Home Mangalorean News Kannada News ರಸ್ತೆ ಸುರಕ್ಷತೆ ಬಗ್ಗೆ ಪ್ರತೀ ತಿಂಗಳು ಸಭೆ: ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ

ರಸ್ತೆ ಸುರಕ್ಷತೆ ಬಗ್ಗೆ ಪ್ರತೀ ತಿಂಗಳು ಸಭೆ: ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ

Spread the love

ರಸ್ತೆ ಸುರಕ್ಷತೆ ಬಗ್ಗೆ ಪ್ರತೀ ತಿಂಗಳು ಸಭೆ: ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ

ಉಡುಪಿ: ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 130 ಅಪಘಾತಗಳು ಸಂಭವಿಸಿದ್ದು, ಜಿಲ್ಲೆಯಲ್ಲಿ ಅಪಘಾತಗಳ ಪ್ರಮಾಣವನ್ನು ತಗ್ಗಿಸುವ ಮತ್ತು ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಮತ್ತು ಈ ಕಾರ್ಯಕ್ರಮಗಳ ಪ್ರಗತಿ ಕುರಿತು ಪ್ರತೀ ತಿಂಗಳು ಸಭೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚನೆ ನೀಡಿದರು.

ಅವರು ಬುದವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ನಡೆಯುವ ಪ್ರತಿಯೊಂದು ಅಪಘಾತಗಳ ಬಗ್ಗೆ ಆಯಾ ವ್ಯಾಪ್ತಿಗೆ ಸಂಬಂಧಪಟ್ಟ ಇಲಾಖೆಯವರಿಗೆ ಸ್ಪಷ್ಟ ಮಾಹಿತಿ ಇರಬೇಕು ಎಂದ ಅವರು, ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ನಡೆದಿರುವ ಅಪಘಾತಗಳ ಮಾಹಿತಿಯನ್ನು ತಾಲೂಕು ಮಟ್ಟದಲ್ಲಿ ತಿಂಗಳ ಆಧಾರದಲ್ಲಿ ಎಷ್ಟು ಅಪಘಾತಗಳು ನಡೆದಿದೆ ಮತ್ತು ಅಪಘಾತದ ಸಂಪೂರ್ಣ ಮಾಹಿತಿ ನೀಡುವಂತೆ ತಿಳಿಸಿದರು.

ಅಪಘಾತ ಪ್ರಮಾಣವನ್ನು ತಗ್ಗಿಸುವ ಸಲುವಾಗಿ ಇಲಾಖೆ ವತಿಯಿಂದ ಈಗಾಗಲೇ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಿದ ಅವರು, ಇನ್ನು ಒಂದು ತಿಂಗಳಲ್ಲಿ ಜಿಲ್ಲೆಯ ಶಾಲೆಗಳ ಆವರಣ ಗೋಡೆಗಳಲ್ಲಿ ಚಿತ್ರಕಲಾ ಶಿಕ್ಷಕರ ಮಾರ್ಗದರ್ಶನದಲ್ಲಿ, ವಿದ್ಯಾರ್ಥಿಗಳಿಂದ ರಸ್ತೆ ಸುರಕ್ಷತಾ ಜಾಗೃತಿ ಮೂಡಿಸುವ ಚಿತ್ರಗಳನ್ನು ಬಿಡಿಸುವ ಸ್ಪರ್ಧೆ ನಡೆಸುವಂತೆ ಸೂಚಿಸಬೇಕು. ಹಾಗೂ ಈ ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತಂದಿರುವ ಶಾಲೆಗಳ ಬಗ್ಗೆ ಆಗಸ್ಟ್ ಮೊದಲ ವಾರದಲ್ಲಿ ಮಾಹಿತಿ ನೀಡಬೇಕು. ಚಿತ್ರ ಬಿಡಿಸಿರುವ ಶಾಲೆಯ ಚಿತ್ರಕಲಾ ಶಿಕ್ಷಕರಿಗೆ ಆಗಸ್ಟ್ 15 ರಂದು ನಡೆಯುವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು. ಹಾಗೂ ಖಾಸಗಿ ಶಾಲೆಗಳು ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಸ್ವಇಚ್ಚೆಯಿಂದ ರಸ್ತೆ ಸುರಕ್ಷತೆಗೆ ಸಂಬಂಧಿಸಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದಲ್ಲಿ ಅಂತಹ ಶಾಲಾ ಶಿಕ್ಷಕರನ್ನು ಗುರುತಿಸಿ ಗೌರವಿಸಲಾಗುವುದು ಎಂದರು.

ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಶಾಲೆಯ ವಾಹನ ಚಾಲಕರು ಮತ್ತು ಮಾಲಕರಿಗೆ ಜಾಗೃತಿ ಮೂಡಿಸಬೇಕು. ಶಾಲಾ ವಾಹನ, ಆಟೋಗಳಲ್ಲಿ ನಿಗದಿತ ಸಂಖ್ಯೆಗಿಂತ ಅಧಿಕ ಮಕ್ಕಳನ್ನು ಕರೆದೊಯ್ಯುವ ಶಾಲಾ ವಾಹನಗಳ ನಂಬರ್, ಚಾಲಕರು, ಮಾಲಕರ ಬಗ್ಗೆ ಆಯಾ ಶಾಲೆಯ ಮುಖ್ಯೋಪಾದ್ಯಾಯರು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು.ಹಾಗೂ ವಾಹನ ಯಾವರಸ್ತೆಯಿಂದ ಸಾಗುತ್ತದೆ, ಬಸ್ಸಿನಲ್ಲಿ ಪ್ರಯಾಣಿಸುವ ಮಕ್ಕಳು ಹಾಗೂ ಆ ಮಕ್ಕಳ ಪಾಲಕರ ಬಗ್ಗೆ ಶಾಲಾ ಆಡಳಿತ ಮಂಡಳಿ ಮಾಹಿತಿಯನ್ನು ಹೊಂದಿರಬೇಕುಎಂದರು.

