಪಾಲನೆ ಬಗ್ಗೆ ಬುಧವಾರ ಖುದ್ದಾಗಿ ಹಾಜರಾಗಿ ವರದಿ ನೀಡಬೇಕು. ಇಬ್ಬರುಪತ್ರಕರ್ತರನ್ನು ಯಾವ ಕಾರಣಕ್ಕೆ ಬಂಧಿಸಿಲ್ಲ ಎಂಬ ಕಾರಣ ನೀಡಬೇಕು’ ಎಂದಿದ್ದಾರೆ.
ಶಿಕ್ಷೆ ಆಗಲೇಬೇಕು: ‘ರವಿ ಬೆಳಗೆರೆ ಮತ್ತು ಅನಿಲ್‌ರಾಜ್ ಅವರನ್ನು ಬಂಧಿಸಬೇಕು ಎಂಬ ಶಾಸಕಾಂಗದ ಸೂಚನೆ ಅನುಷ್ಠಾನ ಮಾಡಿಲ್ಲ. ರವಿ ಬೆಳಗೆರೆ ವಿಧಾನ ಸಭಾಧ್ಯಕ್ಷರಿಗೆ ಸವಾಲು ಹಾಕುವಂತೆ ಮಾತನಾಡುತ್ತಿದ್ದಾರೆ. ಇದರಿಂದ ಶಾಸಕಾಂಗ ಗೌರವಕ್ಕೆ ಚ್ಯುತಿ ಬಂದಿದೆ’ ಎಂದು ಮೂಲಗಳು ತಿಳಿಸಿವೆ.
ಅಧಿವೇಶನ ಕರೆಯಬಹುದು: ಈ ಮಧ್ಯೆ, ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಕೋಳಿವಾಡ, ‘ಪತ್ರಕರ್ತರಿಗೆ ಶಿಕ್ಷೆ ಕೊಟ್ಟಿರುವ ವಿಷಯ ಕುರಿತು ಚರ್ಚಿಸಲು ಮುಖ್ಯಮಂತ್ರಿ ಮತ್ತು ವಿರೋಧಪಕ್ಷದ ನಾಯಕರು ಬಯಸಿದರೆ ಒಂದು ದಿನದ ಅಧಿವೇಶನ ಕರೆಯಲು ಸಿದ್ಧ’ ಎಂದರು.
‘ಹಕ್ಕು ಬಾಧ್ಯತಾ ಸಮಿತಿಯ ಶಿಫಾರಸು ಒಪ್ಪುವ ನಿರ್ಣಯವನ್ನು ತೆಗೆದುಕೊಂಡಿದ್ದು ಸದನ. ಮುಂದೆ ಏನು ಮಾಡಬೇಕು ಎಂದು ಸದನವೇ ನಿರ್ಣಯ ಕೈಗೊಳ್ಳಬೇಕು. ನಾನು ಏಕಾಂಗಿಯಾಗಿ ಯಾವುದೇ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.
ವಿವಿಧ ಪಕ್ಷಗಳ ಮುಖಂಡರು ಶಿಕ್ಷೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಮನವಿ ಪತ್ರ ನೀಡಿರುವುದು ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗೆ ಹೊರಟ್ಟಿ ಪತ್ರ: ಹಕ್ಕು ಬಾಧ್ಯತಾ ಸಮಿತಿ ವರದಿಯ ಆಧಾರದಲ್ಲಿ ರವಿ ಬೆಳಗೆರೆ ಮತ್ತು ಅನಿಲ್‌ರಾಜು ಅವರನ್ನು ಬಂಧಿಸಲು ಆದೇಶ ಮಾಡಿರುವುದನ್ನು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಖಂಡಿಸಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ.
ಹೈಕೋರ್ಟ್ ಮೊರೆ ಹೋದ ಬೆಳಗೆರೆ
ವಿಧಾನಸಭೆಯ ಹಕ್ಕುಚ್ಯುತಿ ಆರೋಪಕ್ಕೆ ಸಂಬಂಧಿಸಿದಂತೆ ಹಕ್ಕು ಬಾಧ್ಯತೆಗಳ ಸಮಿತಿ ವಿಧಿಸಿರುವ ಒಂದು ವರ್ಷದ ಕಠಿಣ ಜೈಲು ಶಿಕ್ಷೆ ಮತ್ತು ₹ 10 ಸಾವಿರ ದಂಡ ರದ್ದುಗೊಳಿಸುವಂತೆ ಕೋರಿ ಪತ್ರಕರ್ತ ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಕುರಿತ ಅರ್ಜಿಯನ್ನು ವಕೀಲ ಶಂಕರಪ್ಪ ಅವರು ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಮಂಗಳವಾರ ಮಧ್ಯಾಹ್ನ ಸಲ್ಲಿಸಿದರು.
