ರಾಜಕೀಯ ಕೆಸರೆರೆಚಾಟದಲ್ಲಿ ರಾಜ್ಯದ ಜನ ಸಮುದಾಯ ಕಂಗಾಲು- ಮನೋಜ್ ವಾಮಂಜೂರು

Spread the love

ರಾಜಕೀಯ ಕೆಸರೆರೆಚಾಟದಲ್ಲಿ ರಾಜ್ಯದ ಜನ ಸಮುದಾಯ ಕಂಗಾಲು- ಮನೋಜ್ ವಾಮಂಜೂರು

ನಮ್ಮ ಕರ್ನಾಟಕ ರಾಜ್ಯದ ರಾಜಕೀಯ ವಿದ್ಯಾಮಾನಗಳು, ಪರಸ್ಪರ ಕೆಸರೆರೆಚಾಟಗಳನ್ನು ನೋಡಿದರೆ ಅಸಹ್ಯ ಉಂಟುಮಾಡುತ್ತಿದೆ. ಇಲ್ಲಿ ರಾಜ್ಯದ ಜನತೆ ತಮ್ಮನ್ನು ಕಾಡುವ ಹಲವು ಗಂಭೀರ ಸಮಸ್ಯೆಗಳಿಗೆ ಒಳಗಾಗಿ ಪೆಚಾಡುತ್ತಿದ್ದಾರೆ . ಯುವಜನ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ನಿವೇಶನ ರಹಿತರು ಸ್ವಂತ ಸೂರಿಲ್ಲದೆ ಕಂಗಾಲಾಗಿದ್ದಾರೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿದೆ ಇನ್ನು ಹಲವು ಸಮಸ್ಯೆಗಳಿಗೆ ಒಳಗಾಗಿ ಜನ ಇಂದು ಕಷ್ಟಪಡುತ್ತಿದ್ದಾರೆ. ಜನರ ಈ ಎಲ್ಲಾ ಸಮಸ್ಯೆಗಳಿಗೆ ಸ್ಪಂಧಿಸಬೇಕಾಗಿದ್ದ ಜನಪ್ರತಿನಿಧಿಗಳಿಗೆ ಅದ್ಯಾವುದರ ಚಿಂತೆಯೇ ಇಲ್ಲದೆ ಅಧಿಕಾರದ ಆಸೆಗಾಗಿ ರೆಸಾರ್ಟ್ ರಾಜಕಾರಣ, ಶಾಸಕರುಗಳ ಖರೀದಿಯ ಕಿತ್ತಾಟದಲ್ಲೇ ಇರೋದರಿಂದ ಇಲ್ಲಿ ರಾಜ್ಯದ ಜನ ಸಂಪೂರ್ಣವಾಗಿ ಕಂಗಾಲಾಗಿದ್ದಾರೆ ಎಂದು ಡಿವೈಎಫ್ಐ ನ ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು ಇಂದು ಬಜಾಲ್ ಪಕ್ಕಲಡ್ಕ ಘಟಕದ ಯುವಜನ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಮುಂದೆ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡುತ್ತಾ ರಾಜ್ಯವನ್ನು ಕಾಡುವ ಸಮಸ್ಯೆ ನಮ್ಮ ಜಿಲ್ಲೆಗೂ ಹೊರತಾಗಿಲ್ಲ. ರಾಜ್ಯದ ಬಹುಮುಖ್ಯ ಪ್ರಶ್ನೆಯಲ್ಲೊಂದರಾದ ಉದ್ಯೋಗ ‌ಇಂದು ತುಳುನಾಡಿನ ಯುವಜನರನ್ನು ಕೂಡ ನೇರವಾಗಿ ಬಾಧಿಸುತ್ತಿದೆ. ಉತ್ತಮ ಶಿಕ್ಷಣ ಪಡೆದ ಜಿಲ್ಲೆಯ ಯುವಜನರು ಇವತ್ತು ಉದ್ಯೋಗವನ್ನರಸಿ ವಿದೇಶಗಳಿಗೆ ವಲಸೆ ಹೋಗಿ ಅತಂತ್ರರಾಗಿದ್ದಾರೆ. ವಿದೇಶದಲ್ಲಿ ಸಮಸ್ಯೆಗೊಳಗಾದ ಕೆಲವೊಂದು ಯುವಜನರನ್ನು ಊರಿಗೆ ಮರಳಿಸಲು ಸಹಾಯ ಮಾಡಿರುವುದೋ ದೊಡ್ಡ ಸಾಧನೆಯೆಂದು ಬೀರುವ ಜಿಲ್ಲೆಯ ಶಾಸಕರು, ಸಂಸದರು ಜಿಲ್ಲೆಯಲ್ಲಿ ಖಾಲಿ ಇರುವ ಸರಕಾರಿ ಉದ್ಯೋಗಗಳನ್ನು ಭರ್ತಿಗೊಳಿಸುವುದಕ್ಕಾಗಲಿ ಅಥವಾ ಜಿಲ್ಲೆಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೂ ಉದ್ಯೋಗ ನೀಡುವ ವಿಚಾರಗಳಿಗೆ ಈವರೆಗೂ ಗಮನವೇ ಹರಿಸದೇ ಇರೋದು ಈ ಜಿಲ್ಲೆಯ ದುರಂತ. ಈ ಹಿನ್ನಲೆಯಲ್ಲಿ ಡಿವೈಎಫ್ಐ ಉದ್ಯೋಗ ಸೃಷ್ಟಿಸಿ ನಿರುದ್ಯೋಗದಿಂದ ರಕ್ಷಿಸಿ ಘೋಷಣೆಯಡಿಯಲ್ಲಿ ಸಮ್ಮೇಳವನ್ನು ಆಯೋಜಿಸುತ್ತಿವೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಖಾಲಿ ಇರುವ ಸರಕಾರಿ ಉದ್ಯೋಗಗಳನ್ನು ಭರ್ತಿ ಮಾಡಲು ಹೋರಾಟಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದೆ ಇಂತಹ ಉದ್ಯೋಗದ ಹಕ್ಕಿಗಾಗಿ ನಡೆಯುವ ಹೋರಾಟದಲ್ಲಿ ಜಿಲ್ಲೆಯ ಯುವಜನತೆ ಒಂದಾಗಬೇಕೆಂದು ಕರೆನೀಡಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ಡಿವೈಎಫ್ಐ ಜಿಲ್ಲಾ ಮುಖಂಡರಾದ ರಿಯಾಜ್ ಮೂಡಬಿದ್ರೆ, ಮಾಜಿ ಜಿಲ್ಲಾ ಮುಖಂಡ ದೀಪಕ್ ಬೊಲ್ಲ ಉಪಸ್ಥಿತರಿದ್ದರು. ಸಭೆಯ ಅದ್ಯಕ್ಷತೆಯನ್ನು ಪ್ರಿತೇಶ್ ಬಜಾಲ್ ವಹಿಸಿದ್ದರು. ಕಾರ್ಯಕ್ರಮವನ್ನು ಹರಿಹರನ್ ಸ್ವಾಗತಿಸಿ ಪ್ರಕಾಶ್ ವಂದಿಸಿ ದೀರಾಜ್ ಪಕ್ಕಲಡ್ಕ ನಿರೂಪಿಸಿದರು.


Spread the love