ಪ್ರತೀಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ನಾಲ್ಕು ಶಾಲೆಗಳಲ್ಲಿ ಪ್ರತೀ ಶನಿವಾರದಂದು ರಸ್ತೆ ಸುರಕ್ಷತಾ ಜಾಗೃತಿಗೆ ಸಂಬಂಧಿಸಿದ ಒಂದೊಂದು ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಮತ್ತು ಎಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂಬ ಕುರಿತು ವರದಿ ನೀಡಬೇಕುಎಂದರು.

ವಿದ್ಯಾರ್ಥಿಗಳು ಪರವಾನಿಗೆ ಹೊಂದಿಲ್ಲದೇ ವಾಹನ ಚಲಾಯಿಸುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವ ಸಲುವಾಗಿ ಜಿಲ್ಲೆಯಲ್ಲಿರುವ 104 ಪಿಯು ಕಾಲೇಜುಗಳನ್ನು ಮೂರು ಗುಂಪುಗಳನ್ನಾಗಿ ಮಾಡಿ , ಓರ್ವ ಮೇಲ್ವಿಚಾರಕನನ್ನು ನೇಮಿಸಿ, ಅವರ ಮೂಲಕ ಕಾಲೇಜು ಆವರಣದೊಳಗೆ ಎಷ್ಟು ಬೈಕ್ಗಳು ಬರುತ್ತಿವೆ ಎಂಬುದನ್ನು ಪರಿಶೀಲಿಸಿ, ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಬೇಕು ಎಂದರು. ಇದಕ್ಕೆ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಪರವಾನಿಗೆ ಇರದೇ ವಾಹನ ಚಲಾಯಿಸುವವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತಿದ್ದು, ವಿದ್ಯಾರ್ಥಿಗಳು ಕಾಲೇಜು ಆವರಣದೊಳಗೆ ಬೈಕ್ ತರುವುದನ್ನು ಕಾಲೇಜು ಆಡಳಿತ ಮಂಡಳಿ ನಿಯಂತ್ರಿಸಿದ್ದಲ್ಲಿ 30 ಶೇ.ರಷ್ಟು ಪ್ರಕರಣವನ್ನು ತಡೆಯಬಹುದು ಎಂದರು.

ಜಿಲ್ಲೆಯಲ್ಲಿ ಹಲವೆಡೆ ಬಸ್ಸ್ಟಾಂಡ್ ಇದ್ದಾಗ್ಯೂ ಇತರೆಡೆಗಳಲ್ಲಿ ಬಸ್ ನಿಲ್ಲಿಸುತ್ತಿರುವುದರಿಂದ ಸಮಸ್ಯೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಬಸ್ಸ್ಟಾಂಡ್ ಹೊರತುಪಡಿಸಿ ಬೇರೆಲ್ಲಿಯೂ ಬಸ್ಗಳನ್ನು ನಿಲ್ಲಿಸಬಾರದು, ಆರ್ಟಿಓ, ಪೊಲೀಸ್, ಸ್ಥಳೀಯ ಸಂಸ್ಥೆಗಳ ಜೊತೆಗೂಡಿ ಈ ಬಗ್ಗೆ ಕಾರ್ಯಚರಿಸುವಂತೆ ಸೂಚನೆ ನೀಡಿದರು.

ಪ್ರತೀ ತಿಂಗಳು ರಸ್ತೆ ಸುರಕ್ಷತೆಗೆ ಸಂಬಂಧಿಸಿ ಕಾರ್ಯಕ್ರಮ ನಡೆಸುವುವಂತೆ ಸೂಚಿಸಿದ ಅವರು, ಮುಂದಿನ ದಿನಗಳಲ್ಲಿ ಚಿತ್ರ ಕಲೆ, ಯಕ್ಷಗಾನ, ಸಾಕ್ಷ್ಯಚಿತ್ರ(ಡಾಕ್ಯುಮೆಂಟರಿ) ಇನ್ನಿತರ ಕಾರ್ಯಕ್ರಮಗಳನ್ನು ಕ್ರಿಯಾತ್ಮಕವಾಗಿ ನಡೆಸುವಂತೆ ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಶಾ ಜೇಮ್ಸ್ ಮಾತನಾಡಿ, ರಸ್ತೆ ಸುರಕ್ಷತಾ ನಿಧಿಯಲ್ಲಿ 8.33 ಲಕ್ಷ ಅನುದಾನ ಇದ್ದು, ಅಗತ್ಯವಿರುವ ರಸ್ತೆ ಸುರಕ್ಷತಾ ಸಾಧನಗಳ ಖರೀದಿಗೆ ಬಳಸಿಕೊಳ್ಳುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿನ 108 ಆಂಬುಲೆನ್ಸ್ ನಲ್ಲಿರುವ ವ್ಯವಸ್ಥೆ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿ ಮಾಹಿತಿ ನೀಡಿ, ಜಿಲ್ಲೆಯಲ್ಲಿರುವ 18 ಆಂಬುಲೆನ್ಸ್(108)ನಲ್ಲಿ ತುರ್ತು ಸಂದರ್ಭದಲ್ಲಿ ಅಗತ್ಯವಿರುವ ಎಲ್ಲಾ ರೀತಿಯ ವ್ಯವಸ್ಥೆಗಳು ಇರುವ ಬಗ್ಗೆ ಪರಿಶೀಲಿಸಲಾಗಿದೆ ಎಂದರು.

ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version