‘ಅರ್ಜಿದಾರ ರವಿ ಬೆಳಗೆರೆ ಗಂಭೀರವಾದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಅರ್ಜಿ ವಿಚಾರಣೆ ತುರ್ತಾಗಿ ನಡೆಯಬೇಕಿದೆ’ ಎಂದು ಕೋರಿದರು.
ಕಿಮ್ಸ್‌ಗೆ ಬೆಳಗೆರೆ ದಾಖಲು
ಹುಬ್ಬಳ್ಳಿ: ಪೊಲೀಸರ ಕಣ್ತಪ್ಪಿಸಿ ಹೋಗಿದ್ದ ‘ಹಾಯ್ ಬೆಂಗಳೂರು’ ಪತ್ರಿಕೆ ಸಂಪಾದಕ ರವಿ ಬೆಳಗೆರೆ ಸೋಮವಾರ ಮಧ್ಯರಾತ್ರಿ ಇಲ್ಲಿನ ಕಿಮ್ಸ್ ಆಸ್‍ಪತ್ರೆಗೆ ದಾಖಲಾದರು.
‘ಅವರಿಗೆ ಎದೆನೋವು ಕಾಣಿಸಿ ಕೊಂಡಿತ್ತು. ಅಲ್ಲದೆ, ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿರುವುದರಿಂದ ಆರೋಗ್ಯದಲ್ಲಿ ಏರುಪೇರಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಕಿಮ್ಸ್‌ನ ವೈದ್ಯಕೀಯ ಸೂಪರಿಂಟೆಂಡೆಂಟ್ ಶಿವಪ್ಪ ಆನುರಶೆಟ್ರು ‘ಪ್ರಜಾವಾಣಿ’ಗೆ ತಿಳಿಸಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಚಲನಚಿತ್ರ ನಟ ಪ್ರಕಾಶ ರೈ ಆಸ್ಪತ್ರೆಯಲ್ಲಿ ಬೆಳಗೆರೆ ಆರೋಗ್ಯ ವಿಚಾರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್, ‘ವಿಧಾನಸಭೆ ಹಕ್ಕು ಬಾಧ್ಯತೆ ಸಮಿತಿಯ ತೀರ್ಪನ್ನು ಸ್ಪೀಕರ್ ಪುನರ್ ಪರಿಶೀಲಿಸಿ, ವಾಪಸ್ ತೆಗೆದುಕೊಳ್ಳಬೇಕು. ಮಾತುಕತೆ ಮೂಲಕ ಪ್ರಕರಣವನ್ನು ಮುಕ್ತಾಯಗೊಳಿಸಬೇಕು’ ಎಂದರು.
ಪ್ರಕರಣ ದಾಖಲು: ವಿಧಾನಸಭಾ ಹಕ್ಕು ಬಾಧ್ಯತೆ ಸಮಿತಿಯಿಂದ ಶಿಕ್ಷೆಗೆ ಒಳಗಾಗಿರುವ ಬೆಳಗೆರೆ ಅವರನ್ನು ವಶಕ್ಕೆ ಪಡೆಯಲು ಎಸ್‌ಡಿಎಂ ಆಸ್ಪತ್ರೆಗೆ ಹೋಗಿ ದ್ದಾಗ ಬೆಳಗೆರೆ ಅವರ ಪುತ್ರ ಕರ್ಣ ಹಾಗೂ ಅವರ ಸಹಚರರು ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂದು ಆರೋಪಿಸಿ ಧಾರವಾಡದ ವಿದ್ಯಾಗಿರಿ ಪೊಲೀಸರಿಗೆ ಬೆಂಗಳೂರಿನ ಸುಬ್ರಹ್ಮಣ್ಯಪುರ ಠಾಣೆ ಸಬ್‌ಇನ್‌ಸ್ಪೆಕ್ಟರ್ ವಜ್ರಮುನಿ ದೂರು ನೀಡಿದ್ದರು.
ಕರ್ಣ ಅವರನ್ನು ಬಂಧಿಸಿದ ಪೊಲೀಸರು, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.