ರಾಜಸ್ಥಾನದ ಕಂಪೆನಿಯಿಂದ ಹೆಬ್ರಿ ಗೇರುಬೀಜ ಫ್ಯಾಕ್ಟರಿಗಳಿಗೆ 37 ಲಕ್ಷ ರೂ. ವಂಚನೆ: ಪ್ರಕರಣ ದಾಖಲು
ಹೆಬ್ರಿ: ರಾಜಸ್ಥಾನದ ಕಂಪೆನಿಯೊಂದು ಹೆಬ್ರಿಯ ಫ್ಯಾಕ್ಟರಿಗಳಿಂದ ಗೇರು ಬೀಜ ತಿರುಳನ್ನು ಖರೀದಿಸಿ ಹಣ ನೀಡದೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವ ಪ್ರಸಾದ್ ಎಂ. ಎಂಬವರ ಪಾಲುದಾರಿಕೆಯಲ್ಲಿರುವ ಶಿವಪುರ ಗ್ರಾಮದ ಗೇರು ಬೀಜ ತಿರುಳು ತಯಾರಿಸಿ ಮಾರಾಟ ಮಾಡುವ ಘಟಕ ದಿಂದ ರಾಜಸ್ಥಾನ ಮೂಲದ ಕಂಪೆನಿಯ ರವಿ ಲಾಲ್ವಾನಿ, ಗೋಪಾಲ ಲಾಲ್ವಾನಿ, ಮೋಹನ್ ಲಾಲ್ವಾನಿ, ಕನ್ನಯ್ಯ ಲಾಲ್ವಾನಿ ಎಂಬವರು ಒಟ್ಟು 31,73,100ರೂ. ಮೌಲ್ಯದ ಗೇರು ಬೀಜ ತಿರುಳನ್ನು ಪಡೆದು, ಹಣವನ್ನು ನೀಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.
ಅದೇ ರೀತಿ ಇದೇ ಆರೋಪಿಗಳು, ಅನಂತ ಪದ್ಮನಾಭ ಎಂಬವರ ಪಾಲುದಾರಿಕೆಯ ಮುದ್ರಾಡಿಯಲ್ಲಿರುವ ಘಟಕದಿಂದ ಒಟ್ಟು 5,82,540ರೂ. ಮೌಲ್ಯದ ಗೇರು ಬೀಜ ತಿರುಳನ್ನು ಪಡೆದು ಹಣವನ್ನು ನೀಡದೆ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.