ರಸ್ತೆಯಲ್ಲಿ ಹರಿದ ಒಳಚರಂಡಿ ಎಣ್ಣೆ ಮಿಶ್ರಿತ ತ್ಯಾಜ್ಯ; ಬಿದ್ದು ಗಾಯಗೊಂಡ ವಾಹನ ಸವಾರರು
ಮಂಗಳೂರು: ಒಳಚರಂಡಿಯಲ್ಲಿ ಹರಿಯುತ್ತಿದ್ದ ಎಣ್ಣೆ ಮಿಶ್ರಿತ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿದ ಪರಿಣಾಮವಾಗಿ ಹಲವಾರು ಬೈಕ್ ಸವಾರರು ಸ್ಕಿಡ್ಡಾಗಿ ಬಿದ್ದು ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಬಲ್ಮಠ ರಸ್ತೆಯ ಬಳಿ ಎಣ್ಣೆ ಮಿಶ್ರಿತ ನೀರು ರಸ್ತೆಯಲ್ಲಿ ಹರಿಯುವುದನ್ನು ಗಮನಿಸಿದಾಗ ಮೊದಲು ರಕ್ತವೆಂದು ಭಾವಿಸಿದ್ದೇವು ಹತ್ತಿರ ಬಂದು ನೋಡಿದಾಗ ಅದು ಒಳಚರಂಡಿಯ ಕೊಳೆಯಲ್ಲಿ ಮಿಶ್ರಿತವಾದ ಎಣ್ಣೆ ಮಿಶ್ರಿತ ತ್ಯಾಜ್ಯ ಎಂದು ತಿಳಿಯಿತು. ಅದಾಗಲೇ ಹಲವಾರು ಬೈಕ್ ಸವಾರರು ನಿಯಂತ್ರಣ ಕಳೆದುಕೊಂಡು ಬಿದ್ದು ಗಾಯಗೊಂಡಿದ್ದರು. ಇದರಿಂದ ಬಲ್ಮಠ ರಸ್ತೆಯ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿತು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಟ್ರಾಫಿಕ್ ಪೋಲಿಸರು ಸಂಚಾರ ವ್ಯವಸ್ಥೆಯಲ್ಲಿ ಬದಲಿ ವ್ಯವಸ್ಥೆಯನ್ನು ಮಾಡಿದರು. ಅದೇ ವೇಳೆ ಸ್ಥಳಕ್ಕೆ ಮನಾಪ ಮೇಯರ್ ಕವೀತಾ ಸನೀಲ್ ಕೂಡ ಸ್ಥಳಕ್ಕೆ ಆಗಮಿಸಿ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚನೆ ನೀಡಿದರು. ಹೋಟೆಲುಗಳಲ್ಲಿ ಉಪಯೋಗಿಸುವ ಎಣ್ಣೆ ಮಿಶ್ರಿತ ತ್ಯಾಜ್ಯಗಳಿಂದ ಇಂತಹ ಸಮಸ್ಯೆ ಉಂಟಾಗಿದೆ ಎನ್ನಲಾಗುತ್ತಿದೆ.
ಈ ಕುರಿತು ಮಾತನಾಡಿದ ಮೇಯರ್ ಕವಿತಾ ಸನೀಲ್ ನನಗೆ ಮಾಹಿತಿ ಲಭಿಸಿದ ಕೂಡಲೇ ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಪರಿಹರಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೋಟೇಲುಗಳಲ್ಲಿ ಉಪಯೋಗಿಸುವ ಎಣ್ಣೆಯ ಅಂಶವನ್ನು ಚರಂಡಿಗೆ ಬಿಡುವುದರಿಂದ ಅದು ನೀರಿನಲ್ಲಿ ಕೂಡಲೇ ಸೇರದ ಕಾರಣ ರಸ್ತೆಯಲ್ಲಿ ಹರಿದಿದೆ, ನಾನು ಈಗಾಗಲೇ ಹೋಟೆಲ್ ಮ್ಹಾಲಿಕರಿಗೆ ಈ ಕುರಿತು ಎಚ್ಚರಿಕೆ ನೋಟಿಸ್ ನೀಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.